ಕನ್ನಡಪ್ರಭ ವಾರ್ತೆ ಬಂಟ್ವಾಳ
ವಾಮದಪದವು ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್.ಡಬ್ಲ್ಯು ವಿದ್ಯಾರ್ಥಿಗಳು, ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಎಂ.ಎಸ್.ಡ್ಲ್ಯು ವಿದ್ಯಾರ್ಥಿಗಳು, ಸಂತ ಅಲೋಶಿಯಲ್ ಕಾಲೇಜಿನ ಬಿ.ಎಡ್. ಶಿಕ್ಷಣ ಪ್ರಶಿಕ್ಷಾರ್ಥಿಗಳು, ಮಂಗಳೂರು ವಿವಿಯ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಇದಕ್ಕೂ ಮೊದಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲದ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ಬೀದಿ ನಾಟಕ ನಡೆಸಿಕೊಟ್ಟರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಇಂದು ಸರ್ಕಾರದ ಮಟ್ಟದಲ್ಲಿ ವಿಶೇಷಚೇತನರಿಗೆ ಅನುದಾನ ಕಾದಿರಿಸಬೇಕಾಗಿದೆ. ಇದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವಿಷಯದ ಅರಿವು ಪಡೆದುಕೊಳ್ಳಬೇಕು, ವಿಶೇಷಚೇತನ ಮಕ್ಕಳ ಗುರುತಿಸುವಿಕೆ ಪ್ರಾಥಮಿಕ ಹಂತದಲ್ಲೇ ಆಗಬೇಕಾಗಿದೆ. ಶಿಕ್ಷಕರಾದವರು ತರಗತಿಯಲ್ಲಿ ಇತರ ಮಕ್ಕಳೊಂದಿಗೆ ಹೋಲಿಸಿ, ತಾರತಮ್ಯ ಮಾಡಬಾರದು ಎಂದು ಹೇಳಿದರು.ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿ, ಆಟಿಸಂ ಕುರಿತು ಸಾಮಾಜಿಕವಾಗಿ ಅರಿವು ಮೂಡಿಸುವುದು ಅಗತ್ಯ. ಸಮಾಜ ಆಟಿಸಂ ಮಕ್ಕಳೊಂದಗೆ ಬೆರೆಯಬೇಕು, ಸಮಾಜದಲ್ಲಿ ಬಲಹೀನರಿಗೂ ಅವಕಾಶ ದೊರಕಿಸಿ ಮುಖ್ಯವಾಹಿನಿಗೆ ತರಬೇಕು ಎಂದರು.
ಸಕ್ಷಮ ಭಾರತ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಸವಲತ್ತುಗಳನ್ನು ನೀಡಲು ಸರಕಾರ ವಿಳಂಬಿಸಬಾರದು. ಕಳೆದ ಎರಡು ತಿಂಗಳಿಂದ ಮಕ್ಕಳ ಸವಲತ್ತುಗಳು ದೊರಕಿಲ್ಲ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರಸನ್ನಕುಮಾರ್, ಸರ್ಕಾರಿ ಪ್ರಥಮದರ್ಜೆ ಕಾಲೇಜು ವಾಮದಪದವು ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಉದಯಕುಮಾರ್ ಸಿ ಆರ್ ಶುಭ ಹಾರೈಸಿದರು.