ಕನ್ನಡಪ್ರಭ ವಾರ್ತೆ ಸುರಪುರ
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅರುಣ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಭಾನುವಾರ ದಿ. ಎ.ಕೃಷ್ಣ ಸುರಪುರ ಅವರ ಕುರಿತು ಉಪನ್ಯಾಸ ಹಾಗೂ ಎ. ಕಮಲಾಕರ ವಿರಚಿತ ‘ಪ್ರೇಮಾಲಾಪ’ ಗಜಲ್ ಮತ್ತು ‘ಭಾವಸೆಲೆ’ ಕವನ ಸಂಕಲನಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎ. ಕೃಷ್ಣ ಸುರಪುರ ಅವರಂತಹ ಹಿರಿಯ ಸಾಹಿತಿಗಳ ಸಾಹಿತ್ಯಿಕ ಕೊಡುಗೆ ಯುವ ಬರಹಗಾರರಿಗೆ ಸದಾ ಪ್ರೇರಣೆಯಾಗಿದ್ದು, ಅವರ ಸಾಹಿತ್ಯ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಆಶಿಸಿದರು.ಸಾಹಿತಿ ಕನಕಪ್ಪ ವಾಗನಗೇರಿ ಮಾತನಾಡಿ, ಕವಿರತ್ನ ಎ. ಕೃಷ್ಣ ಸುರಪುರ ಅವರು ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯನ್ನು ಆಧುನಿಕ ಕಾಲದಲ್ಲೂ ಜೀವಂತವಾಗಿರಿಸಿರುವ ಅಪರೂಪದ ಕವಿ. ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ, ರಾಘವಾಂಕ ಮೊದಲಾದ ಮಹಾಕವಿಗಳ ಕಾಲದಲ್ಲಿ ಪ್ರಸಿದ್ಧಿ ಚಂಪೂ ಸಾಹಿತ್ಯ, ಕಂದಪದ್ಯ, ಭಾಮಿನಿ, ವಾರ್ಧಕ ಷಟ್ಪದಿಗಳಲ್ಲಿ ಅದ್ಭುತ ಕೃತಿಗಳನ್ನು ರಚಿಸುವ ಮೂಲಕ ಇಡೀ ಕರ್ನಾಟಕವೇ ಸುರಪುರದತ್ತ ತಿರುಗಿ ನೋಡುವಂತೆ ಸಾಹಿತ್ಯ ಲೋಕದಲ್ಲಿ ಗಮನ ಸೆಳೆದಿದ್ದಾರೆ ಎಂದರು.
ಸಾಹಿತಿ ಎ. ಕಮಲಾಕರ ಅವರು ರಚಿಸಿರುವ ವಿರಚಿತ ಪ್ರೇಮಾಲಾಪ ಗಜಲ ಮತ್ತು ‘ಭಾವಸೆಲೆ’ ಕವನ ಸಂಕಲನಗಳನ್ನು ಕಲಬುರಗಿಯ ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು.
ಬೋಡೆ ರಿಯಾಜ್ ಅಹ್ಮದ್ ಮಾತನಾಡಿ, ಗಜಲ್ ಸಾಹಿತ್ಯವು ತನ್ನದೇ ಆದ ವಿಶಿಷ್ಟ ರಚನಾ ಶೈಲಿ ಮತ್ತು ಭಾವಾಭಿವ್ಯಕ್ತಿಯನ್ನು ಹೊಂದಿದೆ. ಉರ್ದು ಭಾಷೆಯಲ್ಲಿ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಗಜಲ್ ಪ್ರಕಾರವು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿಯೂ ತನ್ನದೇ ಆದ ಸ್ಥಾನಮಾನವನ್ನು ಪಡೆದುಕೊಂಡಿದೆ. ಪ್ರೇಮದ ಅಭಿವ್ಯಕ್ತಿ, ಭಾವನೆಗಳ ವಿನಿಮಯ ಗಜಲ್ನ ಪ್ರಮುಖ ವೈಶಿಷ್ಟಗಳಾಗಿವೆ. ಎ.ಕಮಲಾಕರ ಅವರ ಕಾವ್ಯ ರಚನೆಗಳಲ್ಲಿ ಪ್ರೇಮದ ಅನುಭವಗಳು, ಭಾವನೆಗಳ ವಿವಿಧ ಆಯಾಮಗಳು ಸುಂದವಾಗಿ ಅಭಿವ್ಯಕ್ತಗೊಂಡಿವೆ. ಈ ಕೃತಿಯಲ್ಲಿ ಒಟ್ಟು ೬೦ ಗಜಲಗಲ್ಲಿ, ೫೯ ಗಜಲ್ಗಳು ಐದು ಶೇರ್ಗಳನ್ನು ಮತ್ತು ಒಂದು ಗಜಲ್ ಮಾತ್ರ ಆರು ಶೇರಗಳನ್ನು ಹೊಂದಿದೆ ಎಂದು ತಿಳಿಸಿದರು.
ಖ್ಯಾತ ಚಿತ್ರಕಲಾವಿದ, ಸಾಹಿತಿ ಉಮೇಶಬಾಬು ಎಂ. ಸಾಸಾಬಾಳ ಅವರು ಎ.ಕೃಷ್ಣ ಸುರಪುರ ಅವರ ಬದುಕು ಬರಹಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಬಿಲಾಲ್ ಮಕಂದರ, ರಾಜಗೋಪಾಲ ವಿಭೂತಿ, ರಾಜಕುಮಾರ ದೊರೆ, ಪಿಎಸ್ಐ ಕೃಷ್ಣಾ ವಿ.ಸುಬೇದಾರ, ಮಹಾಂತೇಶ ದೇವರ ಗೋನಾಲ, ಗಂಗಾಧರ ರುಮಾಲ, ರಜಾಕ್ ಭಗವಾನ್, ಸಾಹೇಬರೆಡ್ಡಿ ಇಟಗಿ, ವೆಂಕಟೇಶ ಗೌಡ, ನಾಗರಾಜ ಜಮದ್ರಖಾನಿ, ಸಾಮ್ಯುವೆಲ್ ಮ್ಯಾಥ್ಯೂ, ರಾಘವೇಂದ್ರ ಭಕ್ರಿ, ಯಲ್ಲಪ್ಪ ಹುಲಕಲ್, ದೇಶಮುಖ, ಮಹೇಂದ್ರ ಅಂಗಡಿ ಪರಿಮಳ ಸೇರಿದಂತೆ ಸಾಹಿತಿಗಳು, ಶಿಕ್ಷಕರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
----ಫೋಟೊ----
ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ಭಾನುವಾರ ಸಾಹಿತಿ ಎ. ಕಮಲಾಕರ ಅವರು ರಚಿಸಿರುವ ವಿರಚಿತ ಪ್ರೇಮಾಲಾಪ ಗಜಲ ಮತ್ತು ಭಾವಸೆಲೆ ಕವನ ಸಂಕಲನಗಳನ್ನು ಕಲಬುರಗಿಯ ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು.