ಹುಬ್ಬಳ್ಳಿ:
ಬ್ಯಾಂಕ್ ಮುಷ್ಕರದಿಂದ ಚೆಕ್ ನಗದೀಕರಣ, ಠೇವಣಿ ಹಾಗೂ ಹಣ ಪಡೆಯುವ ಸೇವೆಗಳಿಗೆ ಅಡಚಣೆ ಉಂಟಾಯಿತು. ತುರ್ತು ಅಗತ್ಯಕ್ಕಾಗಿ ಬ್ಯಾಂಕ್‌ಗೆ ಬಂದಿದ್ದ ಗ್ರಾಹಕರು ನಗದು ಹಣ ಸಿಗದೆ ಕಂಗಾಲಾದರು.
ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಎದುರು ಸಮಾವೇಶಗೊಂಡ ನೂರಾರು ಬ್ಯಾಂಕ್ ನೌಕರರು, ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಲ್ಯಾಮಿಂಗ್ಟನ್ ರಸ್ತೆ, ಸರ್ ಸಿದ್ದಪ್ಪ ಕಂಬಳಿ ರಸ್ತೆ, ಕಾರ್ಪೊರೇಷನ್ ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಸಾಗಿತು. ಅಲ್ಲಿಂದ ಪುನಃ ಅದೇ ಮಾರ್ಗವಾಗಿ ನಡೆದ ಮೆರವಣಿಗೆಯು ಅಂಬೇಡ್ಕರ್ ವೃತ್ತದ ಮೂಲಕ ಸಾಗಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಬಳಿ ಸಮಾರೋಪಗೊಂಡಿತು.ವಿವಿಧ ಸಂಘಟನೆಗಳ ಮುಖಂಡರಾದ ಎಐಬಿಇಎ ಸಂಘಟನೆ ಸ್ಟೀಫನ್ ಜೆ., ಎಐಬಿಒಸಿಯ ಉದಯ್ ಮಹಾಲೆ, ಎಐಬಿಒಸಿಯ ರಾಮಮೋಹನ್ ಆತ್ಮಕುರಿ, ಎನ್‌ಸಿಬಿಇಯ ರುದ್ರಗೌಡ ಪಾಟೀಲ್, ಎಐಬಿಒಎನ ಸಂಜೀವ್‌ಕುರ್ಮಾ ಸಂಶಿ, ವಿನೋದಕುಮಾರ್ ನಂದಕಿಶೋರ್, ಎಸ್.ಸಂತೋಷ್ ಮಿರಜಕರ, ಸಂತೋಷ್ ನಜಾರೆ, ಎಐಬಿಒಸಿಯ ರಾಜಕಿಶೋರ್, ಗಿರೀಶ್ ಬಾಳಗಿ, ಸೌಜನ್ಯ ಕೆ. ಪ್ರತಿಭಟನೆ ನೇತೃತ್ವ ವಹಿಸಿದ್ದರು.