ರಾಜ್ಯದಲ್ಲೇ ಅತಿ ದೊಡ್ಡ ಬ್ಯಾಂಕ್‌ ದರೋಡೆ ಮಂಗ್ಳೂರು ಬ್ಯಾಂಕಲ್ಲಿ 12 ಕೋಟಿ ಲೂಟಿ !

KannadaprabhaNewsNetwork |  
Published : Jan 18, 2025, 01:48 AM ISTUpdated : Jan 18, 2025, 07:04 AM IST
ದರೋಡೆ ನಡೆದಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್ ಶಾಖೆ ಹಾಗೂ ಸ್ಥಳಕ್ಕೆ ಭೇಟಿ ನೀಡಿದ ಸ್ಪೀಕರ್ ಯು.ಟಿ.ಖಾದರ್ ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿರುವುದು. | Kannada Prabha

ಸಾರಾಂಶ

ಎಟಿಎಂಗೆ ಹಣ ತುಂಬಿಸುವ ವಾಹನ ಸಿಬ್ಬಂದಿಯನ್ನು ಹಾಡಹಗಲೇ ಶೂಟ್ ಮಾಡಿ ಹಣ ಸಮೇತ ಪರಾರಿಯಾದ ಘಟನೆ ಬೀದರ್​​ನಲ್ಲಿ ನಡೆದ ಮಾರನೇ ದಿನವೇ ಮಂಗಳೂರು ಸಮೀಪದ ಉಳ್ಳಾಲದಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಂಕ್ ದರೋಡೆ ನಡೆದಿದೆ.

ಉಳ್ಳಾಲ : ಎಟಿಎಂಗೆ ಹಣ ತುಂಬಿಸುವ ವಾಹನ ಸಿಬ್ಬಂದಿಯನ್ನು ಹಾಡಹಗಲೇ ಶೂಟ್ ಮಾಡಿ ಹಣ ಸಮೇತ ಪರಾರಿಯಾದ ಘಟನೆ ಬೀದರ್​​ನಲ್ಲಿ ನಡೆದ ಮಾರನೇ ದಿನವೇ ಮಂಗಳೂರು ಸಮೀಪದ ಉಳ್ಳಾಲದಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಂಕ್ ದರೋಡೆ ನಡೆದಿದೆ.

ಶುಕ್ರವಾರ ಮಧ್ಯಾಹ್ನದ ವೇಳೆ ಉಳ್ಳಾಲ ತಾಲೂಕಿನ ಕೆ.ಸಿ. ರೋಡ್​​ನ ಕೋಟೆಕಾರ್‌ ಸೇವಾ ಸಹಕಾರಿ ಸಂಘದ ಬ್ಯಾಂಕ್‌ ಗೆ ನುಗ್ಗಿದ 5 ಮಂದಿ ಮುಸುಕುಧಾರಿ ದರೋಡೆಕೋರರ ತಂಡ, ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲು ಮತ್ತು ತಲವಾರು ತೋರಿಸಿ ಅಂದಾಜು 12 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 5 ಲಕ್ಷ ರು. ನಗದು ದೋಚಿ ಪರಾರಿಯಾಗಿದೆ. ಕೇವಲ 5 ನಿಮಿಷಗಳ ಅವಧಿಯಲ್ಲಿ ನಡೆದ ಈ ದರೋಡೆ, ರಾಜ್ಯದಲ್ಲಿ ಈವರೆಗೆ ನಡೆದ ಅತಿದೊಡ್ಡ ಮೊತ್ತದ ಬ್ಯಾಂಕ್‌ ದರೋಡೆ ಎನ್ನಲಾಗಿದೆ.

ದರೋಡೆ ನಡೆಸಿದ ತಂಡ, ಗೋಣಿ ಚೀಲದಲ್ಲಿ ಚಿನ್ನ, ಹಣ ತುಂಬಿಕೊಂಡು, ಫಿಯೆಟ್‌ ಲಿನಿಯಾ ಕಾರಿನಲ್ಲಿ ಪರಾರಿಯಾಗಿದೆ. ದುಷ್ಕರ್ಮಿಗಳು ಕೇರಳಕ್ಕೆ ಪರಾರಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ದರೋಡೆ ನಡೆದಿದ್ದು ಹೇಗೆ?:

ಬೀದರ್‌ನಲ್ಲಿ ಬ್ಯಾಂಕ್ ದರೋಡೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೆ.ಸಿ.ರೋಡ್ ಕೋಟೆಕಾರು ಬ್ಯಾಂಕ್ ಸಿಬ್ಬಂದಿಯೂ ಸಿಸಿಟಿವಿಯಲ್ಲಿ ದೃಶ್ಯಗಳು ಸರಿಯಾಗಿ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ಹೀಗಾಗಿ, ಸಿಸಿಟಿವಿ ದುರಸ್ತಿಗಾಗಿ ಸಂದೀಪ್ ಎಂಬುವರು ಮಧ್ಯಾಹ್ನ 12.30ರ ಸುಮಾರಿಗೆ ಬಂದಿದ್ದರು. ಲಾಕರ್ ಭಾಗದಲ್ಲಿರುವ ಸಿಸಿಟಿವಿಯ ವೈರ್‌ಗಳನ್ನು ಇಲಿಗಳು ತಿಂದಿರುವುದರಿಂದ ವೈರ್ ಸಂಪೂರ್ಣ ಬದಲಾಯಿಸುವ ಸಲುವಾಗಿ ಡಿವಿಆರ್‌ ಅನ್ನು ಪ್ರತ್ಯೇಕಿಸಿದ್ದರು. ಈ ಮಧ್ಯೆ, ಸುಮಾರು 1.10ರ ವೇಳೆಗೆ ಜೀನ್ಸ್‌ ಪ್ಯಾಂಟ್‌ ಧರಿಸಿದ್ದ ಐವರು ಮುಸುಕುಧಾರಿ ಆಗಂತುಕರು ಮೊದಲ ಮಹಡಿಯಲ್ಲಿರುವ ಬ್ಯಾಂಕ್‌ನೊಳಕ್ಕೆ ನುಗ್ಗಿದರು. ಅದು ಊಟದ ಸಮಯ ಆಗಿದ್ದರಿಂದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಚಿನ್ನ ಪರಿಶೀಲನೆಗಾರ ರಾಮಚಂದ್ರ ಆಚಾರ್ಯ ಮತ್ತು ಸಂದೀಪ್‌ ಮಾತ್ರ ಇದ್ದರು. ಗ್ರಾಹಕರು ಇರಲಿಲ್ಲ. ಸಿಸಿಟಿವಿ ದುರಸ್ತಿ ಕೆಲಸ ಆಗುತ್ತಿದ್ದುದರಿಂದ ಸ್ಟ್ರಾಂಗ್‌ ರೂಮಿನ ಬಾಗಿಲು ಕೂಡ ತೆರೆದಿತ್ತು.

ಏಕಾಏಕಿ   ದರೋಡೆಕೋರರು ತಲವಾರು ಝಳಪಿಸಿ, ಪಿಸ್ತೂಲು ಹಿಡಿದು ಕುಳಿತುಕೊಳ್ಳುವಂತೆ ಸಿಬ್ಬಂದಿಗೆ ಬೆದರಿಸಿದರು. ಈ ಪೈಕಿ ಇಬ್ಬರು ಕ್ಯಾಶ್‌ ಕೌಂಟರಿನೊಳಗೆ ನುಗ್ಗಿದರು. ಓರ್ವ ಸೀದಾ ಲಾಕರ್‌ನತ್ತ ತೆರಳಿ ಚಿನ್ನವನ್ನು ಮೂರು ಗೋಣಿಗಳಲ್ಲಿ ತುಂಬಿಸಿ, ಬಳಿಕ ನಗದು ದೋಚಿದ್ದಾನೆ.

ಈ ವೇಳೆ ಸಂದೀಪ್ ಅವರು ರಕ್ಷಣೆಗಾಗಿ ಕೈಮುಗಿದಿದ್ದು, ಅವರ ಕೈಯಲ್ಲಿದ್ದ ಉಂಗುರವನ್ನು ಕಂಡು ಅದನ್ನೂ ಎಳೆದು ದೋಚಿದ್ದಾರೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ತಂಡ, ಅಡ್ಡಿಪಡಿಸಿದಲ್ಲಿ ಶೂಟ್ ಮಾಡಿ ಕೊಲ್ಲುವ ಬೆದರಿಕೆ ಒಡ್ಡುತ್ತಲೇ ಕೃತ್ಯ ಎಸಗಿದೆ.

ಸಾಧಾರಣವಾಗಿ ಮುಸ್ಲಿಂ ವ್ಯಾಪಾರಸ್ಥರೇ ಹೆಚ್ಚಾಗಿರುವ ಜಂಕ್ಷನ್‌ನಲ್ಲಿ ಶುಕ್ರವಾರವಾಗಿದ್ದರಿಂದ ಜುಮಾ ನಮಾಝ್ ಹಿನ್ನೆಲೆಯಲ್ಲಿ ಎಲ್ಲರೂ ಮಸೀದಿಗೆ ತೆರಳಿದ್ದರು. ಇದರಿಂದಾಗಿ ಅಂಗಡಿಗಳು ಎಲ್ಲವೂ ಬಂದ್ ಆಗಿದ್ದು, ಪ್ರದೇಶ ನಿರ್ಜನವಾಗಿತ್ತು. ಈ ವೇಳೆ ಒಬ್ಬರು ಸಿಬ್ಬಂದಿ ಬೊಬ್ಬೆ ಹಾಕಿದರು. ಆಗ ಅಲ್ಲೇ ಕೆಳಗಿದ್ದ ಬೇಕರಿಗೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಮೇಲೆ ಓಡಿ ಬಂದರು. ವಿದ್ಯಾರ್ಥಿಗಳಿಗೂ ಬೆದರಿಸಿದ ತಂಡ, ಅವರಿಗೆ ವಾಪಸ್‌ ಹೋಗುವಂತೆ ಕನ್ನಡ ಭಾಷೆಯಲ್ಲಿ ಬೈಯ್ದಿದೆ.

ಬಳಿಕ, ಬ್ಯಾಂಕ್‌ ಮುಂದಿದ್ದ ಫಿಯೆಟ್ ಲಿನಿಯಾ ಕಾರಿನಲ್ಲಿ ಗೋಣಿಚೀಲಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕ್ ಎದುರಿನ ಮನೆಯ ನಿವಾಸಿ ಉಷಾ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಆರೋಪಿಗಳು ಕೇರಳದತ್ತ ತೆರಳಿದ್ದು, ಇದಕ್ಕೆ ಸಾಕ್ಷಿಯಾಗಿ ತಲಪಾಡಿ ಟೋಲ್ ಗೇಟ್ ನಲ್ಲಿ 150 ರು. ಕೊಟ್ಟು ರಶೀದಿ ಪಡೆದುಕೊಂಡಿದ್ದು ಬೆಳಕಿಗೆ ಬಂದಿದೆ. ನಂಬರ್ ಪ್ಲೇಟ್ ನಕಲಿಯಾಗಿದ್ದರಿಂದ ಕಾರಿನಲ್ಲಿ ಫಾಸ್‌ಟ್ಯಾಗ್‌ ಇರಲಿಲ್ಲ. ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಈ ಮಧ್ಯೆ, ಆತುರದಲ್ಲಿ ಇನ್ನು 6 ಕೋಟಿ ರು. ಮೌಲ್ಯದ 12 ಕೆ.ಜಿ ಚಿನ್ನವನ್ನು ದರೋಡೆಕೋರರು ಬಿಟ್ಟು ಹೋಗಿದ್ದಾರೆ ಎಂದು ಬ್ಯಾಂಕ್‌ ಸಿಬ್ಬಂದಿ ತಿಳಿಸಿದ್ದಾರೆ. 

- ಪಿಸ್ತೂಲ್‌, ತಲವಾರ್‌ ತೋರಿಸಿ ಉಳ್ಳಾಲದ ಸಹಕಾರಿ ಬ್ಯಾಂಕ್‌ನಲ್ಲಿ ಐವರು ಮುಸುಕುಧಾರಿಗಳ ಅಟ್ಟಹಾಸ- ಐದೇ ನಿಮಿಷದಲ್ಲಿ ಚಿನ್ನ, ಹಣ 3 ಗೋಣಿ ಚೀಲಕ್ಕೆ ತುಂಬಿಕೊಂಡು ಪರಾರಿ । ಕೇರಳಕ್ಕೆ ಪರಾರಿಯಾದ ಶಂಕೆ

ದರೋಡೆಕೋರರು ಎಸ್ಕೇಪ್‌ ಆಗಿದ್ದು ಹೇಗೆ?: ಸಿಎಂ ಗರಂ

ಮಂಗಳೂರು: ಉಳ್ಳಾಲ ಕೋಟೆಕಾರ್‌ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಯವರು, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಖಡಕ್ ಸೂಚನೆ ನೀಡಿದರು. ಘಟನೆಯ ಕುರಿತಂತೆ ಸಮಗ್ರ ಮಾಹಿತಿ ಪಡೆದ ಅವರು, ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟು ಟೋಲ್‌ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್‌ಗಳನ್ನು‌ ಯಾಕೆ ಬಿಗಿಗೊಳಿಸಿಲ್ಲ ಎಂದು ಗರಂ ಆಗಿ ಪ್ರಶ್ನಿಸಿದರು.

--ಒಳ್ಳೆಯ ಟೈಮ್‌ ನೋಡಿ ಲೂಟಿ!

- ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿದ್ದರು. ಹೀಗಾಗಿ ಉಳ್ಳಾಲ ಪೊಲೀಸರು ಅತ್ತ ತೆರಳಿದ್ದರು- ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದರಿಂದ ಮಧ್ಯಾಹ್ನದ ವೇಳೆ ಬಹುತೇಕ ಮಂದಿ ನಮಾಜ್‌ಗೆ ಹೋಗಿದ್ದರು. ಜನ ಸಂಚಾರ ವಿರಳ ಇತ್ತು- ಬ್ಯಾಂಕ್‌ನಲ್ಲೂ ಜನರು ಕಡಿಮೆ ಇದ್ದರು. ಸಿಸಿಟೀವಿ ವೈರ್‌ಗಳನ್ನು ಇಲಿಗಳು ಕಚ್ಚಿದ್ದರಿಂದ ಅದು ಕೂಡ ಕೆಲಸ ಮಾಡುತ್ತಿರಲಿಲ್ಲ- ಇಂತಹ ಟೈಮ್‌ ನೋಡಿಯೇ ಬ್ಯಾಂಕ್‌ಗೆ ನುಗ್ಗಿ ಹಣ ದೋಚಿಕೊಂಡು ಹೋಗಿರುವ ದರೋಡೆಕೋರರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ