ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಯುವಕರಲ್ಲಿ ದೇಶ ಭಕ್ತಿಯ ಕಿಚ್ಚು ಹೆಚ್ಚಿಸಿ, ಹಿಂದೂ ಧರ್ಮ, ಸಂಸ್ಕೃತಿ ಉಳವಿಗಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸಂಘದ ಕಾರ್ಯ ಮಾದರಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರ ಪ್ರಮುಖ ಅರುಣಕುಮಾರ ಹೇಳಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬ್ರಿಟಿಷರ ವಿರುದ್ಧ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ನಿಮಿತ್ತ ಪಟ್ಟಣದಲ್ಲಿ ಗುರುಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ನಾಡ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ಜ್ಞಾನಕ್ಕೆ ಅನೇಕ ಉನ್ನತ ಹುದ್ದೆಗಳು ಅರಸಿಕೊಂಡು ಬಂದವು. ಅವರು ಯಾವುದೇ ಮೀಸಲಾತಿ ಪಡೆದುಕೊಂಡಿರಲಿಲ್ಲ. ಆರ್‌ಎಸ್‌ಎಸ್ ನವರು ಸಂವಿಧಾನ ಬದಲಿಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಸಂಘ ಸಂವಿಧಾನಕ್ಕೆ ನಿಜವಾದ ಗೌರವ ತಂದುಕೊಟ್ಟಿದೆ. ಮಾಜಿ ಪ್ರಧಾನಿ ನೆಹರು ಸಹ ಆರೆಸ್ಸೆಸ್‌ನ ದೇಶ ಭಕ್ತಿ ಅರಿತು ಗೌರವ ನೀಡಿದ್ದರು ಎಂದು ತಿಳಿಸಿದರು.ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಣಿ ಚನ್ನಮ್ಮ ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಕಹಳೆ ಮೊಳಗಿಸಿದರು. ಝಾನ್ಸಿ ರಾಣಿಗಿಂತಲೂ 33 ವರ್ಷ ಮೊದಲು ರಾಣಿ ಚನ್ನಮ್ಮಾಜಿ ಬ್ರಿಟಿಷರ ವಿರುದ್ಧ ಹೋರಾಡಿದ್ದಳು ಎಂದು ನುಡಿದರು.ಚನ್ನಮ್ಮಾಜಿ ವರ್ತುಳದಲ್ಲಿ ಘೋಷವಾದನ ಮೂಲಕ ಚನ್ನಮ್ಮಾಜಿಗೆ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಗಣವೇಷಧಾರಿ ಸ್ವಯಂಸೇವಕರಿಂದ ಪಥ ಸಂಚಲನ ನಡೆಯಿತು.ಜಿಲ್ಲಾ ಪ್ರಚಾರಕ ಚೇತಕ, ಸನ್ಮೀತ ಕುಲಕರ್ಣಿ, ಕೃಷ್ಣಾ ಕಾಮತ್, ತಾಲೂಕು ಕಾರ್ಯವಾಹ ಪ್ರಶಾಂತ ಕಲಾಲ್ ಇತರರು ಇದ್ದರು. ಅರುಣ ಹಣ್ಣಿಕೇರಿ ಸ್ವಾಗತಿಸಿದರು. ವಿನಾಯಕ ಕುಲಕರ್ಣಿ ನಿರೂಪಿಸಿದರು. ಸಂತೋಷ ಹೊಸಮನಿ ವಂದಿಸಿದರು. ಸಂದೀಪ ದೇಶಪಾಂಡೆ ಪ್ರಾರ್ಥಿಸಿದರು. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಬಸವರಾಜ ಪರವಣ್ಣವರ, ಶ್ರೀಕರ್ ಕುಲಕರ್ಣಿ ಇದ್ದರು.ರಾಣಿ ಚನ್ನಮ್ಮಾಜಿ, ಸಂಗೊಳ್ಳಿ ರಾಯಣ್ಣ, ಬಾಬಾಸಾಹೇಬ ಅಂಬೇಡ್ಕರ್ ಮುಂತಾದ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರನ್ನು ಜಾತಿ ಸಂಕೋಲೆಗಳಿಂದ ಹೊರತರಬೇಕಿದೆ.-ಅರುಣಕುಮಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರ ಪ್ರಮುಖ.