ಕನ್ನಡಪ್ರಭ ವಾರ್ತೆ ಯಾದಗಿರಿ
ತಮ್ಮ ದೂರದೃಷ್ಟಿ, ಜೀವಪರ ಹಾಗೂ ಮಾನವೀಯಪರ ಕಾಳಜಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿ ಸಗರನಾಡಿಗೆ ನೀರು ಕೊಟ್ಟ ಪುಣ್ಯಾತ್ಮರಾಗಿದ್ದಾರೆ ಎಂದು
ಜಿಲ್ಲೆಯ ಶಹಾಪುರದ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ, ಭಾನುವಾರ ಸಿ. ಬಿ. ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ, ಜನಾನುರಾಗಿ, ಮಾಜಿ ಸಚಿವ ದಿ. ಬಾಪೂಗೌಡ ದರ್ಶನಾಪುರ ಅವರ 38ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಮುಖ ಕೇಂದ್ರ ಕಚೇರಿ ಭೀಮರಾಯನಗುಡಿಯಲ್ಲಿ ಪ್ರಾರಂಭಿಸಿ, ನಮ್ಮ ಭಾಗದ ನೀರಾವರಿ ಅಭಿವೃದ್ಧಿಗೆ ನಾಂದಿ ಹಾಡಿದರು. ಇದರಿಂದ ಶಹಾಪುರ ತಾಲೂಕು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿ, ಕರ್ನಾಟಕದಲ್ಲಿ ವಿಶಿಷ್ಟವಾಗಿ ಗುರುತಿಸಲು ಸಾಧ್ಯವಾಯಿತು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬಾಪೂಗೌಡರು ಎಲ್ಲರೂ ಮೆಚ್ಚುವ ಸಂಪನ್ಮೂಲ ರಾಜಕಾರಣಿಯಾಗಿದ್ದರು ಎಂದು ಹಲವಾರು ನಿರ್ಧೇಶನಗಳ ಮೂಲಕ ಬಾಪುಗೌಡ ಜೊತೆಗಿನ ತಮ್ಮ ಒಡನಾಟ ಹಾಗೂ ಅವರ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು.
ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಮಾತನಾಡಿ, ನಾರಾಯಣಪುರ ಡ್ಯಾಂನ ಮೂಲಕ ನಮ್ಮ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿದ ಬಾಪೂಗೌಡರನ್ನು ಪ್ರತಿಯೊಬ್ಬ ಕೃಷಿಕರು ಪ್ರತಿನಿತ್ಯ ಸ್ಮರಿಸಬೇಕು. ಕೃಷಿ, ಶಿಕ್ಷಣ, ಸಾಹಿತ್ಯ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಬಾಪೂಗೌಡರು ನೀಡಿದ ಕೊಡುಗೆ ಅಪಾರವಾಗಿದೆ. ಮೌಲ್ಯಾಧಾರಿತ ರಾಜಕಾರಣಿಯಾಗಿ ನಾಡಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಘೇವರಚಂದ ಜೈನ್ ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ, ಸಂಗೀತ ಕಲಾವಿದರಾದ ಶರಣಬಸವ ವಠಾರ, ಮಲ್ಲಯ್ಯ ಹಿರೇಮಠ ಬಾಪುಗೌಡ ದರ್ಶನಾಪುರ ಅವರ ಜೀವನ ಸಾಧನೆ ಕುರಿತು ಹಾಡುಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
---ಫೋಟೊ-----
-
ಶಹಾಪುರದ ಸಿ.ಬಿ. ಪ್ರೌಢ ಶಾಲೆಯ ಆವರಣದಲ್ಲಿ ಚರಬಸವೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಜನಾನುರಾಗಿ ದಿ. ಬಾಪೂಗೌಡ ದರ್ಶನಾಪುರ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಿತು.