ಅಕ್ರಮ ಪಿಸ್ತೂಲ್‌ ಮಾರಾಟಗಾರರಿಗೆನಿಷೇಧಿತ ಪಿಎಫ್‌ಐ ನಂಟು ಬಯಲು

KannadaprabhaNewsNetwork | Published : Mar 15, 2025 1:02 AM

ಸಾರಾಂಶ

ಅಕ್ರಮ ಪಿಸ್ತೂಲ್ ಮಾರಾಟ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಈ ಸಂಬಂಧ ಕೇರಳ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಕ್ರಮ ಪಿಸ್ತೂಲ್ ಮಾರಾಟ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಈ ಸಂಬಂಧ ಕೇರಳ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ವಿಚಾರಣೆ ವೇಳೆ ಆರೋಪಿಗಳು ನಿಷೇಧಿತ ಪಿಎಫ್‌ಐ ಜೊತೆ ನಂಟು ಹೊಂದಿದ್ದು ಬೆಳಕಿಗೆ ಬಂದಿದೆ. ಹೀಗಾಗಿ, ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ನಿಷೇಧಕ್ಕೆ ಒಳಗಾಗಿದ್ದ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆ ಮತ್ತೆ ಕರಾವಳಿಯಲ್ಲಿ ಸಕ್ರಿಯಗೊಂಡಿದೆಯೇ? ಎಂಬ ಸಂಶಯ ಕಾಡುತ್ತಿದೆ.

ಅಕ್ರಮ ಪಿಸ್ತೂಲ್ ಮಾರಾಟಕ್ಕೆ ಸಂಬಂಧಿಸಿ ಕೇರಳ ಮೂಲದ ಖತರ್ನಾಕ್ ಕ್ರಿಮಿನಲ್‌ಗಳಾದ ಅಬ್ದುಲ್ ಲತೀಫ್, ಮನ್ಸೂರು, ನೌಫಾಲ್, ಮಹಮ್ಮದ್ ಅಸ್ಗರ್ ಹಾಗೂ ಮಹಮ್ಮದ್ ಸಾಲಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು‌ ಪಿಸ್ತೂಲ್ ಹಾಗೂ ಗುಂಡುಗಳನ್ನು ಪೊಲೀಸರು ವಶಪಡಿಸಿದ್ದಾರೆ. ಈ ವೇಳೆ, ಮುಂಬೈನಿಂದ ನಡೆಯುತ್ತಿರುವ ಬೃಹತ್ ಅಕ್ರಮ ಪಿಸ್ತೂಲ್ ಸರಬರಾಜು ಜಾಲ ಬೆಳಕಿಗೆ ಬಂದಿದೆ.

ಆರೋಪಿಗಳು ಸಮಾಜಘಾತಕ ಶಕ್ತಿಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದುದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ಲತೀಫ್‌, ಪಿಎಫ್‌ಐ ಮುಖಂಡರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದ. ವಾಮಂಜೂರಿನಲ್ಲಿ ಮಿಸ್ ಫೈರ್‌ ಪ್ರಕರಣದಲ್ಲಿ ಬಂಧಿತರಿಗೆ ಅಬ್ದುಲ್‌ ಲತೀಫ್‌ ಪಿಸ್ತೂಲ್ ನೀಡಿದ್ದ. ಈ ಪ್ರಕರಣದಲ್ಲಿ ಬಂಧಿತ ಬದ್ರುದ್ದೀನ್ ಮತ್ತು ಇಮ್ರಾನ್ ಇಬ್ಬರೂ ನಿಷೇಧಿತ ಪಿಎಫ್‌ಐ ಮುಖಂಡರಾಗಿದ್ದರು. ರೌಡಿ ಶೀಟರ್ ಬದ್ರುದ್ದೀನ್ ಪಿಸ್ತೂಲ್‌ನಿಂದ ಗುಂಡು ಹಾರಿದ್ದು, ಈತನಿಗೆ ಲತೀಫ್‌ ಪಿಸ್ತೂಲ್‌ ನೀಡಿದ್ದ. ಈ ಪ್ರಕರಣದಲ್ಲಿ ಇಮ್ರಾನ್‌ ಗಂಭೀರವಾಗಿ ಗಾಯಗೊಂಡಿದ್ದು, ಈತನಿಗೆ ಪಿಸ್ತೂಲ್ ಸರಬರಾಜು ಮಾಡಿದ್ದೇ ಲತೀಫ್.

ಹೀಗಾಗಿ, ಪಿಎಫ್‌ಐ ಮುಖಂಡರ ಅಸಲಿ ಗುರಿ ಯಾರು ಆಗಿದ್ದರು?, ಕೇರಳದಿಂದ ಗನ್ ಮಂಗಳೂರಿಗೆ ಬಂದಿದ್ದಾದರೂ ಯಾಕೆ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಅಬ್ದುಲ್‌ ಲತೀಫ್‌ ಇನ್ನೂ ಹಲವೆಡೆ ಪಿಸ್ತೂಲ್‌ ಸರಬರಾಜು ಮಾಡಿರುವುದು ಪತ್ತೆಯಾಗಿದ್ದು, ಈ ಬಗ್ಗೆಯೂ ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದಾರೆ.

Share this article