ಬ್ಯಾಂಕ್ ಸೇವೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಲಿ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jun 10, 2026, 02:15 AM IST
ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ನೀಡುತ್ತಿದ್ದರೂ ಎಲ್ಲ ರೈತರಿಗೆ ಅದರ ಸೌಲಭ್ಯ ದೊರೆಯುವುದಿಲ್ಲ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ವಿತರಿಸಿ ರೈತರನ್ನು ಬೆಂಬಲಿಸಬೇಕು.

ಗದಗ: ಬ್ಯಾಂಕಿಂಗ್ ಸೇವೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು. ರೈತರು, ದಲಿತರು, ಹಿಂದುಳಿದ ವರ್ಗದವರು ಹಾಗೂ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು.ಮಂಗಳವಾರ ಮಧ್ಯಾಹ್ನ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ(ಡಿಎಲ್‌ಆರ್‌ಸಿ) ಹಾಗೂ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ(ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರ ಅಭಿವೃದ್ಧಿಯೇ ದೇಶದ ಆರ್ಥಿಕತೆಯ ಮೂಲಾಧಾರವಾಗಿದ್ದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದರು.ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ನೀಡುತ್ತಿದ್ದರೂ ಎಲ್ಲ ರೈತರಿಗೆ ಅದರ ಸೌಲಭ್ಯ ದೊರೆಯುವುದಿಲ್ಲ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ವಿತರಿಸಿ ರೈತರನ್ನು ಬೆಂಬಲಿಸಬೇಕು. ಕೃಷಿ ಕ್ಷೇತ್ರದಲ್ಲಿ ಶೇ. 1ರಷ್ಟು ಅಭಿವೃದ್ಧಿಯಾದರೆ ಉತ್ಪಾದನಾ ಕ್ಷೇತ್ರದಲ್ಲಿ ಶೇ. 4 ಮತ್ತು ಸೇವಾ ಕ್ಷೇತ್ರದಲ್ಲಿ ಶೇ. 10ರಷ್ಟು ಬೆಳವಣಿಗೆ ಸಾಧ್ಯವಾಗುತ್ತದೆ. ರೈತ ಕೇವಲ ಉತ್ಪಾದಕನಲ್ಲ, ಆತ ದೊಡ್ಡ ಗ್ರಾಹಕನೂ ಆಗಿದ್ದಾನೆ. ರೈತರ ಕೊಳ್ಳುವ ಶಕ್ತಿ ಹೆಚ್ಚಿದಾಗ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವಿಸ್ತಾರವಾಗುತ್ತವೆ ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ. ಸ್ವಸಹಾಯ ಸಂಘಗಳು, ಮಹಿಳಾ ಗುಂಪುಗಳು, ಸಣ್ಣ ಕೈಗಾರಿಕೆಗಳು ಹಾಗೂ ಯುವ ಉದ್ಯಮಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಸಾಲ ಸೌಲಭ್ಯ ಒದಗಿಸಬೇಕು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಬ್ಯಾಂಕುಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ್ ಎಂ.ವಿ. ಮಾತನಾಡಿ, 2026ರ ಮಾರ್ಚ್‌ ತ್ರೈಮಾಸಿಕ ಅಂತ್ಯದ ವೇಳೆಗೆ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ಜಿಲ್ಲೆ ಶೇ. 98.73ರಷ್ಟು ಗುರಿ ಸಾಧನೆ ಮಾಡಿದೆ. ಕೃಷಿ ವಲಯದಲ್ಲಿ ಶೇ. 99.54, ಎಂಎಸ್‌ಎಂಇ ವಲಯದಲ್ಲಿ ಶೇ. 93.72, ಶಿಕ್ಷಣ ವಲಯದಲ್ಲಿ ಶೇ. 100.03, ವಸತಿ ವಲಯದಲ್ಲಿ ಶೇ. 89.22 ಹಾಗೂ ಇತರೆ ವಲಯಗಳಲ್ಲಿ ಶೇ. 105.67ರಷ್ಟು ಪ್ರಗತಿ ದಾಖಲಾಗಿದೆ. ಜಿಲ್ಲೆಯ ತಾಲೂಕುವಾರು ಆದ್ಯತಾ ವಲಯದಲ್ಲಿ ಗದಗನಲ್ಲಿ ಶೇ. 93.93, ಗಜೇಂದ್ರಗಡದಲ್ಲಿ ಶೇ. 107.54, ಲಕ್ಷ್ಮೇಶ್ವರದಲ್ಲಿ ಶೇ. 156.32, ಮುಂಡರಗಿಯಲ್ಲಿ ಶೇ. 96.67, ನರಗುಂದದಲ್ಲಿ ಶೇ. 110.26, ರೋಣದಲ್ಲಿ ಶೇ. 95.39 ಹಾಗೂ ಶಿರಹಟ್ಟಿಯಲ್ಲಿ ಶೇ. 78.12ರಷ್ಟು ಗುರಿ ಸಾಧನೆಯಾಗಿದೆ ಎಂದರು.ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಈವರೆಗೆ ಒಟ್ಟು 7093 ಅರ್ಜಿಗಳು ಮಂಜೂರಾಗಿದ್ದು, ಅವುಗಳಲ್ಲಿ 6944 ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೇ ಸಭೆಯಲ್ಲಿ ಜಿಲ್ಲೆಯ ಬ್ಯಾಂಕಿಂಗ್ ಪ್ರಗತಿ, ಸಾಲ ವಿತರಣೆ, ಸ್ವಸಹಾಯ ಸಂಘಗಳ ಹಣಕಾಸು ಸ್ಥಿತಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.ನರಗುಂದ‌ ಶಾಸಕ ಸಿ.ಸಿ. ಪಾಟೀಲ, ಜಿಪಂ ಸಿಇಒ ಸಿ.ಎನ್. ಶ್ರೀಧರ್, ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಆರ್‌ಬಿಐ ಅಧಿಕಾರಿ ವಿಜಯಶ್ರೀ, ನಬಾರ್ಡನ ಎಜಿಎಂ ಹನುಮಂತರಾಜು, ಎಸ್‌ಬಿಐನ ರಿಜಿನಲ್ ಮ್ಯಾನೇಜರ್‌ ರಾಘವೇಂದ್ರ ರಾವ್, ಲೀಡ್ ಬ್ಯಾಂಕಿನ ಮ್ಯಾನೇಜರ್‌ ಸಂತೋಷಕುಮಾರ ಸೇರಿದಂತೆ ಬ್ಯಾಂಕಿನ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ.15ರೊಳಗೆ ಸಣ್ಣ ನೀರಾವರಿ ಗಣತಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ
ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ