- ಮೈಕ್ರೋಫೈನಾನ್ಸ್- ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹಣಕಾಸು ಸಂಸ್ಥೆಗಳಿಗೆ ಲಾಭ ಗಳಿಕೆ ಜೊತೆಗೆ ಸಾರ್ವಜನಿಕರು ಮತ್ತು ಗ್ರಾಹಕರ ಹಿತಾಸಕ್ತಿ ಜೊತೆಗೆ ವಸೂಲಾತಿಯಲ್ಲಿ ನಿಯಮಗಳ ಪಾಲನೆ ಮುಖ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಮೈಕ್ರೋಫೈನಾನ್ಸ್, ಖಾಸಗಿ ಬ್ಯಾಂಕಿಂಗ್ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಿದರು.ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಸಾಲ ಮರುಪಾವತಿ ಮಾಡದ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಗಲಾಟೆ ಮಾಡುವುದು, ಬೆದರಿಕೆ ಹಾಕುವುದು ಅಥವಾ ಅಮಾನವೀಯವಾಗಿ ನಡೆದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಸೂಲಾತಿ ಏಜೆಂಟರು ತಮ್ಮ ಧೋರಣೆ ಬದಲಾಯಿಸಿಕೊಂಡು ಕಾನೂನು ಚೌಕಟ್ಟಿನಲ್ಲಿ ಶಾಂತಿಯುತವಾಗಿ ವ್ಯವಹರಿಸಬೇಕು ಎಂದರು.
ಸಂಸ್ಥೆಯ ಎಲ್ಲ ಹಂತಗಳಲ್ಲೂ ಗ್ರಾಹಕರ ವಹಿವಾಟು ನಡೆಸುವಾಗ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಹಠಾತ್ತಾಗಿ ಅಥವಾ ಏಕಪಕ್ಷೀಯವಾಗಿ ಯಾವುದೇ ಕ್ರಮ ಕೈಗೊಳ್ಳದೇ, ಮಾನವೀಯ ದೃಷ್ಟಿಕೋನದಿಂದ ಹಾಗೂ ನಿಯಮಾವಳಿಗಳ ಚೌಕಟ್ಟಿನಲ್ಲಿ ವ್ಯವಹರಿಸಬೇಕು. ಕೃಷಿಕರು ಅಥವಾ ಗ್ರಾಹಕರು ಮಳೆ ಅಭಾವ ಅಥವಾ ನೈಸರ್ಗಿಕ ಸಂಕಷ್ಟಗಳಿಂದ ಸಾಲ ಮರುಪಾವತಿಸಲು ಕಷ್ಟಪಡುತ್ತಿದ್ದರೆ, ಸಂಸ್ಥೆ ಆಡಳಿತ ಮಂಡಳಿಯ ಅನುಮೋದನೆ ಪಡೆದು ಸಾಲ ಮರುಪಾವತಿ ಅವಧಿಯನ್ನು ಪುನರ್ ರಚಿಸಲು (ಉದಾಹರಣೆಗೆ 40 ಕಂತುಗಳ ಬದಲಿಗೆ 60 ಕಂತುಗಳಾಗಿ ವಿಸ್ತರಿಸಲು) ಅವಕಾಶ ನೀಡಬೇಕು ಎಂದರು.
ಗ್ರಾಹಕರಿಗೆ ಸಾಲ ನೀಡುವ ಮುನ್ನ ಅವರ ಮರುಪಾವತಿ ಸಾಮರ್ಥ್ಯ ಮತ್ತು ಸಿಬಿಲ್ ಸ್ಕೋರ್ ಕಡ್ಡಾಯವಾಗಿ ಪರಿಶೀಲಿಸಬೇಕು. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲ ನೀಡುವುದು ಅಥವಾ 2ಕ್ಕಿಂತ ಹೆಚ್ಚು ಸಂಸ್ಥೆಗಳಿಂದ ಸಾಲ ನೀಡುವುದನ್ನು ತಡೆಯಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಎಪಿಎಂಸಿ ಅಧಿಕಾರಿಗಳು, ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು /ಪದಾಧಿಕಾರಿಗಳು ಉಪಸ್ಥಿತರಿದ್ದರು.
(ಬಾಕ್ಸ್)
ರೈತರು ಮೋಸ ಹೋದ ನಂತರ ಪೊಲೀಸ್ ಠಾಣೆಗೆ ದೂರು ನೀಡಲು ಅಲೆಯುವುದನ್ನು ತಪ್ಪಿಸಲು, ಕೊಯ್ಲಿನ ಸಮಯದಲ್ಲೇ ಅವರಿಗೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕೆಲಸವಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮಗಳಿಗೆ ಎಪಿಎಂಸಿ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ. ಯಾವುದೇ ಲೋಪದೋಷ ಕಂಡುಬಂದಲ್ಲಿ ಜಾಗೃತಿ ದಳ ಹಾಗೂ ಎಪಿಎಂಸಿಯಿಂದ ಸೂಕ್ತ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರೈತರಿಗೆ ತೊಂದರೆಯಾಗಬಾರದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು /ಪದಾಧಿಕಾರಿಗಳು ಸಾಲ ಮರುಪಾವತಿ ಮಾಡದ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಗಲಾಟೆ ಮಾಡುವುದು, ಬೆದರಿಕೆ ಹಾಕುವುದನ್ನು ಬಿಡಬೇಕು, ಕಾನೂನು ಚೌಕಟ್ಟಿನಡಿ ಶಾಂತಿಯುತವಾಗಿ ವ್ಯವಹರಿಸಬೇಕು, ಗ್ರಾಹಕರ ವಹಿವಾಟು ನಡೆಸುವಾಗ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳನ್ನ ಪಾಲಿಸಬೇಕು. ಇನ್ನು ಮುಂದೆ ಯಾವುದೇ ಗ್ರಾಹಕರು ಜಿಲ್ಲಾಡಳಿತಕ್ಕೆ ದೂರು ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
- - --23ಕೆಡಿವಿಜಿ36:
ದಾವಣಗೆರೆಯ ಡಿಸಿ ಕಚೇರಿ ಸಭಾಂಗಣದಲ್ಲಿ ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳೊಂದಿಗೆ ಸಭೆ ನಡೆಯಿತು.