ಮಳೆ ಕೃಪೆ: ಕುಂದಿದ್ದ ನೇತ್ರಾವತಿಗೆ ಮತ್ತೆ ಜೀವಕಳೆ

KannadaprabhaNewsNetwork |  
Published : May 19, 2026, 04:00 AM IST
 ಬತ್ತಿದ್ದ ನೇತ್ರಾವತಿಗೆ ಮತ್ತೆ ಜೀವಕಳೆ  -ನೀರಿನ ಆತಂಕ ಸದ್ಯಕ್ಕೆ ದೂರ... | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿಯಲ್ಲಿ ಕೆಲವು ವಾರಗಳ ಹಿಂದೆ ನೀರಿನ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಬಿಸಿಲಿನ ತಾಪದಿಂದ ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂನ ಕೆಳ ಭಾಗದಿಂದ ಪಾಣೆಮಂಗಳೂರು ನೂತನ ಸೇತುವೆವರೆಗೆ ನದಿಯ ಹಲವೆಡೆ ನೀರು ಬತ್ತಿ ಹೋಗಿ ಮರಳು ಹಾಗೂ ಕಲ್ಲುಬಂಡೆಗಳು ಎದ್ದು ಕಾಣಿಸುತ್ತಿದ್ದವು.

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿಯಲ್ಲಿ ಕೆಲವು ವಾರಗಳ ಹಿಂದೆ ನೀರಿನ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಬಿಸಿಲಿನ ತಾಪದಿಂದ ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂನ ಕೆಳ ಭಾಗದಿಂದ ಪಾಣೆಮಂಗಳೂರು ನೂತನ ಸೇತುವೆವರೆಗೆ ನದಿಯ ಹಲವೆಡೆ ನೀರು ಬತ್ತಿ ಹೋಗಿ ಮರಳು ಹಾಗೂ ಕಲ್ಲುಬಂಡೆಗಳು ಎದ್ದು ಕಾಣಿಸುತ್ತಿದ್ದವು.

ನದಿಗೆ ಒಳ ಹರಿವು ಸಹ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಮಾತ್ರವಲ್ಲದೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕುಡಿಯುವ ನೀರಿನ ಪೂರೈಕೆ ಹಾಗೂ ಬಳಕೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿಗುತ್ತು ಸೂಚನೆ ನೀಡಿದ್ದರು.ಮಂಗಳೂರು ನಗರಕ್ಕೆ ನೀರಿನ ಕೊರತೆ ಉಂಟಾಗದಂತೆ ಜಿಲ್ಲಾಧಿಕಾರಿಗಳ ಕಚೇರಿಯೂ ಮಹತ್ವದ ಆದೇಶ ಹೊರಡಿಸಿತ್ತು. ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರದಂತೆ ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ 6 ಮೀಟರ್‌ವರೆಗೆ ನೀರನ್ನು ಬಿಡುಗಡೆಗೊಳಿಸುವಂತೆ ಸೂಚಿಸಲಾಗಿತ್ತು. ಜೊತೆಗೆ ಎಎಂಆರ್ ಅಣೆಕಟ್ಟಿನಲ್ಲಿ ಉಳಿದಿರುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸದೆ ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗಿತ್ತು.

ಮಂಗಳೂರು ನಗರಕ್ಕೆ ನೇತ್ರಾವತಿ ನದಿಯ ತುಂಬೆ ಕಿಂಡಿ ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತಿದ್ದು, ಅದರ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 10.41 ಎಂಸಿಎಂ ಆಗಿದೆ. 21-04-2026ರ ಮಾಹಿತಿಯಂತೆ ತುಂಬೆ ಡ್ಯಾಂನಲ್ಲಿ 4.71 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 18.62 ಮೀಟರ್ ನೀರಿನ ಮಟ್ಟ ದಾಖಲಾಗಿದ್ದು, ಇದು ನಗರದ ಸುಮಾರು 22 ದಿನಗಳ ಅವಶ್ಯಕತೆಗೆ ಸಾಕಾಗುವಷ್ಟು ನೀರಿನ ಲಭ್ಯತೆಯಾಗಿದೆ ಎಂದು ತಿಳಿಸಲಾಗಿತ್ತು.

ಮಳೆರಾಯನ ಕೃಪೆ:ಇದೀಗ ಕಳೆದ ಮೂರು-ನಾಲ್ಕು ದಿನಗಳಿಂದ ಘಟ್ಟ ಪ್ರದೇಶ ಹಾಗೂ ತಪ್ಪಲು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ನದಿಗೆ ಒಳಹರಿವು ಹೆಚ್ಚಿದೆ. ಜಿಲ್ಲಾಧಿಕಾರಿ ಆದೇಶದಂತೆ ಶಂಭೂರು ಎಎಂಆರ್ ಡ್ಯಾಂನಿಂದ ನೀರು ಬಿಡುಗಡೆಗೊಳಿಸಿರುವುದರಿಂದ ನೇತ್ರಾವತಿ ನದಿ ಮತ್ತೆ ತುಂಬಿ ಹರಿಯಲು ಆರಂಭಿಸಿದೆ.ಜಕ್ರಿಬೆಟ್ಟು ಡ್ಯಾಂ ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕೆಳ ಭಾಗಕ್ಕೆ ಹರಿಯಬಿಡಲಾಗಿದೆ. ಇದೀಗ ತುಂಬೆ ಡ್ಯಾಂ ಸಹ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ಹಸಿರಾಗಿ ಕಂಗೊಳಿಸುತ್ತಿದೆ. ಬಿಸಿಲಿನ ತಾಪಕ್ಕೆ ಬತ್ತಿ ಹೋಗಿ ಕಲ್ಲುಬಂಡೆಗಳು ಕಾಣಿಸುತ್ತಿದ್ದ ನದಿಯು ಈಗ ಜಲಾವೃತಗೊಂಡು ಜೀವ ಕಳೆ ಮರಳಿ ಪಡೆದಂತಾಗಿದೆ.ಸದ್ಯ ತುಂಬೆಯವರೆಗೆ ನದಿಯಲ್ಲಿ ಸಮರ್ಪಕ ಪ್ರಮಾಣದ ನೀರು ಲಭ್ಯವಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆಯಾಗಿದೆ. ಇನ್ನೂ ಕೆಲವು ದಿನಗಳು ಇದೇ ರೀತಿ ಮಳೆಯಾದರೆ ಮುಂಗಾರು ವಿಳಂಬವಾದರೂ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರದಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿ
ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿರುವ ಕಾಂಗ್ರೆಸ್‌ ಸರ್ಕಾರ