ಸಾರಾಂಶ
ಹುಬ್ಬಳ್ಳಿ:
ಕಾಂಗ್ರೆಸ್ ತನ್ನ ವೈಫಲ್ಯ ಮುಚ್ಚಿಕೊಳ್ಳಲು ದಿನ ಬೆಳಗಾದರೆ ಒಂದೊಂದು ವಿವಾದ ಸೃಷ್ಟಿಸುತ್ತಿದೆ. ಇದೇ ಕಾರಣಕ್ಕೆ ಈಗ ಆರ್‌ಎಸ್‌ಎಸ್ ನಿರ್ಬಂಧದ ವಿಷಯ ಮುನ್ನೆಲೆಗೆ ತಂದಿದೆ. ಆರ್‌ಎಸ್‌ಎಸ್ ನಿರ್ಬಂಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ. ಅಪರಾಧಿ, ಅಪರಾಧಿಕ ಮನಃಸ್ಥಿತಿಯವರ ಜತೆಗೆ ಕಾಂಗ್ರೆಸ್ ಸರ್ಕಾರ ನಿಂತಿದೆ. ವರ್ಗಾವಣೆ ಹೆಸರಿನಲ್ಲಿ ಹಗರಣ ನಡೆಯುತ್ತಿದೆ. ಕಾಂಗ್ರೆಸ್ ತಾನು ಮಾಡಿದ ಅಕ್ರಮದ ಸತ್ಯ ಮರೆಮಾಚಲು ದಿನ ಬೆಳಗಾದರೆ ಹೊಸ ಹೊಸ ವಿವಾದ ಹುಟ್ಟಿಸುತ್ತಿದೆ. ಅದರಂತೆ 100 ವರ್ಷಗಳ ಇತಿಹಾಸ ಹೊಂದಿರುವ ಆರ್‌ಎಸ್‌ಎಸ್ ಮೇಲೆ ಕಾಂಗ್ರೆಸ್ ಸರ್ಕಾರ ನಿರ್ಬಂಧ ಹೇರಲು ಹೊರಟಿದೆ. ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ 1925ರಲ್ಲಿ ಆರಂಭವಾದ ಆರ್‌ಎಸ್‌ಎಸ್ ಸಂಘದಿಂದ ಯಾರಿಗೂ ತೊಂದರೆಯಾಗಿಲ್ಲ. ಅದರ ಬಗ್ಗೆ ಮಾತನಾಡುವವರು ಶಾಖೆಗೆ ಹೋಗಿ ಅಲ್ಲಿನ ಅನುಭವ ಪಡೆದುಕೊಂಡ ಬಳಿಕ ಮಾತನಾಡಲಿ ಎಂದರು.
ಹುಬ್ಬಳ್ಳಿ-ಅಂಕೋಲಾ ಅನುಷ್ಠಾನ:ಹುಬ್ನಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಹುಬ್ಬಳ್ಳಿಯಲ್ಲಿ ಅಡಿಗಲ್ಲು ಹಾಕಿದ ಕಾರ್ಯಕ್ರಮಕ್ಕೆ ನಾನೂ ಸಾಕ್ಷಿಯಾಗಿದ್ದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಅಶ್ವಿನಿ ವೈಷ್ಣವ್, ವಿ. ಸೋಮಣ್ಣ ಅವರಿಗೂ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು ಎಂಬ ಬಯಕೆಯಿದೆ. ಈ ಕುರಿತು ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಒದಗಿಸಲಾಗಿದೆ. ಅದು, ಸರ್ಕಾರದ ವಿವಿಧ ಹಂತಗಳಲ್ಲಿ ಇದೆ. ಎಲ್ಲವನ್ನೂ ಸರಿಪಡಿಸಿ ಯೋಜನೆಯ ಅನುಷ್ಠಾನಕ್ಕೆ ನಿರಂತರ ಪ್ರಯತ್ನ ನಡೆದಿದೆ ಎಂದು ಕಾಗೇರಿ ಹೇಳಿದರು.
ಯಾವುದೇ ಪ್ರಗತಿಯಾಗಿಲ್ಲ:ಉತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕವಾಗಿದೆ. ಈ ಸಂಬಂಧ ಆ ಭಾಗದ ಜನರಿಂದ ಹಲವು ವರ್ಷಗಳಿಂದ ಬೇಡಿಕೆಯಿದೆ. ಆಸ್ಪತ್ರೆ ನಿರ್ಮಾಣಕ್ಕೆ ಕುಮಟಾ ತಾಲೂಕಿನಲ್ಲಿ ಸ್ಥಳ ಗುರುತಿಸಲಾಗಿತ್ತು. ಅದಕ್ಕೆ ಕೇಂದ್ರವು ಒಪ್ಪಿಗೆ ಸಹ ನೀಡಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ರಂಗಾ ಬದ್ದಿ, ರವಿ ನಾಯಕ ಸೇರಿದಂತೆ ಹಲವರಿದ್ದರು.