ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ದಸರಾ ಹಬ್ಬದ ಅಂಗವಾಗಿ ತಡರಾತ್ರಿ ಆರಂಭವಾದ ಪೇಟೆ ರೇಣುಕಾ ಯಲ್ಲಮ್ಮ ದೇವಿ ರಥೋತ್ಸವದ ಸಂಭ್ರಮ ಮಾರನೇ ದಿನದ ಬೆಳಗ್ಗೆಯವರೆಗೂ ಜರುಗಿತು. ಸುತ್ತಲಿನ ಗ್ರಾಮಗಳ ಭಕ್ತ ಸಮೂಹ ಮೆರವಣಿಗೆಯನ್ನು ಕಣ್ಮು ತುಂಬಿಕೊಂಡಿತು.ಮಾಗಿಕೆರಿ ಬೀರಲಿಂಗೇಶ್ವರ ಬಂಡಿ ಸಾಗಿದ ನಂತರ ಬಂಕಾಪುರ ಅರಳೇಲೆಹಿರೇಮಠದ ರೇವಣಶಿದ್ದೇಶ್ವರ ಶಿವಾಚಾರ್ಯರು ಪೇಟೆ ರೇಣುಕಾ ಯಲ್ಲಮ್ಮದೇವಿ ರಥೋತ್ಸವಕ್ಕೆ ಚಾಲನೆ ನೀಡಿದರು. ಯಲ್ಲಮ್ಮದೇವಿ ದೇವಸ್ಥಾನದ ಆವರಣದಿಂದ ಆರಂಭವಾದ ರಥೋತ್ಸವ ಮೆರವಣಿಗೆ ಪಟ್ಟಣದ ಸಿಂಪಿ ಗಲ್ಲಿ, ಪೇಟೆ ರಸ್ತೆ, ಕೊಟ್ಟಿಗೇರಿ, ಬ್ರಾಹ್ಮಣ ಓಣಿ, ರೇಣುಕಾ ಟಾಕೀಜ್ ಓಣಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಅಹೋರಾತ್ರಿ ಸಂಚರಿಸಿತು.ಮಹಿಳೆಯರು, ಮಕ್ಕಳು ರಥೋತ್ಸವಕ್ಕೆ ಹಣ್ಣು, ಕಾಯಿ, ಉತ್ತತ್ತಿ ಹಾಗೂ ಹೂಮಾಲೆಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ರುದ್ರಾಣಿ ಮಹಿಳಾ ಬಳಗದಿಂದ ರುದ್ರಪಠಣ, ಶಿರಡಿ ಸಾಯಿ ಸೇವಾ ಸಮಿತಿ, ಪಂಚಾಚಾರ್ಯ ಸಂಘ, ಬಂಗಾರ ಬಸವಣ್ಣ ಸಮಿತಿ, ಕಲ್ಮೇಶ್ವರ ಭಜನಾ ಸಂಘ, ಮಲ್ಲಿಕಾರ್ಜುನ ಯುವಕ ಸಂಘದ ಸಮಿತಿಯಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ, ಹುಬ್ಬಳ್ಳಿ ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜ್ಜಂಪೀರ್ ಎಸ್.ಖಾದ್ರಿ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಸೇರಿದಂತೆ ವಿವಿಧ ಗಣ್ಯರು ಯಲ್ಲಮ್ಮದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.ಪೇಟೆ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸಪ್ಪ ಸೊಪ್ಪಿನ. ಉಪಾಧ್ಯಕ್ಷ ನಿಂಗಪ್ಪ ಕೋರಿ, ಮುಖಂಡರಾದ ನೀಲಕಂಠಪ್ಪ ನರೇಗಲ್, ಡಾ.ರಾಜು ಇಳಗೇರ, ಚಂದ್ರು ಕೋರಿ, ರವಿ ಕುರಗೋಡಿ, ರವಿ ನರೆಗಲ್ಲ, ಮಹೇಶ ಪುಕಾಳೆ, ಉಮೇಶ ಮಾಳಗಿಮನಿ, ಸುಭಾಸ ಮುದ್ರಗಣಿ, ರವಿ ಮಾಳಗಿಮನಿ, ದೇವಪ್ಪ ಹಳವಳ್ಳಿ, ಯಲ್ಲಪ್ಪ ಸಿಂಗಪುರ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು, ಹಾಗೂ ಪಟ್ಟಣದ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಕ್ತಿ ಭಾವದಿಂದ ಪಾಲ್ಗೊಂಡಿದ್ದರು.