ರಾಜ್ಯದ ಗಮನ ಸೆಳೆದ ಉಳ್ಳಾಲದ ಬ್ಯಾಂಕ್‌ ದರೋಡೆ ಸುಖಾಂತ್ಯ: 18.67 ಕೆಜಿ ಚಿನ್ನಾಭರಣ ವಶ

KannadaprabhaNewsNetwork | Updated : Jan 28 2025, 07:40 AM IST

ಸಾರಾಂಶ

ರಾಜ್ಯದ ಗಮನ ಸೆಳೆದ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಲೂಟಿಯಾದ ಒಟ್ಟು 18.67 ಕೆಜಿ ಚಿನ್ನಾಭರಣಗಳ ಪೈಕಿ 18.314 ಕೆಜಿ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆಯುವುದರೊಂದಿಗೆ ಬಹುತೇಕ ಚಿನ್ನಾಭರಣ ಮರಳಿದೆ.

 ಮಂಗಳೂರು : ರಾಜ್ಯದ ಗಮನ ಸೆಳೆದ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಲೂಟಿಯಾದ ಒಟ್ಟು 18.67 ಕೆಜಿ ಚಿನ್ನಾಭರಣಗಳ ಪೈಕಿ 18.314 ಕೆಜಿ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆಯುವುದರೊಂದಿಗೆ ಬಹುತೇಕ ಚಿನ್ನಾಭರಣ ಮರಳಿದ್ದು, ಬ್ಯಾಂಕಿನ 1600ರಷ್ಟು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಲೂಟಿ ಮಾಡಿದ 11,67,044 ರು. ನಗದು ಪೈಕಿ 3,80,500 ರು. ಜಫ್ತು ಮಾಡಲಾಗಿದೆ.ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪ್ರಮುಖ ಆರೋಪಿಗಳಿಗೆ ಬ್ಯಾಂಕಿನ ಕುರಿತು ಮಾಹಿತಿ ಮತ್ತು ಸಹಕಾರ ನೀಡಿದ ಸ್ಥಳೀಯ ವ್ಯಕ್ತಿ ಸೇರಿದಂತೆ ಇನ್ನೂ ನಾಲ್ವರು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ. ಎಲ್ಲ ಆರೋಪಿಗಳ ಬಂಧನದ ಬಳಿಕವಷ್ಟೇ ಉಳಿದ ಕೇವಲ 200 ಗ್ರಾಂನಷ್ಟು ಚಿನ್ನ ಮತ್ತು ಉಳಿಕೆ ನಗದು ಹಣ ಪತ್ತೆ ಹಚ್ಚಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ. 17ರ ಮಧ್ಯಾಹ್ನ 1ರಿಂದ 1.20ರ ಸಮಯದಲ್ಲಿ ದರೋಡೆ ನಡೆದಿದ್ದು, ಅದಾಗಿ ಮೂರೇ ದಿನಗಳಲ್ಲಿ ಆರೋಪಿಗಳಾದ ತಮಿಳುನಾಡಿನ ಅಮ್ಮನ್‌ಕೋವಿಲ್‌ ನಿವಾಸಿ ಮುರುಗಂಡಿ ಥೇವರ್‌ (36), ಮುಂಬೈ ಡೊಂಬಿವಿಲಿಯ ಯೊಸುವಾ ರಾಜೇಂದ್ರನ್‌ (35), ಮುಂಬೈ ತಿಲಕನಗರದ ಕಣ್ಣನ್‌ ಮಣಿ (36) ಎಂಬವರನ್ನು ಬಂಧಿಸಿದ್ದ ಪೊಲೀಸರು, ನಂತರ ದರೋಡೆಯಾದ ಚಿನ್ನಾಭರಣಗಳನ್ನು ಬಚ್ಚಿಡಲು ಸಹಕರಿಸಿದ ಮುರುಗುಂಡಿ ಥೇವರ್‌ನ ತಂದೆ ಷಣ್ಮುಗ ಸುಂದರಮ್‌ನನ್ನು ಬಂಧಿಸಿ, ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಆರೋಪಿಗಳು ಪೊಲೀಸರ ವಶದಲ್ಲಿದ್ದು ವಿಚಾರಣೆ ತೀವ್ರಗೊಳಿಸಲಾಗಿದೆ.

ಕೃತ್ಯಕ್ಕೆ ಬಳಕೆ ಮಾಡಲಾದ 2 ಪಿಸ್ತೂಲ್‌, 3 ಸಜೀವ ಗುಂಡುಗಳು, ಫಿಯೆಟ್‌ ಕಾರು, ಒಂದು ನಕಲಿ ನಂಬರ್‌ ಪ್ಲೇಟ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಆರು ತಿಂಗಳ ಮೊದಲೇ ಸಂಚು!:

ಈ ದರೋಡೆಗೆ ಸುಮಾರು ಆರು ತಿಂಗಳ ಹಿಂದೆಯೇ ಸ್ಕೆಚ್‌ ರೂಪಿಸಲಾಗಿತ್ತು. ಮುಂಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದವ ಎನ್ನಲಾಗಿರುವ ಶಶಿ ಥೇವರ್ (ಇನ್ನಷ್ಟೇ ಬಂಧನ ಆಗಬೇಕಿದೆ) ಎಂಬಾತ ಆರು ತಿಂಗಳ ಹಿಂದೆ ಕೋಟೆಕಾರ್‌ ವ್ಯವಸಾಯ ಸಹಕಾರಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ದರೋಡೆಗೆ ಸೂಕ್ತವಾದ ಬ್ಯಾಂಕ್‌ ಎಂಬುದಾಗಿ ಆರೋಪಿಗಳಿಗೆ ತಿಳಿಸಿದ್ದ. ಅದರಂತೆ 2024ರ ಆಗಸ್ಟ್‌, ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಮೂರು ಬಾರಿ ಪ್ರಮುಖ ಆರೋಪಿ ಮುರುಗಂಡಿ ಥೇವರ್‌ ಮಂಗಳೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾನೆ. ಬಳಿಕ ಇತರ ಆರೋಪಿಗಳ ಜತೆ ಸೇರಿ ಸ್ಕೆಚ್‌ ರೂಪಿಸಲಾಗಿತ್ತು ಎಂದು ಕಮಿಷನರ್‌ ತಿಳಿಸಿದರು.

ನಮಾಜ್‌ ಸಮಯ ಫಿಕ್ಸ್‌:

ಬ್ಯಾಂಕ್‌ ಪರಿಸರದಲ್ಲಿ ಮುಸ್ಲಿಮರೇ ಹೆಚ್ಚಿರುವುದರಿಂದ ಯಾವುದಾದರೂ ಶುಕ್ರವಾರ ಮಧ್ಯಾಹ್ನ ನಮಾಜ್‌ ಸಮಯದಲ್ಲೇ ದರೋಡೆ ಮಾಡಬೇಕೆಂದು ಆರೋಪಿಗಳು ಸ್ಕೆಚ್‌ ಸಿದ್ಧಪಡಿಸಿದ್ದರು. ಅದರಂತೆ ಜ.17ರಂದು ದಿನ ನಿಗದಿ ಮಾಡಿದ್ದಾರೆ. ಮೂರು ಮಂದಿ ಮುಂಬೈಯಿಂದ ಕಾರಿನಲ್ಲಿ ಬಂದಿದ್ದರೆ, ಇಬ್ಬರು ಆರೋಪಿಗಳು ರೈಲಿನಲ್ಲಿ ಆಗಮಿಸಿದ್ದರು. ಕೃತ್ಯ ನಡೆದ ದಿನ ಮಧ್ಯಾಹ್ನ 12.20ರ ವೇಳೆಗೆ ಸ್ಥಳಕ್ಕೆ ತಲುಪಿದ್ದ ಆರೋಪಿಗಳು, ಅಲ್ಲಿನ ಶಾಲೆ ಬಳಿ ಕೆಲ ಹೊತ್ತು ಕಾದು 1.10ರ ವೇಳೆಗೆ ಬ್ಯಾಂಕ್‌ಗೆ ನುಗ್ಗಿ ಕೃತ್ಯ ಎಸಗಿ ಪರಾರಿಯಾಗಿದ್ದರು.

ಮೂರೇ ದಿನದಲ್ಲಿ 3700 ಕಿ.ಮೀ. ಪ್ರಯಾಣ:

ರಾಜ್ಯದ ಅತಿದೊಡ್ಡ ದರೋಡೆ ಪ್ರಕರಣಗಳಲ್ಲಿ ಒಂದಾದ ಈ ಪ್ರಕರಣ ಭೇದಿಸಲು ಹಲವು ಪೊಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 3700 ಕಿ.ಮೀ.ಗೂ ಅಧಿಕ ಪ್ರಯಾಣ ಮಾಡಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿವೆ. ಎಸಿಪಿಗಳಾದ ಧನ್ಯಾ ನಾಯಕ್‌ ಮತ್ತು ಮನೋಜ್‌ ನೇತೃತ್ವದಲ್ಲಿ ಮಂಗಳೂರು ಪೊಲೀಸರ ಹಲವು ತಂಡಗಳು ತಮಿಳುನಾಡು ಮತ್ತು ಮುಂಬೈನಲ್ಲಿ ದಣಿವರಿಯದೆ ಕೆಲಸ ಮಾಡಿದ್ದು, ಈ ತಂಡಕ್ಕೆ ಶೀಘ್ರ ಸೂಕ್ತ ಬಹುಮಾನ ಘೋಷಿಸಲಾಗುವುದು ಎಂದು ಅನುಪಮ್‌ ಅಗ್ರವಾಲ್‌ ಹೇಳಿದರು.

ಆರೋಪಿಗಳ ಅಪರಾಧಿ ಹಿನ್ನೆಲೆ:

ಪ್ರಮುಖ ಆರೋಪಿ ಮುರುಗಂಡಿ ಥೇವರ್‌ 2016ರಲ್ಲಿ ನವಿ ಮುಂಬೈನ ಪಾಪ್ಯುಲರ್‌ ಫೈನಾನ್ಸ್‌ ದರೋಡೆ ಪ್ರಕರಣದ ಆರೋಪಿಯಾಗಿದ್ದು, ಮುಂಬೈನಲ್ಲಿ ಇನ್ನೂ ಎರಡು ಪ್ರಕರಣಗಳು ಈತನ ಮೇಲಿವೆ. ಯೊಸುವ ರಾಜೇಂದ್ರನ್‌ ವಿರುದ್ಧ ಮುಂಬೈನಲ್ಲಿ ದರೋಡೆ ಪ್ರಕರಣ ಹಾಗೂ ಗುಜರಾತ್‌ನಲ್ಲಿ ಒಂದು ಪ್ರಕರಣವಿದೆ. ಕಣ್ಣನ್‌ ಮಣಿ ವಿರುದ್ಧ ಮುಂಬೈ ತಿಲಕ್‌ ನಗರದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮುರುಗಂಡಿ ಥೇವರ್‌ನ ತಂದೆ ಶಣ್ಮುಗ ಸುಂದರಂನನ್ನು ಈ ಪ್ರಕರಣದಲ್ಲಿ ಚಿನ್ನಾಭರಣ ಮನೆಯಲ್ಲಿ ಬಚ್ಚಿಡಲು ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ, ಆತನ ಮೇಲೆ ಇದುವರೆಗೆ ಯಾವುದೇ ಪ್ರಕರಣಗಳಿಲ್ಲ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಡಿಸಿಪಿಗಳಾದ ಸಿದ್ಧಾರ್ಥ್‌ ಗೋಯಲ್‌, ರವಿಶಂಕರ್‌, ಎಸಿಪಿಗಳಾದ ಧನ್ಯಾ ನಾಯಕ್‌, ಮನೋಜ್‌ ಇದ್ದರು.

 ಸುಳಿವೇ ಕೊಡದೆ ದರೋಡೆ!

ಬ್ಯಾಂಕ್‌ ದರೋಡೆ ಮಾಡಿದ ಬಳಿಕ ಆರೋಪಿಗಳಾದ ಮುರುಗಂಡಿ ಥೇವರ್‌, ಯೊಸುವಾ ರಾಜೇಂದ್ರನ್‌ ಫಿಯೆಟ್‌ ಕಾರಿನಲ್ಲಿ ಪರಾರಿಯಾಗಿದ್ದರೆ, ಉಳಿದ ಮೂವರು ರೈಲಿನ ಮೂಲಕ ಮತ್ತೊಬ್ಬ ಬಸ್ಸಿನಲ್ಲಿ ಮುಂಬೈಗೆ ಹೋಗಿ ಅಲ್ಲಿಂದ ತಮಿಳುನಾಡಿಗೆ ತೆರಳಿದ್ದರು. ದರೋಡೆ ವೇಳೆ ಬ್ಯಾಂಕಿನ ಸಿಸಿಟಿವಿ ಹಾಳಾಗಿದ್ದಲ್ಲದೆ, ಸೆಕ್ಯೂರಿಟಿ ಗಾರ್ಡ್‌ ಕೂಡ ಇಲ್ಲದೆ ಶೂನ್ಯದಿಂದ ತನಿಖೆ ಆರಂಭಿಸಲಾಗಿತ್ತು.

ಘಟನೆ ನಡೆದ ಪ್ರದೇಶದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಫಿಯೆಟ್‌ ಕಾರು ಕಾಣಿಸಿತ್ತು. ಆದರೆ ನಕಲಿ ನಂಬರ್‌ ಪ್ಲೇಟ್‌ ಹಾಕಲಾಗಿತ್ತು. ಅದೇ ರಾತ್ರಿ ವೇಳೆ ಶಿರೂರು ಟೋಲ್‌ನಲ್ಲಿದ್ದ ಸಿಸಿಟಿವಿಯಲ್ಲಿ ಅದೇ ಫಿಯೆಟ್‌ ಕಾರಿನ ಮಹಾರಾಷ್ಟ್ರ ನೋಂದಣಿ ಸಂಖ್ಯೆ ಪತ್ತೆಯಾಗಿದ್ದು, ಮುಂಬೈ ನಂಟು ಇರುವುದನ್ನು ಖಚಿತಪಡಿಸಿತು. ಅದರ ಬಳಿಕ ವಿವಿಧ ಆಯಾಮಗಳಲ್ಲಿ ವಿವಿಧ ಪೊಲೀಸ್‌ ತಂಡಗಳು ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿವೆ.

Share this article