ಕಿಡ್ನಿ ವೈಫಲ್ಯದ ಯುವಕನ ಮನೆಗೆ ಬೀಗ ಜಡಿದ ಫೈನಾನ್ಸ್‌!

KannadaprabhaNewsNetwork |  
Published : Jan 28, 2025, 12:48 AM IST
ಯಾದಗಿರಿ ಸಮೀಪದ ಯಡ್ಡಳ್ಳಿ ಗ್ರಾಮದಲ್ಲಿರುವ ಗೀತಕ್ಕನ ಮನೆಗೆ ಬೀಗ ಜಡಿದಿರುವ ಫೈನಾನ್ಸ್‌ ಕಂಪನಿಯವರು. | Kannada Prabha

ಸಾರಾಂಶ

Finances lock down the house of a young man with kidney failure!

ಮೈಕ್ರೋ ಫೈನಾನ್ಸ್‌ ಕಾಟ । ಸಾಲದ ಕಿರುಕುಳಕ್ಕೆ ಊರು ಬಿಟ್ಟ ಕುಟುಂಬ ವಾಪಸ್ಸಾದಾಗ ಸಂಸ್ಥೆ ಅಟ್ಟಹಾಸ । ಆಸ್ಪತ್ರೆಯಲ್ಲಿ ಯುವಕ-ತಾಯಿ ವಾಸ

------

ಕನ್ನಡಪ್ರಭ ವಾರ್ತೆ ಯಾದಗಿರಿ

ಕಿರುಕುಳ ತಾಳಲಾಗದೆ ಜನರು ಆತ್ಮಹತ್ಯೆ ಮಾಡಿಕೊಂಡರೂ ಮೈಕ್ರೋ ಫೈನಾನ್ಸ್‌ ದಾದಾಗಿರಿಗೆ ಕಡಿವಾಣ ಬಿದ್ದಂತಿಲ್ಲ. ಸಾಲ ಕೊಟ್ಟ ಸಂಸ್ಥೆಗಳ ಕಿರಿಕಿರಿಯಿಂದ ಜನರು ಊರು ಬಿಟ್ಟು ಹೋಗುತ್ತಿರುವ ಪ್ರಕರಣಗಳು ಮತ್ತಷ್ಟ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಸಾಲ ಪಡೆದ ಹಣಕ್ಕೆ ಮೀಟರ್‌ ಬಡ್ಡಿ ನೀಡದ್ದರಿಂದ ಫೈನಾನ್ಸ್‌ನವರು ಬಾರುಕೋಲಿನಿಂದ ಹಲ್ಲೆ ನಡೆಸಿದ್ದ ಪರಿಣಾಮ, ನಗರದ ಲಾಡೀಸ್‌ ಗಲ್ಲಿಯ ಯುವಕನೊಬ್ಬ ಮೃತಪಟ್ಟನೆನ್ನಲಾದ ಘಟನೆ ಮಾಸುವ ಮುನ್ನವೇ, ಇದೀಗ ಯಾದಗಿರಿಯಲ್ಲಿ ಮತ್ತೊಂದು ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ಫೈನಾನ್ಸ್‌ವೊಂದರಿಂದ ಟ್ಯಾಕ್ಸಿ ಖರೀದಿಸಿದ್ದ ಯಾದಗಿರಿ ಸಮೀಪದ ಯಡ್ಡಳ್ಳಿ ಗ್ರಾಮದ ಯುವಕ ಮಲ್ಲಿಕಾರ್ಜುನ ಎಂಬಾತ ಸಾಲ ಮರುಪಾವತಿಗಾಗಿನ ಕಿರುಕುಳ ತಾಳಲಾಗದೆ ಖರೀದಿಸಿದ್ದ ಕಾರು ಮಾರಿ ಹಣ ಕಟ್ಟಿದ್ದರೂ, ಬಡ್ಡಿ ಚಕ್ರಬಡ್ಡಿ ಹಣ ಪಾವತಿಸಿಲ್ಲ ಎಂಬ ಫೈನಾನ್ಸ್‌ವೊಂದರ ಕಿರುಕುಳಕ್ಕೆ ಬೆದರಿ, ಮನೆಗೆ ಬೀಗ ಜಡಿದು ತಾಯಿ ಸಮೇತ ಊರು ಬಿಟ್ಟು ಬೆಂಗಳೂರಿಗೆ ತೆರಳಿದ್ದ. ಅಲ್ಲಿ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ. ಆತನಿಗೆ ಕಿಡ್ನಿ ವೈಫಲ್ಯದ ಕಾಯಿಲೆ ಅಂಟಿಕೊಂಡಾಗ, ಮಲ್ಲಿಕಾರ್ಜುನ್‌ ಬದುಕುವುದು ಕಷ್ಟ, ಊರಿಗೆ ವಾಪಸ್‌ ಕರೆದೊಯ್ಯಿರಿ ಎಂಬುದಾಗಿ ವೈದ್ಯರು ತಾಯಿ ಗೀತಕ್ಕರೆದುರ ಹೇಳಿದ ಮೇರೆಗೆ ಗ್ರಾಮಕ್ಕೆ ಬಂದ ತಾಯಿ-ಮಗನಿಗೆ ಆಘಾತ ಕಾದಿತ್ತು. ತಮ್ಮ ಮನೆಗೆ ಹಾಕಿದ್ದ ಬೀಗದ ಮೇಲೆ ಕಬ್ಬಿಣದ ಸರಪಳಿ ಹಾಕಿ ಮತ್ತೊಂದು ಬೀಗ ಹಾಕಿದ್ದ ಫೈನಾನ್ಸ್‌ನವರ ಅಟ್ಟಹಾಸ ಕಣ್ಣೀರಕ್ಕೆ ಕಾರಣವಾಗಿತ್ತು.

ಜೀವನದ ಕೊನೆಯ ಕ್ಷಣಗಳನ್ನು ಎಣಿಸುತ್ತಿರುವ ಇದ್ದೊಬ್ಬ ಮಗ ತನ್ನೆದುರೇ ಸಾಯುವ ಸ್ಥಿತಿಯಲ್ಲಿದ್ದಾಗ, ಸ್ವಂತ ಮನೆಯಲ್ಲಿ ಇರಲಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ ತಾಯಿ ಗೀತಕ್ಕ, ಫೈನಾನ್ಸ್‌ನವರು ಮನೆಗೆ ಬೀಗ ಜಡಿದಿದ್ದರಿಂದ ವಾಸಕ್ಕಿಲ್ಲದೆ, ಯಿಮ್ಸ್‌ನಲ್ಲಿ (ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ) ಮಗನ ದಾಖಲಿಸಿ, ಚಿಕಿತ್ಸೆ ನೀಡಿಸುತ್ತಿದ್ದಾರೆ.

ಫೈನಾನ್ಸ್‌ನವರ ಕಿರಕುಳ ಹಾಗೂ ಮನೆಗೆ ಬೀಗ ಜಡಿದಿದ್ದರಿಂದ ತೀವ್ರ ಆಘಾತಕ್ಕೀಡಾಗಿರುವ ತಾಯಿ ಗೀತಕ್ಕ, ‘ಎಷ್ಟು ಹಣ ತುಂಬಿದರೂ ಸಾಲ ಮುಟ್ಟಲಿಲ್ಲ. ಈಗ ಮನೆಗೆ ಬೀಗ ಹಾಕಿದ್ದಾರೆ. ಮಗ ಮಲ್ಲಿಕಾರ್ಜುನ ಸತ್ತರೆ ಹೆಣ ಒಯ್ಯುವುದಾದರೂ ಎಲ್ಲಿಗೆ, ಬೇರೆಯವರ ಮನೆ ಮುಂದೆ ಹೆಣ ಇಡುವುದೇ..?’ ಎಂದು ಕಣ್ಣೀರಿಟ್ಟರು.

...ಕೋಟ್‌...

ಎಷ್ಟು ಹಣ ತುಂಬಿದರೂ ಸಾಲ ಮುಟ್ಟಲಿಲ್ಲ. ಈಗ ಮನೆಗೆ ಬೀಗ ಹಾಕಿದ್ದಾರೆ. ಮಗ ಮಲ್ಲಿಕಾರ್ಜುನ ಸತ್ತರೆ ಹೆಣ ಒಯ್ಯುವುದಾದರೂ ಎಲ್ಲಿಗೆ, ಬೇರೆಯವರ ಮನೆ ಮುಂದೆ ಹೆಣ ಇಡಬೇಕೆ? ನಮಗೆ ನ್ಯಾಯ ಕೊಡಿಸಿ.

-ಗೀತಕ್ಕ, ಯಡ್ಡಳ್ಳಿ ಗ್ರಾಮಸ್ಥೆ.

-----

ಫೋಟೊ: 26ವೈಡಿಆರ್‌1

ಯಾದಗಿರಿ ಸಮೀಪದ ಯಡ್ಡಳ್ಳಿ ಗ್ರಾಮದಲ್ಲಿರುವ ಗೀತಕ್ಕನ ಮನೆಗೆ ಬೀಗ ಜಡಿದಿರುವ ಫೈನಾನ್ಸ್‌ ಕಂಪನಿಯವರು.

-----

26ವೈಡಿಆರ್‌2

ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಮಗನನನ್ನು ಫೈನಾನ್ಸ್‌ನವರ ಕಿರಕುಳದಿಂದ ಮನೆಗೆ ಕರೆದುಕೊಂಡು ಹೋಗಲಿಕ್ಕಾಗದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ಗೀತಕ್ಕ.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ