ಸಾರಾಂಶ
ಆರ್‌ಎಸ್‌ಎಸ್ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಮಹಾರಾಷ್ಟ್ರದ ಲಾತೂರ್‌ನಲ್ಲಿ ಬಂಧಿಸಲಾಗಿದೆ.
ಕಲಬುರಗಿ : ಆರ್‌ಎಸ್‌ಎಸ್ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಮಹಾರಾಷ್ಟ್ರದ ಲಾತೂರ್‌ನಲ್ಲಿ ಬಂಧಿಸಲಾಗಿದೆ.
ಸೋಲಾಪುರದ ಮೂಲದವನಾದ ದಿನೇಶ್ ಬುಧವಾರದಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ, ಅವಾಚ್ಯ ಪದಗಳನ್ನು ಪ್ರಯೋಗಿಸಿದ್ದನು. ಜೊತೆಗೆ ಪ್ರಿಯಾಂಕ್ ಅವರ ಸೋದರಿ, ತಾಯಿ ಬಗ್ಗೆಯು ಕೆಟ್ಟ ಪದ ಪ್ರಯೋಗಿಸಿದ್ದನು ಎಂದು ಸಚಿವರು ಆಡಿಯೋ ಬಿಡುಗಡೆ ಮಾಡಿದ್ದರು. ಬಳಿಕ ದಿನೇಶ್ ಲಾತೂರಿಗೆ ಪರಾರಿಯಾಗಿದ್ದನು.
ಘಟನೆ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಕಲಬುರಗಿ ಮತ್ತು ಬೆಂಗಳೂರು ಪೊಲೀಸರು ಲಾತೂರ್‌ಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಸದಾಶಿವನಗರ ಠಾಣೆಗೆ ಕರೆದೊಯ್ಯಲಾಗಿದೆ. ವಿಚಾರಣೆ ವೇಳೆ ದಿನೇಶ್ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಡದಾಳದವನೆಂದು ಹೇಳಿಕೊಂಡಿದ್ದು, ಆದರೆ ಬಡದಾಳದಲ್ಲಿ ಅಂತಹ ಯಾವುದೇ ವ್ಯಕ್ತಿ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.