ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ ಲೂಯಿಸ್ ಮತ್ತು ಬ್ಯಾಂಕ್ ಅಧಿಕಾರಿ ಅಮೀರ್ ಪಟೇಲ್ ಅವರ ತಂಡ, ತಡೆ ಹಿಡಿದಿದ್ದ ಹಾಗೂ ಕಡಿತಗೊಳಿಸಿದ್ದ ಹಣ ನಗದೀಕರಣಕ್ಕೆ ಅನುಕೂಲವಾಗುವಂತೆ ಪುನಾರಂಭಿಸಿದ್ದಾರೆ.
ಬರ ಪರಿಹಾರ, ಸಾಮಾಜಿಕ ಪಿಂಚಣಿ, ಭಾಗ್ಯಲಕ್ಷ್ಮಿ, ನರೇಗಾ ಕೂಲಿ ಹಣ, ಗ್ಯಾಸ್ ಸಬ್ಸಿಡಿ ವಾಪಸ್ ಜಮೆಯಾಗಿ ಅವರೆಲ್ಲ ನಗದೀಕರಿಸಿಕೊಂಡಿದ್ದಾರೆ. ಅನೇಕ ರೈತರುಗಳು, ಫಲಾನುಭವಿಗಳು ಆಯಾ ಬ್ಯಾಂಕುಗಳಿಗೆ ತೆರಳಿ, ಸಾಲಕ್ಕೆ ಜಮೆ ಮಾಡಿದ್ದ ಬರ ಪರಿಹಾರ ಹಣ ಹಿಂಪಡೆಯುತ್ತಿದ್ದಾರೆ."ಬರ ಹಣ ರೈತರ ಸಾಲಕ್ಕೆ ಜಮೆ " ಹಾಗೂ "ಪಿಂಚಣಿ, ನರೇಗಾ ಕೂಲಿ ಹಣವೂ ಸಾಲಕ್ಕೆ ಜಮೆ " ಶೀರ್ಷಿಕೆಯಡಿ ಮೇ 15 ರಂದು ಮೇ 17 ರಂದು "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿಗಳು ಸಂಚಲನ ಮೂಡಿಸಿದ್ದವು. "ಬರ ಪರಿಹಾರದ ಮೊತ್ತ ರೈತರ ಸಾಲಕ್ಕೆ ಜಮೆ ಸಲ್ಲದು " ಎಂಬುದಾಗಿ ಮೇ 18 ರಂದು ಕನ್ನಡಪ್ರಭದಲ್ಲಿ ಸಂಪಾದಕೀಯ ಪ್ರಕಟಗೊಂಡಿತ್ತು.
ಇಂತಹ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಎಲ್ಲ ಬ್ಯಾಂಕುಗಳಿಗೆ ಪತ್ರ ಬರೆದು ಎಚ್ಚರಿಸಿದ್ದರು. ಡೀಸಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಗರೀಮಾ ಪನ್ವಾರ್ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆದು, ಹಣ ಮರುಪಾವತಿಗೆ ಸೂಚಿಸಿದ್ದರು. ಕೊನೆಗೆ, "ಕನ್ನಡಪ್ರಭ " ಈ ವರದಿಗಳು ರೈತಾಪಿ/ಫಲಾನುಭವಿಗಳ ವಲಯದಲ್ಲಿ ನಿಟ್ಟುಸಿರು ಮೂಡಿಸಿವೆ.