‘ಹಬ್ಬ ನಮ್ಮದು, ಸ್ವಚ್ಛತೆಯ ಜವಾಬ್ದಾರಿಯೂ ನಮ್ಮದೇ’ ಎಂಬ ಮನೋಭಾವದಿಂದ ಗಣೇಶೋತ್ಸವ ಆಚರಿಸುವ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಹಸಿರು ಹಬ್ಬವನ್ನು ಆಚರಿಸೋಣ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೇಳಿದರು.
ಬ್ಯಾಡಗಿ: ‘ಹಬ್ಬ ನಮ್ಮದು, ಸ್ವಚ್ಛತೆಯ ಜವಾಬ್ದಾರಿಯೂ ನಮ್ಮದೇ’ ಎಂಬ ಮನೋಭಾವದಿಂದ ಗಣೇಶೋತ್ಸವ ಆಚರಿಸುವ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಹಸಿರು ಹಬ್ಬವನ್ನು ಆಚರಿಸೋಣ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಹಾಗೂ ಪರಿಸರ ತಜ್ಞ ಸಂಪತ್ ಸಿ.ಎಂ. ಪರಿಸರ ಅಭಿಯಂತರ ಚನ್ನಪ್ಪ ಅಂಗಡಿ ಅವರ ನೇತೃತ್ವದಲ್ಲಿ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಹಾಗೂ ತ್ಯಾಜ್ಯ ಮುಕ್ತವಾಗಿ ಆಚರಿಸುವ ಉದ್ದೇಶದಿಂದ ಪುರಸಭೆ ವತಿಯಿಂದ ವಿವಿಧ ಗಣೇಶ ಯುವಸಂಘಟನೆಗಳ ಪದಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಗಣೇಶೋತ್ಸವ ಸಂದರ್ಭದಲ್ಲಿ ಕೇವಲ ಕಸ ನಿರ್ವಹಣೆಗೆ ಸೀಮಿತವಾಗದೆ ಶಬ್ದ ಮಾಲಿನ್ಯ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೂ ಆದ್ಯತೆ ನೀಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯ ನಂತರದ ಸ್ವಚ್ಛತಾ ಕಾರ್ಯದವರೆಗೂ ಪುರಸಭೆಯೊಂದಿಗೆ ಸಂಘಟಿತವಾಗಿ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ಪರಿಸರ ತಜ್ಞ ಸಿ.ಎಂ. ಸಂಪತ್ (ಭೂಧ್ವನಿ, ಬೆಂಗಳೂರು) ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಹಾಗೂ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವುದು ಸೇರಿದಂತೆ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದರು.ಪರಿಸರ ಅಭಿಯಂತರ ಚನ್ನಪ್ಪ ಅಂಗಡಿ ಮಾತನಾಡಿ, ಕಸಮುಕ್ತ ಗಣೇಶೋತ್ಸವ, ಶಬ್ದ ಮಾಲಿನ್ಯ ಮುಕ್ತ ಸಂಭ್ರಮ ಹಾಗೂ ಪರಿಸರ ಸ್ನೇಹಿ ವಿಸರ್ಜನೆ ಈ ಮೂರು ಆಶಯಗಳೊಂದಿಗೆ ಬ್ಯಾಡಗಿಯಲ್ಲಿ ಈ ಬಾರಿಯ ಗಣೇಶೋತ್ಸವಕ್ಕೆ ಹೊಸ ಮಾದರಿ ರೂಪಿಸೋಣ ಎಂದರು. ಕಾರ್ಯಾಗಾರದಲ್ಲಿ ಪಟ್ಟಣ ವ್ಯಾಪ್ತಿಯ ಸುಮಾರು 20 ಗಣೇಶ ಯುವ ಸಂಘಟನೆಗಳ ಪದಾಧಿಕಾರಿಗಳು, ಪುರಸಭೆ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿ ಭಾಗವಹಿಸಿದ್ದರು. ಶೂನ್ಯ ತ್ಯಾಜ್ಯ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಅನುಸರಿಸುವ ಗಣೇಶ ಬಳಗಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 3 ಆಯ್ದ ಗಣೇಶ ಬಳಗಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹೇಳಿದರು.