ಬರದ ನೆಲಕ್ಕೆ ನೀರು ಕೊಟ್ಟ ನಿರಾಳ ಮನುಷ್ಯ ಬಾಪುಗೌಡರು

KannadaprabhaNewsNetwork | Published : Nov 16, 2024 12:36 AM

ಸಾರಾಂಶ

ಶಹಾಪುರ: ಬರದ ನೆಲಕ್ಕೆ ನೀರು ಕೊಟ್ಟ ನಿರಾಳ ಮನುಷ್ಯ ಮಾಜಿ ಸಚಿವ ದಿ. ಬಾಪುಗೌಡ ದರ್ಶನಾಪುರವರು ಕಾಯಕದಲ್ಲಿ ಶ್ರದ್ಧೆ, ನಿಷ್ಠೆ ಇಟ್ಟು ಕೀಳರಿಮೆ ಅರಿಯದ ವ್ಯಕ್ತಿತ್ವ. ಶ್ರದ್ಧಾ, ಭಕ್ತಿಯಿಂದ ಮಾಡಿದ ಕಾರ್ಯಕ್ಕೆ ಎಂದಿಗೂ ಗೌರವ ಸಿಗುತ್ತದೆ ಎನ್ನುವುದಕ್ಕೆ ದಿ. ಬಾಪುಗೌಡ ದರ್ಶನಾಪುರ ಅವರೇ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಹೇಳಿದರು.

ಶಹಾಪುರ: ಬರದ ನೆಲಕ್ಕೆ ನೀರು ಕೊಟ್ಟ ನಿರಾಳ ಮನುಷ್ಯ ಮಾಜಿ ಸಚಿವ ದಿ. ಬಾಪುಗೌಡ ದರ್ಶನಾಪುರವರು ಕಾಯಕದಲ್ಲಿ ಶ್ರದ್ಧೆ, ನಿಷ್ಠೆ ಇಟ್ಟು ಕೀಳರಿಮೆ ಅರಿಯದ ವ್ಯಕ್ತಿತ್ವ. ಶ್ರದ್ಧಾ, ಭಕ್ತಿಯಿಂದ ಮಾಡಿದ ಕಾರ್ಯಕ್ಕೆ ಎಂದಿಗೂ ಗೌರವ ಸಿಗುತ್ತದೆ ಎನ್ನುವುದಕ್ಕೆ ದಿ. ಬಾಪುಗೌಡ ದರ್ಶನಾಪುರ ಅವರೇ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಹೇಳಿದರು. ದಿ. ಬಾಪುಗೌಡ ದರ್ಶನಾಪುರವರ 36ನೇ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ತಾಲೂಕಿನ ಭೀಮರಾಯನಗುಡಿ ವೃತ್ತದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ, ವಿಶೇಷ ಪೂಜೆ ಸಲ್ಲಿಸಿದ ನಂತರ ನಗರದ ಚರಬಸವೇಶ್ವರ ಶಾಲಾವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದಿ.ಬಾಪುಗೌಡ ದರ್ಶನಾಪುರ ಅವರು ಮಹಾನ್ ಸಾಧಕರ ಸಾಲಿನಲ್ಲಿ ನಿಲ್ಲುತ್ತಾರೆ. ಜೀವನದುದ್ದಕ್ಕೂ ಶ್ರೇಷ್ಠತೆ ಮೆರೆದ ಅವರು ತೋರಿಕೆ ಹಾಗೂ ಪ್ರಚಾರಕ್ಕಾಗಿ ಕೆಲಸ ಮಾಡದೆ ಜೀವನದ ಸಾರ್ಥಕತೆಗೆ ದುಡಿದವರು ಎಂದು ಸ್ಮರಿಸಿದರು.

ತಂದೆಯ ಹಾದಿಯಲ್ಲಿ ಜನ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಜನಹಿತಕ್ಕಾಗಿ ವಿಶ್ರಮಿಸದೆ ದುಡಿಯುತ್ತಿರುವ ಪುತ್ರ, ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ತಂದೆಗೆ ತಕ್ಕ ಮಗನಾಗಿದ್ದಾರೆ ಎಂದು ಬಣ್ಣಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ರೈತ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ರಾಜಕಾರಣಿ ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆ ದಿ. ಬಾಪುಗೌಡ ದರ್ಶನಾಪುರ ಅವರು. ನಿಷ್ಠಾವಂತ, ಪ್ರಾಮಾಣಿಕ ರಾಜಕಾರಣಿಯಾಗಿದ್ದ ಅವರು ರಾಜಕೀಯಕ್ಕೆ ಉತ್ತಮ ಸಂದೇಶ ನೀಡಿದ ಧೀಮಂತ ನಾಯಕ. ಭ್ರಷ್ಟಾಚಾರ ರಹಿತ, ನೇರ ನಡೆ-ನುಡಿಯ, ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಸ್ವಭಾವ ಹೊಂದಿರುವ ಅಪರೂಪದ ರಾಜಕೀಯ ನಾಯಕರ ಸಾಲಿಗೆ ಸೇರಿದವರು ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಚರಬಸವೇಶ್ವರ ಗದ್ದುಗೆಯ ಪೀಠಾಧಿಪತಿ ವೇದಮೂರ್ತಿ ಬಸವಯ್ಯ ಶರಣರು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ್ ನೆಲೋಗಿ, ಕಾಂಗ್ರೆಸ್ ಹಿರಿಯ ಧುರೀಣರಾದ ಬಸವರಾಜಪ್ಪಗೌಡ ದರ್ಶನಾಪುರ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಜಿಲ್ಲಾ ಪಂಚಯ್ತಿ ಮಾಜಿ ಸದಸ್ಯ ವಿನೋದ್ ಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಆರಬೋಳ, ದೇವದುರ್ಗ ಶಾಸಕಿ ಕರಿಯಮ್ಮ ಅವರ ಪುತ್ರ ಸಂತೋಷ್ ನಾಯಕ್, ಎಪಿಎಂಸಿ ತಾಲೂಕಾಧ್ಯಕ್ಷೆ ಬಸಮ್ಮ ಉರಿಕಾಯಿ, ಹಣಮಂತರಾಯ ಗೌಡ ದಳಪತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಭೀಮರೆಡ್ಡಿ ಐರೆಡ್ಡಿ, ಸಣ್ಣನಿಂಗಪ್ಪ ನಾಯ್ಕೋಡಿ, ಶರಣಪ್ಪ ಸಲಾದಪುರ, ನೀಲಕಂಠ ಬಡಿಗೇರ್, ಮಲ್ಲಪ್ಪ ಉಳ್ಳಂಡಗೇರಿ, ಜೆಸ್ಕಾಂ ಎಂಜಿನೀಯರ್‌ ರಾಜಶೇಖರ್ ಬೆಳುವಾರ್ ಸೇರಿದಂತೆ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ದರ್ಶನ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಯಶಸ್ಸು ಸಿಗಲು ನಿಷ್ಠೆ, ಪ್ರಾಮಾಣಿಕತೆ ಮುಖ್ಯ : ಸಚಿವ ದರ್ಶನಾಪುರ

ಶಹಾಪುರ: ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ತಾನೇ ಹುಡುಕಿಕೊಂಡು ಬರುತ್ತದೆ. ಜೀವನದಲ್ಲಿ ಕಣ್ಣೀರೊರೆಸುವ ಕೆಲಸ ಮಾಡು ಕಣ್ಣೀರು ತರಿಸುವ ಕೆಲಸ ಮಾಡಬೇಡ ಎಂದು ನಮ್ಮ ತಂದೆ ಬಾಪುಗೌಡ ದರ್ಶನಾಪುರ ಅವರು ಹೇಳಿದ ಮಾತನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Share this article