ಕನ್ನಡಪ್ರಭ ವಾರ್ತೆ ಮೂಲ್ಕಿ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ದೇವರ ಉತ್ಸವ ಬಲಿ, ಸ್ವರ್ಣ ಪಲ್ಲಕಿ ಉತ್ಸವ, ಬ್ರಹ್ಮರಥೋತ್ಸವ, ಸುಡುಮದ್ದು ಪ್ರದರ್ಶನ, ಸೂಟೆದಾರ ನೆರವೇರಿತು.ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವ ವಹಿಸಿದ್ದರು.
ಸೋಮವಾರ ಪ್ರಾತಃಕಾಲ ರಥದಿಂದ ದೇವರು ಇಳಿದು ವಿಮಾನ ರಥದಲ್ಲಿ ಶಾಂಭವಿ ನದಿಯ ತಟದ ಚಂದ್ರ ಶ್ಯಾನ ಭೋಗರ ಕುದ್ರುವಿಗೆ ತೆರಳಿ ಜಳಕವಾಗಿ ಬಳಿಕ ದೇವಳಕ್ಕೆ ಬಂದು ಜಳಕದ ಬಲಿಯಾಗಿ ಧ್ವಜಾವರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತು.ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಕಾರ್ಯನಿರ್ವಣಾಧಿಕಾರಿ ಜಯಮ್ಮ, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಶಿವಶಂಕರ್ ಮತ್ತಿತರರು ಇದ್ದರು. ಭಾನುವಾರ ರಜಾದಿನವಾಗಿದ್ದರಿಂದ ಸುಮಾರು 1 ಲಕ್ಷದಷ್ಟು ಭಕ್ತರು ರಥೋತ್ಸವದಲ್ಲಿ ಭಾಗಿಗಳಾಗಿದ್ದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ಸಂಚಾರದಿಂದ ಟ್ರಾಫಿಕ್ ಜಾಮ್ ಆಗಿದ್ದು ಸಂಚಾರಿ ಠಾಣಾ ಪೊಲೀಸರು ನಿಯಂತ್ರಣಕ್ಕೆ ಹರ ಸಾಹಸ ಪಟ್ಟರು.ರಥದ ಚಕ್ರದಿಂದ ವಾಹನಗಳಿಗೆ ಹಾನಿ:
ಬ್ರಹ್ಮರಥೋತ್ಸವದ ಪ್ರದಕ್ಷಿಣೆಯ ವೇಳೆ ಸಾವಿರಾರು ಭಕ್ತರು ರಥ ಎಳೆಯುತ್ತಿದ್ದಂತೆ ರಥ ಹೋಗುವ ದಾರಿಯಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿದ್ದ ಬೈಕ್, ಆಟೋರಿಕ್ಷಾ ಹಾಗೂ ಕಾರಿಗೆ ರಥದ ಚಕ್ರ ಡಿಕ್ಕಿ ಹೊಡೆದು ಹಾನಿಯಾಗಿದೆ.ಬಳಿಕ ರಥ ಮುಂದುವರಿಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪೈಪ್ ಲೈನ್ ಅವೈಜ್ಞಾನಿಕ ಕಾಮಗಾರಿಯ ಹೊಂಡಕ್ಕೆ ಬ್ರಹ್ಮರಥದ ಚಕ್ರ ಸಿಲುಕಿ ಹೂತು ಹೋಗಿ ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಯಿತು. ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ರಥವನ್ನು ಭಕ್ತರ ಒಗ್ಗಟ್ಟಿನಿಂದ ಹಿಂದಕ್ಕೆ ಎಳೆದು ರಥ ಮುಂದಕ್ಕೆ ಸರಾಗವಾಗಿ ಸಂಚರಿಸಿ ರಥೋತ್ಸವ ನಡೆದು ಭಕ್ತರ ಆತಂಕ ದೂರವಾಯಿತು. ಈ ನಡುವೆ ಬ್ರಹ್ಮರಥ ಎಳೆಯುವ ಸಂದರ್ಭದಲ್ಲಿ ಮರದ ಗೆಲ್ಲು ತಾಗಿ ರಥಕ್ಕೆ ಸ್ವಲ್ಪಮಟ್ಟಿಗೆ ಹಾನಿಯಾಗಿದೆ.