ಬ್ಯಾಂಕ್ ಸಿಬ್ಬಂದಿ ಕಾಲಕ್ಕೆ ತಕ್ಕಂತೆ ತಮ್ಮ ವರ್ತನೆ ಬದಲಾಯಿಸಿಕೊಂಡು ರೈತ ಸ್ನೇಹಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಬಡವರು ಬ್ಯಾಂಕಿಗೆ ಬಂದಾಗ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಬ್ಯಾಂಕುಗಳು ಬಡವರ ಪರವಾಗಿವೆ ಎಂಬ ವಿಶ್ವಾಸ ಮೂಡಿಸಬೇಕು ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದರು.
ಹಾವೇರಿ: ಬ್ಯಾಂಕ್ ಸಿಬ್ಬಂದಿ ಕಾಲಕ್ಕೆ ತಕ್ಕಂತೆ ತಮ್ಮ ವರ್ತನೆ ಬದಲಾಯಿಸಿಕೊಂಡು ರೈತ ಸ್ನೇಹಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಬಡವರು ಬ್ಯಾಂಕಿಗೆ ಬಂದಾಗ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಬ್ಯಾಂಕುಗಳು ಬಡವರ ಪರವಾಗಿವೆ ಎಂಬ ವಿಶ್ವಾಸ ಮೂಡಿಸಬೇಕು ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿ ಬ್ಯಾಂಕುಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸೇವೆ ಒದಗಿಸಬೇಕು. ಬ್ಯಾಂಕುಗಳು ರೈತರು, ಯುವಕರು, ಮಹಿಳೆಯರು, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸಕಾಲಕ್ಕೆ ಸಾಲ ನೀಡಬೇಕು. ಸಂಕಷ್ಟ ಪರಿಹಾರದ ಬಗ್ಗೆ ನಿರಾಳತೆ ಮೂಡಬೇಕು. ಸರ್ಕಾರದ ಯೋಜನೆಗಳ ಕುರಿತು ಕಡಿಮೆ ಗುರಿ ಇಟ್ಟುಕೊಂಡು ತೋರಿಕೆಗೆ ಸಾಧನೆಯಾಗಿದೆ ಎಂದು ಬಿಂಬಿಸಬೇಡಿ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಿ ಎಂದು ಸೂಚಿಸಿದರು.ಜನ್‌ಧನ್, ವಿಶ್ವಕರ್ಮ, ಪಿಎಂ ಸ್ವನಿಧಿ, ಮುದ್ರಾ, ಶಿಕ್ಷಣ ಸಾಲ ಇವುಗಳು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ. ಈ ಶಿಬಿರಗಳಲ್ಲಿ ನಾನೂ ಕೂಡ ಪಾಲ್ಗೊಳ್ಳುತ್ತೇನೆ. ಸ್ಥಳೀಯವಾಗಿ ಸ್ವಯಂ ಉದ್ಯೋಗ ರೂಪಿಸಲು ಇದು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಅಗತ್ಯ ಮಾರ್ಗದರ್ಶನ ನೀಡಲು ಸೂಚಿಸಿದರು.ಸಿಡಿ ರೇಶಿಯೋ ಸರಿಪಡಿಸಿಕೊಳ್ಳಿ: ಸಾಲ ಮತ್ತು ಠೇವಣಿ ಅನುಪಾತ ಸರಿ ಇಲ್ಲದ, ಸರಿಯಾಗಿ ಕಾರ್ಯನಿರ್ವಹಿಸದ ಬ್ಯಾಂಕುಗಳು ನಮ್ಮ ಜಿಲ್ಲೆಗೆ ಬೇಡ. ಕರ್ನಾಟಕ ಬ್ಯಾಂಕಿನ ಸಿಡಿ ರೇಷಿಯೋ ಕಡಿಮೆ ಇದ್ದು ಡಿಸೆಂಬರ್ ಒಳಗಾಗಿ ಸರಿಪಡಿಸಿಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದ ಅವರು, ವಾಹನ ಸಾಲ ನೀಡಲು ಆಗುತ್ತದೆ. ಆದರೆ, ಅದೇ ರೈತರಿಗೆ ಕೃಷಿ ಸಾಲ ನೀಡಲು ಹಿಂದೇಟು ಹಾಕುತ್ತೀರಿ ಎಂದು ಬ್ಯಾಂಕ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಜಿಪಂ ಸಿಇಒ ಅಕ್ಷಯ್ ಶ್ರೀಧರ ಮಾತನಾಡಿ, ಕಳೆದ ಸಭೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 30 ಶಾಖೆಗಳನ್ನು ತೆರೆಯಲು ಸೂಚಿಸಲಾಗಿತ್ತು. ಆದರೆ, ಈವರೆಗೆ ಕೇವಲ ಒಂದೇ ಶಾಖೆ ತೆರೆಯಲಾಗಿದೆ ಎಂದರು. ಆಗ ಸಂಸದರು ಪ್ರಕ್ರಿಯಿಸಿ, ಗ್ರಾಮೀಣ ಪ್ರದೇಶದಲ್ಲಿ ಶಾಖೆ ತೆರೆಯಲು ಹಿಂದೇಟು ಹಾಕುವುದು ಸರಿಯಲ್ಲ. ದೊಡ್ಡ ಹಳ್ಳಿಗಳಲ್ಲಿ ಶಾಖೆಯನ್ನು ತೆರೆಯಬೇಕು ಎಂದ ಅವರು, ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯನ್ನು ಒಂದು ತಿಂಗಳೊಳಗೆ ಪ್ರಾರಂಭಿಸಬೇಕು. ಶಿಗ್ಗಾಂವಿ ತಾಲೂಕು ಚಂದಾಪುರ ಗ್ರಾಮದಲ್ಲಿ ಕೆವಿಜಿ ಶಾಖೆಗಳನ್ನು ಡಿಸೆಂಬರ್ ಒಳಗೆ ತೆರೆಯಲು ನಿರ್ದೇಶನ ನೀಡಿದರು.ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತೆರೆಯಲು ಕಳೆದ 10ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ ಪ್ರಾದೇಶಿಕ ಕಚೇರಿ ಆರಂಭವಾಗಲಿದೆ. ಕೆಸಿಸಿ ಬ್ಯಾಂಕ್ ಇರುವುದೇ ರೈತರಿಗಾಗಿ, ಕಾರಣ ರೈತರಿಗೆ ಹೆಚ್ಚಿನ ಸಾಲ ನೀಡಬೇಕು ಎಂದರು.ಸಮರ್ಪಕ ಬೆಳೆ ಸಮೀಕ್ಷೆಗೆ ತಾಕೀತು: 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರು. 67 ಕೋಟಿಯಷ್ಟು ಬೆಳೆ ವಿಮೆ ಪರಿಹಾರ ಬರಬೇಕಿದೆ. ಇದನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರೆ, ಅವರು ಬೆಳೆ ಸಮೀಕ್ಷೆಯ ವಿಡಿಯೋ ತೋರಿಸಿದ್ದಾರೆ. ಜಿಲ್ಲಾಡಳಿತ ಇವರು ಸರಿಯಾಗಿ ಬೆಳೆ ಕಟಾವು ಸಮೀಕ್ಷೆ ನಡೆಸಿಲ್ಲ. ಕೃಷಿ ಇಲಾಖೆ ಸಗಣಿ ಸಾರಿಸುವ ಕೆಲಸ ಮಾಡಬಾರದು. ಕಚೇರಿಯಲ್ಲಿ ಕುಳಿತು ಬೆಳೆ ಕಟಾವು ಪರೀಕ್ಷೆ ನಡೆಸಬಾರದು. ಕೃಷಿ ಇಲಾಖೆಯ ಕಾರ್ಯದರ್ಶಿಗಳು, ವಿಮಾ ಕಂಪನಿಯವರು ಸಲ್ಲಿಸಿರುವ ಆಕ್ಷೇಪಗಳಿಗೆ ಸರಿಯಾಗಿ ಉತ್ತರಿಸಬೇಕು. ರೈತರಿಗೆ ಪರಿಹಾರ ಬರದಿದ್ದರೆ ಅದಕ್ಕೆ ಕೃಷಿ ಇಲಾಖೆಯೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ನಬಾರ್ಡ್ ಡಿಡಿಎಂ ರಂಗನಾಥ ಎಸ್., ಆರ್ ಬಿಐ ಎಲ್ ಡಿಒ ಮೋನಿರಾಜ ಬ್ರಹ್ಮ, ಕೆವಿಜಿ ಬ್ಯಾಂಕ್‌ನ ಸೋಮಶೇಖರ್ ನಾಯಾರಿ, ಕೆನರಾ ಬ್ಯಾಂಕ್‌ನ ಎಂ.ಸಂಜೀವಕುಮಾರ ಇದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ನಿರ್ವಹಿಸಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಹೆಚ್ಚಿಸಿ: ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿದ್ದರೆ ಕೇವಲ 60 ಸಾವಿರ ಕಿಸಾನ್ ಕ್ರೆಡಿಟ್ ಕಾರ್ಡ್ ಇವೆ. ಕಾರ್ಡ್ ಇದ್ದರೆ ಬೆಳೆ ಸಾಲ ಪಡೆದಿದ್ದರೂ ಹೆಚ್ಚುವರಿಯಾಗಿ ಹೈನುಗಾರಿಕೆಗೆ ರು.2 ಲಕ್ಷ ಸಾಲ ಪಡೆಯಲು ಅವಕಾಶವಿದೆ ಎಂಬು ನಬಾರ್ಡ್ ಬ್ಯಾಂಕ್ ವ್ಯವಸ್ಥಾಪಕರು ಗಮನ ಸೆಳೆದರು. ಆಗ ಸಂಸದರು ಪಶುಪಾಲನೆ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆಯವರು ಸೇರಿ ಕನಿಷ್ಠ 60 ಸಾವಿರ ಕ್ರೆಡಿಟ್ ಕಾರ್ಡ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ನಿಗದಿತ ಅವಧಿಯಲ್ಲಿ ಬೆಳೆ ವಿಮಾ ಪರಿಹಾರ ಸಿಗುವಂತಾಗಬೇಕು: ಮುಂಗಾರು ಬೆಳೆ ಹಾನಿಯಾದರೆ ಹಿಂಗಾರು ಆರಂಭವಾಗುವುದಕ್ಕಿಂತ ಪೂರ್ವದಲ್ಲೇ ಬೆಳೆವಿಮಾ ಪರಿಹಾರ ಸಿಗಬೇಕು. ಹಿಂಗಾರು ಬೆಳೆಹಾನಿಯಾದರೆ ಮುಂಗಾರು ಆರಂಭಕ್ಕಿಂತ ಪೂರ್ವದಲ್ಲೇ ಪರಿಹಾರ ಸಿಗುವಂತಾಗಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಾನೂ ಕೇಂದ್ರದ ಸಚಿವರ ಗಮನಕ್ಕೆ ತರುತ್ತೇನೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.