ಸಮಾಜ ಕಲ್ಯಾಣ ಇಲಾಖೆಯಿಂದಲೇ ಕ್ಷೌರದ ಅಂಗಡಿ ಶುರು!

KannadaprabhaNewsNetwork |  
Published : Feb 27, 2026, 02:30 AM IST
26ಎಂಡಿಜಿ2. ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ಶ್ರೀ ಶಿವಶರಣ ಹಡಪದ ಅಪ್ಪಣ ಸಮಾಜದ ಸಹಯೋಗದೊಂದಿಗೆ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಕ್ಷೌರಿಕ ಅಂಗಡಿ ಉದ್ಘಾಟನೆಯನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ.ನಂದಾ ಹಣಬಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ಶಿವಶರಣ ಹಡಪದ ಅಪ್ಪಣ ಸಮಾಜದ ಸಹಯೋಗದೊಂದಿಗೆ ಗುರುವಾರ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಡಿಸಿ ಕ್ಷೌರಿಕ ಅಂಗಡಿಗೆ ಚಾಲನೆ ನೀಡಲಾಯಿತು.

ಮುಂಡರಗಿ: ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತ ಜನಾಂಗದವರಿಗೆ ಕ್ಷೌರ ಮಾಡಲು ನಿರಾಕರಿಸಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗ್ರಾಮದ ಗಾಂವಠಾಣ ಜಾಗದಲ್ಲಿ ಗುರುವಾರ ಕ್ಷೌರದ ಅಂಗಡಿ ಪ್ರಾರಂಭಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಭಾಗವಹಿಸಿದ್ದು ವಿಶೇಷವಾಗಿತ್ತು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ಶಿವಶರಣ ಹಡಪದ ಅಪ್ಪಣ ಸಮಾಜದ ಸಹಯೋಗದೊಂದಿಗೆ ಗುರುವಾರ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಡಿಸಿ ಕ್ಷೌರಿಕ ಅಂಗಡಿಗೆ ಚಾಲನೆ ನೀಡಲಾಯಿತು.

ಈ ವೇಳೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಂಗಟಾಲೂರು ಗ್ರಾಮದಲ್ಲಿ ದಲಿತ ಜನಾಂಗದವರಿಗೆ ಕ್ಷೌರದ ವಿಷಯವಾಗಿ ತುಂಬಾ ಸಮಸ್ಯೆ ಇತ್ತು. ಅದನ್ನು ಪರಿಹರಿಸಲು ಅನೇಕ ಬಾರಿ ಸಭೆ ಮಾಡಿ, ನೋಟಿಸ್ ನೀಡಲಾಗಿತ್ತು. ಅಲ್ಲದೇ ದಲಿತರಿಗೆ ಕ್ಷೌರ ಮಾಡದ ಅಂಗಡಿ ಬಂದ್ ಮಾಡಿಸಿದರೂ ಪ್ರಯೋಜನವಾಗದ ಹಿನ್ನೆಲೆ ತಹಸೀಲ್ದಾರ್, ತಾಪಂ ಇಒ ಮತ್ತು ದಲಿತ ಸಂಘಟನೆ ಪದಾಧಿಕಾರಿಗಳ ಜತೆ ಚರ್ಚಿಸಿ ಗ್ರಾಪಂ ಸಹಯೋಗದೊಂದಿಗೆ ಇಲಾಖೆ ವತಿಯಿಂದಲೇ ಗ್ರಾಮದಲ್ಲಿ ಒಂದು ಕ್ಷೌರದ ಅಂಗಡಿ ಪ್ರಾರಂಭಿಸಿ ಅದಕ್ಕೆ ಒಬ್ಬ ಕ್ಷೌರಿಕನನ್ನು ನೇಮಿಸಲು ತೀರ್ಮಾನಿಸಲಾಗಿತ್ತು ಎಂದರು. ಶಿವಶರಣರ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ದೇವು ಹಡಪದ ಕೈಜೋಡಿಸಿ ಕ್ಷೌರ ಮಾಡಲು ತಮ್ಮ ಸಹೋದರರನ್ನೆ ಕಳುಹಿಸಲು ಒಪ್ಪಿಕೊಂಡರು. ಇದಕ್ಕೆ ಗ್ರಾಪಂ ಅಧ್ಯಕ್ಷರು, ಪಿಡಿಒ, ಆಡಳಿತಾಧಿಕಾರಿ ಎಲ್ಲರೂ ಸಹಕರಿಸಿದರು. ರಾಜ್ಯದಲ್ಲಿಯೇ ಇದೊಂದು ಮಾದರಿ ಪ್ರಯೋಗವಾಗಿದೆ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬಟ್ಟಿ ಮಾತನಾಡಿ, ಮೇಲು- ಕೀಳುಗಳೆಂಬ ಕೀಳರಿಮೆಯನ್ನು ತೊರೆಯಬೇಕು. ಸರ್ವರೂ ಸಮಾನರು ಎನ್ನುವ ಉದಾತ್ತ ಮನೋಭಾವನೆಯಿಂದ ಬಾಳಬೇಕು. ಸಾಮರಸ್ಯದ ಬದುಕು ಗ್ರಾಮಕ್ಕೆ ಬೆಳಕು ಎಂದರು.

ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸೋಮಣ್ಣ ಹೈತಾಪೂರ, ಲಕ್ಷ್ಮಣ ತಗಡಿನಮನಿ, ಎಚ್.ಡಿ. ಪೂಜಾರ, ಸತೀಶ ಪಾಸಿ, ಹಡಪದ ಸಮಾಜದ ರಾಜ್ಯಾಧ್ಯಕ್ಷ ದೇವು ಹಡಪದ ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಎಚ್., ಸಿಪಿಐ ಬಿಸನಳ್ಳಿ, ಗ್ರಾಪಂ ಆಡಳಿತಾಧಿಕಾರಿ ವಿಜಯಕುಮಾರ್ ಬೆಣ್ಣೆ, ಪಿಡಿಒ ಈರಣ್ಣ ಬಂಡಿವಡ್ಡರ, ಮೈಲಾರಪ್ಪ ಕಲಕೇರಿ, ದ್ಯಾಮಣ್ಣ ತಳವಾರ, ದಂಡೆಪ್ಪ ಮೇಗಳಮನಿ, ಈರಣ್ಣ ಹಡಪದ, ಮಂಜು ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಯಲ್ಲಪ್ಪ ನಾಗಮ್ಮನವರ ನಿರೂಪಿಸಿ, ಮರಿಯಜ್ಜ ವಂದಿಸಿದರು.

ಕ್ಷೌರ ಮಾಡದಿರಲು ಕಾರಣ?ಸಿಂಗಟಾಲೂರು ಗ್ರಾಮದಲ್ಲಿ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿ ದೇವಾಲಯವಿದ್ದು, ಪ್ರತಿವರ್ಷ ಮಹಾನವಮಿ ಸಂದರ್ಭದಲ್ಲಿ ವೀರಭದ್ರೇಶ್ವರ ದೇವರು ಹಡಪದ ಸಮಾಜದವರ ಮನೆಗೆ ಬರುತ್ತದೆ. ಆ ಸಂದರ್ಭದಲ್ಲಿ ಹಡಪದ ಕುಟುಂಬವರು ವೀರಭದ್ರದೇವರಿಗೆ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಅವರು ಹಿಂದಿನಿಂದರೂ ದಲಿತರಿಗೆ ಕ್ಷೌರ ಮಾಡುವುದನ್ನು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ. ಇದು ತಪ್ಪೆಂದು ಇಲಾಖೆ ಅಧಿಕಾರಿಗಳು ಅನೇಕ ಬಾರಿ ತಿಳಿಸಿದರೂ ಒಪ್ಪದೇ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಕ್ಷೌರ ಮಾಡುವುದನ್ನೇ ನಿಲ್ಲಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ದಾರಿಯಲ್ಲಿ ನಡೆದರೆ ಮಾತ್ರ ಸುಖಿ ಜೀವನ: ದೊಡ್ಡನಗೌಡ ಪಾಟೀಲ
ಪೊಲೀಸರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ