ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಬನ್ನೂರು ಮಾರ್ಗದ ರಸ್ತೆ ಸಂಚಾರಕ್ಕೆ ಅಯೋಗ್ಯವೆನಿಸುವಷ್ಟು ರೀತಿಯಲ್ಲಿ ಕುಲಗೆಟ್ಟುಹೋಗಿದೆ. ಹರಿದು ಛಿದ್ರವಾಗಿರುವ, ಹಳ್ಳಗಳಿಂದ ತುಂಬಿಕೊಂಡಿರುವ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವೆನಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಂತೂ ರಸ್ತೆ ಅಭಿವೃದ್ಧಿ ಕಾಣಲಿಲ್ಲ. ಹೊಸ ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ.ಅಮೃತ ಭವನ ನವೀಕರಣ ಕಾರ್ಯಕ್ಕೆ ಮೀಸಲಿರಿಸಿದ್ದ ₹೧.೭೫ ಕೋಟಿ ಹಣವನ್ನು ಬನ್ನೂರು ಮಾರ್ಗದ ರಸ್ತೆ ಅಭಿವೃದ್ಧಿಗೆ ಬಳಸುವುದಾಗಿ ಶಾಸಕ ಪಿ.ರವಿಕುಮಾರ್ ಹೇಳಿ ಎರಡು ತಿಂಗಳೇ ಕಳೆದಿದೆ. ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಇದು ಜನಪ್ರತಿನಿಧಿಗಳ ಬೇಜವಾಬ್ದಾರಿತನವೋ, ಅಧಿಕಾರಿಗಳ ನಿರ್ಲಕ್ಷ್ಯವೋ ತಿಳಿಯದೆ ಸಾರ್ವಜನಿಕರು ಹಿಡಿಶಾಪ ಹಾಕಿಕೊಂಡೇ ನಿತ್ಯ ಸಂಚರಿಸುವಂತಾಗಿದೆ.
ಅಭಿವೃದ್ಧಿ ಕಾಣದೆ ಅನಾಥ:ನಗರದ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಿಂದ ಆರಂಭವಾಗಿ ಶ್ರೀಚಾಮುಂಡೇಶ್ವರಿ ದೇವಸ್ಥಾನದವರೆಗೂ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರತಿಷ್ಠಿತ ಬಡಾವಣೆಗಳಾದ ಶಂಕರನಗರ, ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ, ಅನ್ನಪೂರ್ಣೇಶ್ವರಿ ಬಡಾವಣೆ, ಕೆಇಬಿ ಕಾಲೋನಿಗೆ ತೆರಳುವವರು ನಿತ್ಯ ಇದೇ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ. ಬನ್ನೂರು, ಅರಕೆರೆ, ಕೊತ್ತತ್ತಿ, ಟಿ.ನರಸೀಪುರ, ಮೈಸೂರು ಸೇರಿದಂತೆ ವಿವಿಧೆಡೆ ಕಡೆಗೆ ತೆರಳುವ ಬಸ್ಸುಗಳು ಇದೇ ಮಾರ್ಗವಾಗಿ ಸಾಗಿಬರುತ್ತಿವೆ. ಸದಾ ವಾಹನಗಳ ಸಂಚಾರದಿಂದ ಕೂಡಿರುವ ರಸ್ತೆ ದಶಕಗಳಿಂದ ಅಭಿವೃದ್ಧಿ ಕಾಣದೆ ಅನಾಥವಾಗಿದೆ.
ಈ ರಸ್ತೆ ಅಭಿವೃದ್ಧಿಗೆ ತೆಗೆದಿರಿಸಿರುವ ₹೧.೭೫ ಕೋಟಿ ಹಣದಿಂದ ಶ್ರೀಕನ್ನಿಕಾ ಪಪರಮೇಶ್ವರಿ ದೇವಸ್ಥಾನದಿಂದ ಶ್ರೀಗೌರಿಶಂಕರ ಕಲ್ಯಾಣ ಮಂಟಪದವರೆಗೆ ರಸ್ತೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಆದರೆ, ಹಣವಿದ್ದರೂ ಕಾಮಗಾರಿ ಆರಂಭ ವಿಳಂಬವಾಗುತ್ತಿರುವುದು ಸಾರ್ವಜನಿಕರ ತಾಳ್ಮೆಯನ್ನು ಪರೀಕ್ಷಿಸುತ್ತಿರುವಂತಿದೆ.ಸಂಚಾರಕ್ಕೆ ಅಯೋಗ್ಯವಾದ ರಸ್ತೆ:
ನಗರ ವ್ಯಾಪ್ತಿಯಲ್ಲಿರುವ ಬನ್ನೂರು ಮಾರ್ಗದ ರಸ್ತೆಯು ವಾಹನಗಳ ಸಂಚಾರಕ್ಕೆ ಅಯೋಗ್ಯವೆನಿಸುವಷ್ಟು ಕುಲಗೆಟ್ಟುಹೋಗಿದೆ. ಹಲವೆಡೆ ರಸ್ತೆ ಮೇಲ್ಮೈ ಕಿತ್ತು ಬಂದಿದ್ದರೆ, ಹಲವಾರು ಕಡೆಗಳಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಿಂದ ಪಾರಾಗಿ ವಾಹನಗಳನ್ನು ಸಂಚರಿಸುವುದಕ್ಕೆ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ. ದ್ವಿಚಕ್ರವಾಹನ ಸವಾರರಿಗಂತೂ ಈ ಮಾರ್ಗದ ಸಂಚಾರ ದೊಡ್ಡ ಸವಾಲಾಗಿದೆ.ಈ ಹಿಂದೆ ರಸ್ತೆಗೆ ತೇಪೆ ಹಾಕುವ ಕಾರ್ಯ ನಡೆದಿತ್ತು. ಅದು ಸಂಪೂರ್ಣ ಕಳಪೆಯಿಂದ ಕೂಡಿದ್ದ ಪರಿಣಾಮ ರಸ್ತೆಯ ಮೇಲ್ಭಾಗಕ್ಕೆ ಹಾಕಿದ್ದ ಸಣ್ಣ ಸಣ್ಣ ಜಲ್ಲಿಕಲ್ಲುಗಳು ಮೇಲೆದ್ದುಬಂದಿವೆ. ದ್ವಿಚಕ್ರ ವಾಹನಗಳು ಸಂಚರಿಸುವ ವೇಳೆ ಜಾರಿಬಿದ್ದು ಹಲವರು ಗಾಯಗೊಂಡಿದ್ದಾರೆ. ಬಸ್ಸು, ಲಾರಿ, ಟಿಪ್ಪರ್‌ನಂತಹ ಭಾರೀ ವಾಹನಗಳು ಸಂಚರಿಸಿದರೆ ಧೂಳು ಮೇಲೆದ್ದು ಅವಾಂತರ ಸೃಷ್ಟಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಯಾರೂ ಕೂಡ ರಸ್ತೆ ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು ಹಳ್ಳ-ಗುಂಡಿಗಳೊಳಗೆ ಸಾಗಬೇಕಿರುವುದರಿಂದ ಬೇಗ ರಿಪೇರಿಗೆ ಬರುತ್ತಿವೆ. ಇದರಿಂದ ವಾಹನ ಸವಾರರ ಜೇಬಿಗೆ ಕತ್ತರಿಯೂ ಬೀಳುತ್ತಿದೆ. ಹಾಳಾಗಿರುವ ರಸ್ತೆಯಿಂದ ಈ ಮಾರ್ಗದ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇದಾವುದೂ ಅಧಿಕಾರಸ್ಥರ ಕಣ್ಣಿಗೂ ಬೀಳುತ್ತಿಲ್ಲ, ಅದರ ಅನುಭವವೂ ಅವರಿಗೆ ಆಗುತ್ತಿಲ್ಲ. ವಾಹನ ಸವಾರರ ಸಂಚಾರ ರೋಧನ ಮೂಕರೋಧನವಾಗಿದೆ.ಕ್ರಿಯಾಯೋಜನೆ ತಯಾರು:
ನಗರಸಭೆ ಅಧಿಕಾರಿಗಳು ಹೇಳುವ ಪ್ರಕಾರ ಬನ್ನೂರು ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ನಗರಸಭೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಲೋಕೋಪಯೋಗಿ ಇಲಾಖೆಯಲ್ಲಿ ಅನುದಾನದ ಕೊರತೆ ಇರುವುದರಿಂದ ಶಾಸಕರ ನಿರ್ದೇಶನದಂತೆ ನಗರಸಭೆಯ ನಗರೋತ್ಥಾನ ಯೋಜನೆ-೨ ಅಡಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಸಮಿತಿಯ ಮುಂದಿಟ್ಟು ಸರ್ಕಾರಕ್ಕೆ ಕಳುಹಿಸಲಾಗುವುದು. ಅಲ್ಲಿಂದ ಒಪ್ಪಿಗೆ ದೊರೆತ ಬಳಿಕ ಅಂದಾಜುಪಟ್ಟಿ ತಯಾರಿಸಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.ತಾತ್ಕಾಲಿಕವಾಗಿ ತೇಪೆ ಕಾರ್ಯ:
ಈ ಪ್ರಕ್ರಿಯೆ ವಿಳಂಬವಾಗಲಿರುವ ಕಾರಣ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಹಾಳಾಗಿರುವ ರಸ್ತೆಗೆ ತಾತ್ಕಾಲಿಕ ತೇಪೆ ಹಾಕುವ ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ. ₹೧೬ ಲಕ್ಷ ವೆಚ್ಚದಲ್ಲಿ ನಗರ ವ್ಯಾಪ್ತಿಯಲ್ಲಿರುವ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಬಳಸಲಾಗುತ್ತಿದೆ. ಆ ಹಣದಲ್ಲೇ ಬನ್ನೂರು ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತದೆ ಎಂದು ನಗರಸಭೆ ಆಯುಕ್ತ ಆರ್.ಮಂಜುನಾಥ್ ‘ಕನ್ನಡಪ್ರಭ’ ಪತ್ರಿಕೆಗೆ ಹೇಳಿದರು.ಬನ್ನೂರು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ. ಈ ರಸ್ತೆ ಅಭಿವೃದ್ಧಿಗೆ ₹೧.೭೫ ಕೋಟಿ ಹಣ ನಿಗದಿಪಡಿಸಲಾಗಿದೆ. ಅದು ಸರ್ಕಾರದಿಂದ ಮಂಜೂರಾತಿ ದೊರಕಿದ ನಂತರ ಟೆಂಡರ್ ಕರೆದು ಅಭಿವೃದ್ಧಿಪಡಿಸಲಾಗುವುದು. ಆ ಪ್ರಕ್ರಿಯೆಯೂ ತ್ವರಿತಗತಿಯಲ್ಲಿ ನಡೆಯುತ್ತಿದೆ.
- ಪಿ.ರವಿಕುಮಾರ್, ಶಾಸಕರು, ಮಂಡ್ಯ
ಬನ್ನೂರು ರಸ್ತೆ ನಗರಸಭೆಗೆ ಇನ್ನೂ ಹಸ್ತಾಂತರಗೊಂಡಿಲ್ಲ. ಅದು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಅಭಿವೃದ್ಧಿಗೆ ನಗರಸಭೆ ಅನುದಾನವನ್ನು ಬಳಸಲಾಗುತ್ತಿದೆ. ಸದ್ಯಕ್ಕೆ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಗೊಂಡಿದ್ದು, ಅದನ್ನು ಸರ್ಕಾರಕ್ಕೆ ಕಳುಹಿಸಿ ಮಂಜೂರಾತಿ ಪಡೆಯಲು ಮೂರು ತಿಂಗಳು ಬೇಕು. ಆನಂತರ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು.- ಆರ್.ಮಂಜುನಾಥ್, ಆಯುಕ್ತರು, ಮಂಡ್ಯ