ರೈತರ ಸಾಲ ಒಟಿಎಸ್‌ಗೆ ಬ್ಯಾಂಕ್‌ಗಳು ಸಹಕರಿಸಿ: ಕೇಂದ್ರ ಸಚಿವ ಎಚ್‌ಡಿಕೆ

KannadaprabhaNewsNetwork |  
Published : Jun 29, 2025, 01:36 AM IST
28ಕೆಎಂಎನ್‌ಡಿ-6ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಆನ್‌ಲೈನ್‌ ಮೂಲಕ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಪಂ ಸಿಇಓ ಕೆ.ಆರ್‌.ನಂದಿನಿ ಹಾಜರಿದ್ದರು.  | Kannada Prabha

ಸಾರಾಂಶ

ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ (ಒನ್ ಟೈಮ್ ಸೆಟಲ್ ಮೆಂಟ್) ಮಾಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೂಕ್ತ ಮಾರ್ಗದರ್ಶನ ಮಾಡಬೇಕು ಹಾಗೂ ಪುನಃಸಾಲ ನೀಡಬೇಕು. ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಸಾಲದ ಬಡ್ಡಿ ಹೆಚ್ಚಾಗಿದೆ ಎಂದು ದಿನವೂ ದೂರುಗಳು ಬರುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ (ಒನ್ ಟೈಮ್ ಸೆಟಲ್ ಮೆಂಟ್) ಮಾಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೂಕ್ತ ಮಾರ್ಗದರ್ಶನ ಮಾಡಬೇಕು ಹಾಗೂ ಪುನಃ ಸಾಲ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬ್ಯಾಂಕ್‌ಗಳಿಗೆ ಸೂಚಿಸಿದರು.

ಮಂಡ್ಯದಲ್ಲಿ ನಡೆದ ಜಿಲ್ಲಾ ಬ್ಯಾಂಕರುಗಳ ಸಭೆಯಲ್ಲಿ ಆನ್‌ಲೈನ್‌ ವೇದಿಕೆ ಮೂಲಕ ಭಾಗಿಯಾಗಿ ಮಾತನಾಡಿದ ಸಚಿವರು, ನಾನಾ ಉದ್ದೇಶಗಳಿಗೆ ರೈತರು ಪಡೆಯುವ ಸಾಲಗಳಿಗೆ ಬಡ್ಡಿ ಜಾಸ್ತಿ ಎನ್ನುವ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಏಕಕಾಲಕ್ಕೆ ತಮ್ಮ ಸಾಲವನ್ನು ಪಾವತಿ ಮಾಡಲು ಮುಂದಾಗುತ್ತಿದ್ದಾರೆ. ಅಂತಹ ರೈತರಿಗೆ ಬ್ಯಾಂಕ್‌ಗಳು ಸಹಕರಿಸಬೇಕು ಎಂದರು.

ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಸಾಲದ ಬಡ್ಡಿ ಹೆಚ್ಚಾಗಿದೆ ಎಂದು ದಿನವೂ ದೂರುಗಳು ಬರುತ್ತಿವೆ. ಅದಕ್ಕಾಗಿಯೇ ಅವರು ಒಂದೇ ಬಾರಿಗೆ ಹಣ ಪಾವತಿ ಮಾಡಲು ಶ್ರಮಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೌಜನ್ಯದಿಂದ ವರ್ತಿಸಬೇಕು. ರೈತರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಠಿಣವಾಗಿ ನಡೆದುಕೊಳ್ಳಬೇಡಿ ಎಂದು ಕೇಂದ್ರ ಸಚಿವರು ಸ್ಪಷ್ಟ ಸೂಚನೆ ಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅನೇಕ ಯೋಜನೆಗಳ ಮೂಲಕ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಅವರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳ ಸೌಲಭ್ಯಗಳನ್ನು ಜಾರಿಗೆ ತಲುಪಿಸುವ ಕೆಲಸವನ್ನು ಬ್ಯಾಂಕ್‌ಗಳು ಉತ್ತಮವಾಗಿ ಮಾಡುತ್ತಿವೆ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಕರು, ಮಹಿಳೆಯರು, ಕೃಷಿಕರು ಕೇಂದ್ರದ ಯೋಜನೆಗಳ ಸೌಲಭ್ಯ ಪಡೆಯಲು ಬ್ಯಾಂಕ್‌ಗಳು ಸೇತುವೆಯಾಗಿವೆ. ಇದು ಮತ್ತಷ್ಟು ವಿಸ್ತೃತವಾಗಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ವಾರ್ಷಿಕ ಆರ್ಥಿಕ ಕ್ರೆಡಿಟ್ ರಿಪೋರ್ಟ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯ್ತಿ ಸಿಇಒ ನಂದಿನಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಜಿಲ್ಲೆಯ ಬ್ಯಾಂಕ್‌ಗಳ ಮುಖ್ಯಸ್ಥರು ಭಾಗಿಯಾಗಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?