ಬಂಟ್ವಾಳ: 400 ಕೆವಿ ವಿದ್ಯುತ್‌ ಪ್ರಸರಣ ಟವರ್‌ ನಿರ್ಮಾಣ ಕಾಮಗಾರಿಗೆ ರೈತ ಸಂಘ ತಡೆ

KannadaprabhaNewsNetwork |  
Published : Nov 20, 2024, 12:33 AM IST
111 | Kannada Prabha

ಸಾರಾಂಶ

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್ ಸಂತ್ರಸ್ತ ರೈತರನ್ನು ಮನವೊಲಿಸಿ ಕಾಮಗಾರಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರು.

ಕನ್ನಡಪ್ರಭ ವಾರ್ತೆ ಬಂಟ್ವಾಳ ೪೦೦ ಕೆ.ವಿ. ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಗುತ್ತಿಗೆ ಕಂಪನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆಯೇ ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂತ್ರಸ್ತ ರೈತರು ಕಾಮಗಾರಿ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಬಂಟ್ವಾಳ ಕಸ್ಬ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಿಕೆ ಎಂಬಲ್ಲಿ ಮಂಗಳವಾರ ಬೆಳಗೆ ನಡೆದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್ ಸಂತ್ರಸ್ತ ರೈತರನ್ನು ಮನವೊಲಿಸಿ ಕಾಮಗಾರಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರು.

ದರ್ಬಳಿಕೆಯ ಖಾಸಗಿ ಜಮೀನಿನಲ್ಲಿ ೪೦೦ ಕೆ.ವಿ. ವಿದ್ಯತ್ ಪ್ರಸರಣ ತಂತಿಯನ್ನು ಅಳವಡಿಸಲು ಗುತ್ತಿಗೆ ಸಂಸ್ಥೆಯಾಗಿರುವ ಸ್ಟೆರ್‌ಲೈಟ್ ಪವರ್ ಕಂಪನಿ ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಮೂಲಕ ಮರಗಳನ್ನು ಉರುಳಿಸಿ ನೆಲಸಮತಟ್ಟು ಮಾಡುವ ಕೆಲವನ್ನು ಆರಂಭಿಸಿತ್ತು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ರೈತ ಸಂಘ ಹಾಗೂ ೪೦೦ ಕೆ.ವಿ. ಸಂತ್ರಸ್ತ ರೈತರ ಹೋರಾಟ ಸಮಿತಿಯ ಪ್ರಮುಖರು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಂಪನಿ ಹಾಗೂ ಸಂತ್ರಸ್ತ ರೈತರ ಸಭೆ ನಡೆಸದೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆ, ಅರಣ್ಯ ಇಲಾಖೆಯಿಂದ ಮರ ಕಡಿಯಲು ಅನುಮತಿಯನ್ನು ಪಡೆಯದೆ ಜೆಸಿಬಿ ಮೂಲಕ ಭೂಮಿ ಅಗೆಯುತ್ತಿದ್ದಾರೆ. ಕರ್ಪೆ, ಅರಳ, ಪಂಜಿಕಲ್ಲು, ಬಿ.ಕಸ್ಬದ ರೈತರ ಸಭೆಯ ಕರೆಯ ಬೇಕೆಂದು ಹೇಳಿದರೂ ಸಭೆ ಕರೆದಿಲ್ಲ, ಯಾವ ಕಾರಣಕ್ಕೂ ವಿದ್ಯುತ್ ಲೈನ್ ಈ ಭಾಗದಲ್ಲಿ ಹಾದು ಹೋಗಲು ಬಿಡುವುದಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ತಿಳಿಸಿದರು.

ಪ್ರಮುಖರಾದ, ಬೆನೆಡಿಕ್ಟ್ ಕಾರ್ಲೋ, ಅರುಣ್ ಡಿಸೋಜ, ಅಲೆಕ್ಸ್ ಸಿಕ್ವೇರಾ, ಸಂತೋಷ್ ಪಿಂಟೊ, ರಾಮಪ್ಪ ನಾಯ್ಕ್, , ಜನಾರ್ದನ, ಕೃಷ್ಣ ನಾಯ್ಕ್, ವಿಲಿಯಂ ಪಿಂಟೋ, ರೋಷನ್ ಡಿಸೋಜಾ ಸಾಥ್ ನೀಡಿದರು. ಎಸಿ ಭೇಟಿ:

ಸ್ಟೆರ್‌ಲೈಟ್ ಕಂಪನಿಯ ಸಿಬ್ಬಂದಿಗೆ ಮುತ್ತಿಗೆ ಹಾಕಿ ಕಾಮಗಾರಿಗೆ ರೈತರು ಅಡ್ಡಪಡಿಸಿದಂತಹ ಸಂದರ್ಭ ಬಂಟ್ವಾಳ ನಗರ ಠಾಣೆಯ ಎಸ್ಸೈ ರಾಮಕೃಷ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ ಅವರು ಜಗ್ಗಿರಲಿಲ್ಲ. ಬಳಿಕ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್ ಹಾಗೂ ನಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ. ಸ್ಥಳಕ್ಕೆ ಆಗಮಿಸಿ ರೈತರನ್ನು ವಿನಂತಿಸಿದರೂ ಸಭೆ ನಡೆಸದೆ ಕಾಮಗಾರಿ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಸಹಾಯುಕ ಆಯುಕ್ತ ಹರ್ಷವರ್ಧನ್ ಅವರು ಸ್ಥಳಕ್ಕೆ ಆಗಮಿಸಿ ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು ಅನುಷ್ಠಾನಗೊಳಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಈಗಾಗಲೇ ತುಂಬಾ ತಡವಾಗಿದ್ದು ಕೇರಳಭಾಗದಲ್ಲಿ ಭಾಗಶಃ ಕೆಲಸ ಪೂರ್ಣಗೊಂಡಿದೆ. ಕಂಪನಿ ಸರಕಾರದ ವರ್ಕ್ ಆರ್ಡರ್‌ನಂತೆ ಕೆಲಸ ಮಾಡುತ್ತದೆ, ಬಂಟ್ವಾಳ ತಾಲೂಕಿನಲ್ಲಿ ೯೩ ಕಡೆಗಳಲ್ಲಿ ಟವರ್ ನಿರ್ಮಾಣ ಕೆಲಸ ಆಗಬೇಕಾಗಿದ್ದು ಅಗ್ರಿಮೆಂಟ್ ಇರುವ ಜಾಗದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ, ನಿಮ್ಮ ಆಕ್ಷೇಪಗಳಿದ್ದಲ್ಲಿ ನ್ಯಾಯಾಲಯದಲ್ಲಿ ಕಾನೂನಿನ ಮೂಲಕ ಹೋರಾಟ ಮಾಡುವಂತೆ ತಿಳಿಸಿ ಕೆಲಸ ಆರಂಭಿಸಲು ಸೂಚಿಸಿದರು.

ಇದೇ ವೇಳೆ ೪೦೦ ಕೆ.ವಿ. ವಿದ್ಯತ್ ಪ್ರಸರಣ ಯೋಜನೆಯ ಪರಿವೀಕ್ಷಣೆಗಾಗಿ ದೆಹಲಿಯಿಂದ ಬಂದಿರುವ ಅಧಿಕಾರಿಗಳ ತಂಡವೂ ಸ್ಥಳಕ್ಕೆ ಭೇಟಿ ನೀಡಿತು. ಕಂದಾಯ ನಿರೀಕ್ಷಕ ಜನಾರ್ದನ, ವಿ.ಎ. ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!