ಕಾಂಗ್ರೆಸ್‌ ಶೀಘ್ರ ನಿರ್ನಾಮ: ಬಿಎಸ್‌ ಯಡಿಯೂರಪ್ಪ ಭವಿಷ್ಯ

ಎಲ್ಲಿಯೇ ಹೋದರೂ ಮೋದಿ ಮೋದಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಮ್ಮೆ ಎಲ್ಲರೂ ಭಗವಂತ ಖೂಬಾ ಅವರಿಗೆ ಕೈ ಜೋಡಿಸಿ ಎರಡನೇ ಬಾರಿ ಕೇಂದ್ರ ಸಚಿವನಾಗಿ ಮಾಡಬೇಕು ಖೂಬಾ ಅವರು ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತಾರೆ ಎಂಬ ಭರವಸೆ ಇದೆ ಎಂದರು.

KannadaprabhaNewsNetwork | Published : Apr 25, 2024 7:17 PM IST / Updated: Apr 26 2024, 08:52 AM IST

 ಔರಾದ್‌ :  ಭ್ರಷ್ಟಾಚಾರದಲ್ಲಿ ಮುಳುಗಿ ದಿವಾಳಿ ಆಗಿರುವ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ನಮ್ಮ ನರೇಂದ್ರ ಮೋದಿ ಅವರಿಗೆ ಹೋಲಿಕೆ ಮಾಡುವಂತ ಸಮರ್ಥ ವ್ಯಕ್ತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನುಡಿದರು.

ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಸುಳ್ಳು ಮತ್ತು ಅಪಪ್ರಚಾರ ಮಾಡಿಕೊಂಡು ಹೊರಟಿರುವ ಕಾಂಗ್ರೆಸ್‌ಗೆ ರಾಜ್ಯದ ಜನ ಬೇರು ಸಮೇತ ಕಿತ್ತೆಸೆಯಲಿದ್ದಾರೆ ಎಂದು ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ವಾತಾವರಣ ಅನುಕೂಲಕರವಾಗಿದೆ‌‌. ನಾವು ಯಾವುದೇ ರೀತಿಯಲ್ಲಿಯೂ ಜಾತಿ ರಾಜಕಾರಣ ಮಾಡದೇ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಬೇಧ ಭಾವ ಇಲ್ಲದೇ ಎಲ್ಲರ ಬೆಂಬಲದೊಂದಿಗೆ ಗೆಲ್ಲುತ್ತೇವೆ. ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ ಎಂದರು.

ಎಲ್ಲಿಯೇ ಹೋದರೂ ಮೋದಿ ಮೋದಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಮ್ಮೆ ಎಲ್ಲರೂ ಭಗವಂತ ಖೂಬಾ ಅವರಿಗೆ ಕೈ ಜೋಡಿಸಿ ಎರಡನೇ ಬಾರಿ ಕೇಂದ್ರ ಸಚಿವನಾಗಿ ಮಾಡಬೇಕು ಖೂಬಾ ಅವರು ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತಾರೆ ಎಂಬ ಭರವಸೆ ಇದೆ ಎಂದರು.

ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ರಾಜಕೀಯಕ್ಕೆ ಬರುವ ಮುನ್ನವೇ ಇಷ್ಟೊಂದು ಸುಳ್ಳು ಹೇಳುವ ಸಾಗರ ಖಂಡ್ರೆ, ಜನರ ದಾರಿ ತಪ್ಪಿಸುವದರಲ್ಲಿ ತಂದೆಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ ಆದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಪ್ಪ ಮಕ್ಕಳ ಜೊತೆ ಯಾವುದೇ ರೀತಿ ವ್ಯವಹಾರ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ದಿ. ಗುರುಪಾದಪ್ಪ ನಾಗಮಾರಪಳ್ಳಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅವಿನಾಭಾವ ಸಂಬಂಧವಿದೆ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಯಾವುದೇ ರೀತಿಯಲ್ಲಿ ಆಲೋಚನೆ ಮಾಡದೇ ನಮ್ಮ ತಂದೆ ಅವರು ಕೆಜೆಪಿ ಪಕ್ಷಕ್ಕೆ ಸೇರಿದವರು, ನಾಗಮಾರಪಳ್ಳಿ ಪರಿವಾರದ ಹಿತೈಷಿಗಳ ಒಂದು ಮತ ಕೂಡ ಬೇರೆ ಪಕ್ಷಕ್ಕೆ ಹೋಗದೆ ಕಮಲದ ಗುರುತಿಗೆ ಮತ ಹಾಕುವುದರ ಮೂಲಕ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿಬೇಕೆಂದು ಮನವಿ ಮಾಡಿಕೊಂಡರು.ಸಭೆ ಅಂತ್ಯದವರೆಗೆ ನಾಗಮಾರಪಳ್ಳಿ ಹೆಸರಿನಲ್ಲಿ ಜೈ ಘೋಷಣೆ:

ಬಹಿರಂಗ ಸಭೆಯ ಪ್ರಾರಂಭದಿಂದ ಅಂತ್ಯದವರೆಗೂ ಗುರುಪಾದಪ್ಪ ನಾಗಮಾರಪಳ್ಳಿ, ಉಮಾಕಾಂತ ನಾಗಮಾರಪಳ್ಳಿ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಅವರ ಹೆಸರಿನಲ್ಲಿ ಸಭೆಯ ಅಂತ್ಯದ ವರೆಗೆ ಜೈ ಘೋಷಣೆ ಮೊಳಗಿದವು.ಗೈರಾದ ಪ್ರಭು ಚವ್ಹಾಣ್‌, ಹೆಸರು ಪ್ರಸ್ತಾಪಿಸದ ಬಿಎಸ್‌ವೈ, ಖೂಬಾ:

ಗುರುವಾರ ಪಟ್ಟಣದಲ್ಲಿ ಜರುಗಿರುವ ಬೀದರ್‌ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ಅವರ ಪರವಾಗಿ ಬಿ.ಎಸ್ ಯಡಿಯೂರಪ್ಪ ಅವರ ಬೃಹತ್ ಬಹಿರಂಗ ಸಭೆಗೆ ಔರಾದ್ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ್‌ ಅವರು ಗೈರು ಹಾಜರಾಗಿದ್ದರು. ಸಭೆಯ ಪ್ರಾರಂಭದಿಂದ ಅಂತ್ಯದವರೆಗೂ ವೇದಿಕೆ ಮೇಲೆ ಶಾಸಕ ಪ್ರಭು ಚವ್ಹಾಣ್‌ ಅವರು ಹೆಸರನ್ನು ಯಾರು ಕೂಡ ತೆಗೆದುಕೊಳ್ಳದೇ ಇರುವುದು ಹಿತೈಷಿಗಳಲ್ಲಿ ಅಸಮಾಧಾನ ಉಂಟಾಗಿದ್ದು ಕಂಡುಬಂತು.ಔರಾದ್‌ ತಾಲೂಕು ಬಿಜೆಪಿ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಸ್ವಾಗತಿಸಿದರು, ಸಭೆಯನ್ನುದ್ದೇಶಿಸಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಚಿಂಚೋಳಿ ಶಾಸಕ ಅವಿನಾಶ ಜಾಧವ್‌, ಸಂಭಾಜಿ ಪಾಟೀಲ್‌, ರಾಜೇಶ್ವರ ನಿಟ್ಟೂರೆ ಕೂಡ ಮಾತನಾಡಿದರು. ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೇರಿದಂತೆ ಮತ್ತಿತರರು ಇದ್ದರು.

Share this article