ಅಡಕೆ ಹಾಳೆ ತಟ್ಟೆಗಳಿಗೆ ನಿಷೇಧ ಹೇರಿರುವುದು ಸರಿಯಲ್ಲ: ಅಡಕೆ ಹಾಳೆ ತಟ್ಟೆತಯಾರಕರ ಸಂಘದ ಅಧ್ಯಕ್ಷ ಮಂಜುನಾಥ್‌

KannadaprabhaNewsNetwork |  
Published : Jun 01, 2025, 02:11 AM IST
ಪೋಟೋ: 31ಎಸ್‌ಎಂಜಿಕೆಪಿ02ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಡಕೆ ಹಾಳೆಯ ತಟ್ಟೆ ತಯಾರಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.  | Kannada Prabha

ಸಾರಾಂಶ

ಅಡಕೆ ಹಾಳೆ ತಟ್ಟೆಗಳಲ್ಲಿ ಅಲ್ಕಲೈಡ್ ಎಂಬ ಹಾನಿಕಾರಕದಿಂದ ಕ್ಯಾನ್ಸರ್‌ಗೆ ಕಾರಣವಾಗುವಂತಹ ಅಂಶವಿದೆ ಎಂದು ಯುಎಸ್‌ಎಯ ಎಫ್‌ಡಿಎ ಕಾರಣ ನೀಡಿ, ಭಾರತದಿಂದ ಆಮದಾಗುತ್ತಿರುವ ಅಡಕೆ ಹಾಳೆಯ ತಟ್ಟೆಗಳಿಗೆ ನಿಷೇಧ ಹೇರಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಈ ನಿಷೇಧವನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಅಡಕೆ ಹಾಳೆ ತಟ್ಟೆ ತಯಾರಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಡಕೆ ಹಾಳೆ ತಟ್ಟೆಗಳಲ್ಲಿ ಅಲ್ಕಲೈಡ್ ಎಂಬ ಹಾನಿಕಾರಕದಿಂದ ಕ್ಯಾನ್ಸರ್‌ಗೆ ಕಾರಣವಾಗುವಂತಹ ಅಂಶವಿದೆ ಎಂದು ಯುಎಸ್‌ಎಯ ಎಫ್‌ಡಿಎ ಕಾರಣ ನೀಡಿ, ಭಾರತದಿಂದ ಆಮದಾಗುತ್ತಿರುವ ಅಡಕೆ ಹಾಳೆಯ ತಟ್ಟೆಗಳಿಗೆ ನಿಷೇಧ ಹೇರಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಈ ನಿಷೇಧವನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಅಡಕೆ ಹಾಳೆ ತಟ್ಟೆ ತಯಾರಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಫ್‌ಡಿಎಯ ಆಮದು ನಿಷೇಧದಿಂದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳಲ್ಲಿನ ಅಡಿಕೆಹಾಳೆ ತಯಾರಕ ಘಟಕಗಳಿಗೆ ಭಾರೀ ನಷ್ಟವುಂಟಾಗಲಿದೆ. ಬೇರೆ ತರಹದ ಉತ್ಪನ್ನಗಳ ಲಾಭಿಗೆ ಮತ್ತು ಭಾರತದ ವಿರುದ್ಧ ಟ್ರೇಡ್‌ವಾರ್‌ನಿಂದಾಗಿ ಆಮದು ನಿಷೇಧಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಅಡಕೆ ಹಾಳೆ ತಟ್ಟೆ ರಫ್ತಿನಿಂದ ವಾರ್ಷಿಕ 3500 ಕೋಟಿ ರು. ವಹಿವಾಟು ನಡೆಯುತ್ತಿದೆ. 17 ದೇಶಗಳು ಅಡಿಕೆಹಾಳೆ ತಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದವು. ಎಫ್‌ಡಿಎ ಆಮದು ನಿಷೇಧ ಹೇರಿರುವುದರಿಂದ ಉಳಿದ ರಾಷ್ಟ್ರಗಳು ಸಹ ಆಮದು ಮಾಡಿಕೊಳ್ಳಲು ಹಿಂದೆ ಸರಿಯುತ್ತಿವೆ. ಇದರಿಂದಾಗಿ ಅಡಕೆಹಾಳೆ ತಟ್ಟೆ ತಯಾರಕರು ನಿರ್ಗತಿಕರಾಗುವ ಆತಂಕ ಹೆಚ್ಚಾಗಿದೆ ಎಂದರು.

ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಅಡಕೆಹಾಳೆ ತಟ್ಟೆ ತಯಾರಿಕಾ ಘಟಕಗಳಿದ್ದು, 60 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಈ ಉದ್ಯೋಗವನ್ನು ನಂಬಿಕೊಂಡಿದ್ದಾರೆ. ಆಮದು ನಿಷೇಧದಿಂದ ಘಟಕಗಳಿಗೆ ಭಾರೀ ನಷ್ಟವುಂಟಾಗಲಿದೆ. ಇದರಿಂದ ಉದ್ಯೋಗಿಗಳು ಸಹ ಉದ್ಯೋಗವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದರು.

ರಾಜ್ಯದಲ್ಲಿ ಅಡಿಕೆಹಾಳೆ ತಟ್ಟೆ ತಯಾರಿಕೆ ನಿಂತಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಬೀದಿಗೆ ಬರಲಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಈ ನಿಷೇಧವನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಗುರುಪ್ರಸಾದ್, ಜೈಪಾಲ್, ಸೋಮಣ್ಣ, ರಾಮಣ್ಣ, ಬೋಜಪ್ಪ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ