-ನಾಳೆ ಅಗ್ನಿಕೊಂಡ ಮಹೋತ್ಸವ
ನಗರದ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ನಗರದ ಶಕ್ತಿ ದೇವತೆ. ಸುಮಾರು 400 ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಿದ್ದಾರೆ. ಜುಲೈ16ರಂದು ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ, ಜುಲೈ 17ರಂದು ಅಗ್ನಿಕೊಂಡ ಮಹೋತ್ಸವ ನಡೆಯಲಿದೆ.
ಮಹೋತ್ಸವದ ಹಿನ್ನೆಲೆ ಏನು:400 ವರ್ಷಗಳ ಹಿಂದೆ ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿ ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು. ಇದರಿಂದ ಸಂತೋಷಗೊಂಡ ಅವರು, ಎಲ್ಲಿ ಎಂದು ಕೇಳಲಾಗಿ ದೇವಿಯು ‘ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು’ ಎಂದು ತಿಳಿಸಿದಳು.
ಅಂದಿನಿಂದ ಇಂದಿನವರೆಗೂ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್.ಎನ್.ಯೋಗೇಶ್ ಕರಗವನ್ನು 20ನೇ ಬಾರಿಗೆ ಧರಿಸುತ್ತಿದ್ದಾರೆ.
‘ಆದರೆ ಈಗ ರಾಮನಗರ ನಗರ ವ್ಯಾಪ್ತಿ ಹೆಚ್ಚಾಗಿ ಬೆಳೆಯುತ್ತಿದೆ. ಈಗ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆಯಾಗುತ್ತದೆ’ ಎಂದರು.
‘ಬನ್ನಿಮಹಾಂಕಾಳಿ ದೇವಿಯು ಪ್ರತಿಷ್ಠಾಪನೆ ಆದಂದಿನಿಂದಲೂ ಇದುವರೆಗೆ ಹಳೆ ರಾಮನಗರ ಪ್ರಾಂತ್ಯದ ಭಾಗದಲ್ಲಿ ಯಾವುದೆ ಸಾಮೂಹಿಕ ಕಾಯಿಲೆಗಳಾಗಲಿ ಅಥವಾ ರೋಗ ರುಜಿನಗಳಾಗಲಿ ಬರುವುದಿಲ್ಲ ಎಂಬುದು ಇಲ್ಲಿನ ನಾಗರಿಕರ ನಂಬಿಕೆಯಾಗಿದೆ’ ಎಂದು ಹಿರಿಯ ಅರ್ಚಕ ಎಂ.ಎಸ್. ಸತ್ಯನಾರಾಯಣ ಪ್ರತಿಕ್ರಿಯೆ ನೀಡಿದರು.
ಸ್ಮಾರಕದಲ್ಲೇನಿದೆ?
ಕ್ಲೋಸ್ ಪೇಟೆ ಶಾಸನದ ಶಿಲಾಸ್ಮಾರಕವನ್ನು ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ಸಂರಕ್ಷಿಸಲ್ಪಟ್ಟ ಪ್ರಾಚೀನ ಸ್ಥಳವಸ್ತು (ಮಾನುಮೆಂಟ್) ಎಂದು ಘೋಷಿಸಿದೆ. ವಿದ್ಯಾರ್ಥಿಗಳು, ಸಂಶೋಧಕರು ಈ ಸ್ಮಾರಕದ ಅಧ್ಯಯನವನ್ನು ಕೈಗೊಂಡರೆ ರಾಮನಗರದ ಮತ್ತಷ್ಟು ಇತಿಹಾಸ ತಿಳಿಯಬಹುದು.