ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jun 10, 2026, 02:15 AM IST
ಗಜೇಂದ್ರಗಡದಲ್ಲಿ ಎಸ್‌ಎಫ್‌ಐ ವತಿಯಿಂದ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಾದ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಡೆಸ್ಕ್ ಹಾಗೂ ಸಮವಸ್ತ್ರ ಕೊರತೆ ಕಾಣುತ್ತಿದೆ.

ಗಜೇಂದ್ರಗಡ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಫ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.ಈ ವೇಳೆ ಎಸ್‌ಎಫ್‌ಐ ಸಂಘಟನೆ ಮುಖಂಡ ಗಣೇಶ ರಾಥೋಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಾದ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಡೆಸ್ಕ್ ಹಾಗೂ ಸಮವಸ್ತ್ರ ಕೊರತೆ ಕಾಣುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣವೇ ಶಾಲೆಗಳಿಗೆ ಮೂಲ ಸೌಕರ್ಯಗಳ ಜತೆಗೆ ಹಾಸ್ಟೆಲ್‌ಗಳನ್ನು ಪ್ರಾರಂಭಿಸಬೇಕು ಎಂದರು.

ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಬಸ್ ಸಂಚಾರ ಆರಂಭಿಸಿ, ಸೈಕಲ್ ಯೋಜನೆಯನ್ನು ಮರುಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ಡೊನೇಷನ್ ಹಾವಳಿ ನಿಯಂತ್ರಿಸಲು ಡೇರಾ ಕಮಿಟಿಯನ್ನು ರಚಿಸಲು ನಿರ್ದೇಶನಗಳು ಇದ್ದರೂ ಈವರೆಗೂ ಡೇರಾ ಕಮಿಟಿಯನ್ನು ರಚಿಸಿದ ಕುರಿತು ಜಿಲ್ಲಾಧಿಕಾರಿಗಳೇ ಗಮನಕ್ಕೂ ಮತ್ತು ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಅವರಿಗೂ ನೇರವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಮುಖಂಡ ಚಂದ್ರು ರಾಥೋಡ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ೬೯೮ ಸರ್ಕಾರಿ ಶಾಲೆಗಳು ಪ್ರಾರಂಭದಲ್ಲಿದ್ದು, ಅದರಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಶಾಲೆಗಳು ಪ್ರಾರಂಭವಾಗಿ ಸುಮಾರು ೧೦ ದಿನ ಕಳೆದರೂ ಸಂಬಂಧಿಸಿದ ಇಲಾಖೆಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಶಿಕ್ಷಕರ ನೇಮಕಾತಿಯಾಗಬೇಕಿದೆ. ತಾಲೂಕಿನಲ್ಲಿ ಕೆಲ ಸರ್ಕಾರಿ ಶಾಲೆಗಳು ಶಿಥಿಲಾವ್ಯವಸ್ಥೆಯಲ್ಲಿ ನರಳುತ್ತಿವೆ. ಹೀಗಾಗಿ ಬೇಡಿಕೆಗಳ ಈಡೇರಿಕೆ ಆಡಳಿತ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು. ಈ ವೇಳೆ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ಫಣೀಬಂದ, ಪಿಎಸ್‌ಐ ಪ್ರಕಾಶ ಡಿ ಹಾಗೂ ಅನಿಲ ಆರ್., ಶರಣು ಮಾಟರಂಗಿ ಸೇರಿ ಇತರರು ಇದ್ದರು.

ಕೃಷಿ ಭೂಮಿ ಉಳಿಸಿ ಅಭಿಯಾನ

ಗದಗ: 2026- 27ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಸಿದ್ಧತೆಗಾಗಿ ಜೂ. 1ರಿಂದ ಜೂ. 30ರ ವರೆಗೆ ಜಿಲ್ಲಾದ್ಯಂತ ಕೃಷಿ ಭೂಮಿ ಉಳಿಸಿ ಮತ್ತು ಜಮೀನು ಸಂರಕ್ಷಿಸಿ(ಖೇತ ಬಚಾವೊ) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಐಸಿಎಆರ್- ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಆತ್ಮ ಯೋಜನೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಜೂ. 8ರಂದು ಮುಂಡರಗಿ ತಾಲೂಕಿನ ಕದಾಂಪುರ, ಚುರ್ಚಿಹಾಳ ಹಾಗೂ ಗದಗ ತಾಲೂಕಿನ ಹೊಸಳ್ಳಿ ಮತ್ತು ಬೆಳಧಡಿ ಗ್ರಾಮಗಳಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು.ಅಭಿಯಾನದಲ್ಲಿ ಪಾಲ್ಗೊಂಡಿದ್ದ ಕೃಷಿ ವಿಜ್ಞಾನಿಗಳು ರಸಗೊಬ್ಬರಗಳನ್ನು ಸಮತೋಲಿತವಾಗಿ ಬಳಸಿ ಜಮೀನು ಹಾಗೂ ಮಣ್ಣಿನ ರಕ್ಷಣೆ ಮಾಡಬೇಕೆಂದು ರೈತರಿಗೆ ಕರೆ ನೀಡಿದರು. ಬೀಜೋಪಚಾರ, ಮಣ್ಣಿನ ರಕ್ಷಣೆ, ನೈಸರ್ಗಿಕ ಕೃಷಿ, ಪರ್ಯಾಯ ಬೆಳೆ ಪದ್ಧತಿಗಳು, ಜೈವಿಕ ಗೊಬ್ಬರಗಳ ಜತೆಗೆ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ ಮತ್ತು ಎರೆಹುಳು ಗೊಬ್ಬರ ಬಳಕೆ ಮಾಡುವ ಕುರಿತು ಮಾಹಿತಿಯನ್ನು ನೀಡಿದರು.

ವಿಶೇಷ ಅಭಿಯಾನದಲ್ಲಿ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳು, ಆತ್ಮ ಯೋಜನೆಯ ಸಿಬ್ಬಂದಿ, ಕೃಷಿ ಸಖಿಯರು, ಪಶು ಸಖಿಯರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಪ್ರಗತಿಪರ ರೈತರು ಪಾಲ್ಗೊಂಡಿದ್ದರು. ವಿವಿಧ ಗ್ರಾಮಗಳ 30 ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ.15ರೊಳಗೆ ಸಣ್ಣ ನೀರಾವರಿ ಗಣತಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ
ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ