ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಾಗೂ ರೈತರಿಗೆ ನೋಟಿಸ್ ನೀಡಿದರೆ ಬ್ಯಾಂಕ್‌ಗಳಿಗೆ ಬೀಗ ಹಾಕಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನಿಂದ ರೈತರಿಗೆ ನೋಟಿಸ್ ನೀಡಿದ್ದು, ನೈಸರ್ಗಿಕ ವಿಪತ್ತಿನಡಿ ಕೃಷಿ ಸಾಲದ ರಿನೀವಲ್ ಮಾಡಿಕೊಳ್ಳುವಂತೆ ಹೆದರಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
2013ರಿಂದಲೂ ರೈತರು ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು ಬೇರೆ ಬ್ಯಾಂಕ್‌ಗಳಲ್ಲಿ ಶೇ.10 ರಷ್ಟು ಪಾವತಿ ಮಾಡಿಸಿಕೊಂಡು ಸಾಲ ಮುಕ್ತಗೊಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಸಾಲ ಮುಕ್ತಗೊಳಿಸಲು ಎಲ್ಲಾ ಬ್ಯಾಂಕ್‌ನ ಮ್ಯಾನೇಜರ್‌ಗೆ ಮನವಿ ಮಾಡಲಾಗಿದೆ. ಆದರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮ್ಯಾನೇಜರ್‌ಗಳು ರೈತರು ಒಟಿಎಸ್ ಹೋದ ಸಂದರ್ಭದಲ್ಲಿ ಇತ್ಯರ್ಥ ಮಾಡದೇ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.ಕರ್ನಾಟಕ ಗ್ರಾಮೀಣ ಬ್ಯಾಂಕ್‌ನವರು ರೈತರಿಗೆ ಇದೇ ರೀತಿಯಲ್ಲಿ ನೋಟಿಸ್ ನೀಡಿ ಕಿರುಕಳ ನೀಡಿದರೆ ಜಿಲ್ಲಾದ್ಯಂತ ರೈತರು ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ 4 ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಫಸಲು ನಾಶವಾಗಿದ್ದು ಸರ್ಕಾರ 2 ತಿಂಗಳಾದರೂ ಪರಿಹಾರ ನಷ್ಠವನ್ನು ನೋಂದಣಿ ಮಾಡುವ ಲಾಗಿನ್ ತೆರೆದಿಲ್ಲ. ಲಾಗಿನ್ ತೆರೆದರೆ ಮಾತ್ರ ಗ್ರಾಮಲೆಕ್ಕಾಧಿಕಾರಿ ಫಸಲು ನಷ್ಟ ನೋಂದಣಿ ಮಾಡಲು ಸಾಧ್ಯ. ಆದರೆ ಲಾಗಿನ್ ತೆರೆಯದೇ ರೈತರಿಗೆ ಪರಿಹಾರ ದೊರಕಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ಪಿಎಂ ಫಸಲ್ ಬಿಮಾ ಯೋಜನೆಯಡಿ ಪೂರ್ವ ಮುಂಗಾರಿನಲ್ಲಿ ಜಿಲ್ಲೆಯ 12,229 ರೈತರು ವಿವಿಧ ಬೆಳೆಗಳಿಗೆ ವಿಮೆ ಹಣ ಸಂದಾಯ ಮಾಡಿದ್ದಾರೆ. ಅಲ್ಲದೆ ಹಿಂಗಾರಿನಲ್ಲಿ 2,289 ರೈತರು ಹಣ ಸಂದಾಯ ಮಾಡಿದ್ದಾರೆ. ಈ ವರ್ಷ ಸರ್ಕಾರವೇ ಬರಗಾಲ ಘೋಷಣೆ ಮಾಡಿದ್ದು ವಿಮಾ ಕಂಪನಿಯವರು ರೈತರ ಖಾತೆಗೆ ಹಣ ಜಮಾ ಮಾಡಿಲ್ಲ. ಪ್ರತಿಭಟನೆ ಮಾಡಿದ ಪರಿಣಾಮ 1368 ರೈತರಿಗೆ ಅಲ್ಪಸ್ವಲ್ಪ ಹಣ ಬಂದಿದೆ. ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿ ಅವರು ಇಳುವರಿ ಹೆಚ್ಚಿದೆ ಎಂದು ತೋರಿಸಿರುವುದರಿಂದ ರೈತರಿಗೆ ಪರಿಹಾರ ಬಂದಿಲ್ಲ. ಆದ್ದರಿಂದ ಸುಳ್ಳು ಲೆಕ್ಕ ತೋರಿಸಿರುವ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದರು.
ಹುತ್ತೂರು ಕೆರೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ವಡಗೆರೆ ಕೆರೆ ತುಂಬಿದಾಗ ನೀರು ನಿಲ್ಲಿಸಿದ್ದಾರೆ. ಆದರೆ ಉಳಿದ 7 ಕೆರೆಗಳಿಗೆ ನೀರಿಲ್ಲ. ಆದ್ದರಿಂದ 4ನೇ ಹಂತವಾಗಿ ನೀರನ್ನು ಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು. 16 ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕಳೆದ ಮೇ ತಿಂಗಳಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ 14 ದಿನ ಕಳೆದರೂ ಜಿಲ್ಲಾಧಿಕಾರಿ ರೈತರೊಂದಿಗೆ ಸಭೆ ನಡೆಸಲು ಮುಂದಾಗದಿಲ್ಲ. ಜಿಲ್ಲಾಡಳಿತ ರೈತರನ್ನು ನಿರ್ಲಕ್ಷ್ಯ ಮಾಡಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಕಾರ್ಯಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ರೈತ ಮುಖಂಡರಾದ ಭೂಪತಿ, ಮಲ್ಲಣ್ಣ ಇದ್ದರು.