ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ಲಿಂ. ಚಂದ್ರಶೇಖರ ಶಿವಾಚಾರ್ಯರ 31ನೇ ಪುಣ್ಯಸ್ಮರಣೋತ್ಸವ ಹಾಗೂ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ನಡೆಯಿತು.

ಕುಷ್ಟಗಿ: ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ಸುಖಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ಕೇಸೂರು ಗ್ರಾಮದಲ್ಲಿ ನಡೆದ ಲಿಂ. ಚಂದ್ರಶೇಖರ ಶಿವಾಚಾರ್ಯರ 31ನೇ ಪುಣ್ಯಸ್ಮರಣೋತ್ಸವ ಹಾಗೂ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಜರುಗಿದ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ದಾರಿ ಬಿಟ್ಟು ಅಧರ್ಮದ ದಾರಿಯಲ್ಲಿ ನಡೆದರೆ ನಮಗೆ ಕರ್ಮ ತಪ್ಪಿದ್ದಲ್ಲ. ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಅಳವಡಿಸಿಕೊಂಡು ಭಕ್ತಿ ಪರಂಪರೆಯಲ್ಲಿ ಜೀವನ ನಡೆಸಬೇಕು. ಶರಣರ ಪ್ರವಚನಗಳಿಂದ ವ್ಯಕ್ತಿತ್ವ ವಿಕಸನಗೊಳ್ಳಲಿದ್ದು, ಪ್ರವಚನದ ಮೂಲಕ ಶರಣರ ತತ್ವ ಅಳವಡಿಸಿಕೊಳ್ಳಬೇಕು ಎಂದರು. ಲಿಂ. ಚಂದ್ರಶೇಖರ ಶಿವಾಚಾರ್ಯರ ಮಂಟಪ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದರು.

ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ದುಡ್ಡು ಕೊಟ್ಟು ಎಲ್ಲವನ್ನು ಪಡೆಯಬಹುದಾಗಿದೆ. ಅದರೆ ಮನಸ್ಸಿಗೆ ನೆಮ್ಮದಿ, ಸಮಾಧಾನವಿರುವುದಿಲ್ಲ. ಅಂತಹ ಮನಸ್ಸಿಗೆ ನೆಮ್ಮದಿ ಸಿಗಲು ಶರಣರ ಪ್ರವಚನ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ನಮ್ಮ ಬದುಕಿನ ಪರಿವರ್ತನೆಗೆ ಅಧ್ಯಾತ್ಮದ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಜೀವನ ಸುಂದರವಾಗಲಿದೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಚಂದ್ರಶೇಖರ ದೇವರು ಮಾತನಾಡಿ, ಮನದ ಮೈಲಿಗೆ ತೊಳೆಯುವಲ್ಲಿ ಪ್ರವಚನಗಳು ಸಹಕಾರಿ ಎಂದು ಹೇಳಿದರು.

ಪ್ರವಚನಕಾರ ಅಂಬಳನೂರಿನ ಸಂಗಮನಾಥ ದೇವರು ಸಜ್ಜಲಗುಡ್ಡ ಶರಣಮ್ಮನ ಜೀವನ ಚರಿತ್ರೆಯನ್ನು ತಿಳಿಸಿದರು. ಗವಾಯಿ ರಾಜು ಗುಬ್ಬೇವಾಡ ಸಂಗೀತ ಹಾಡಿದರು. ಶಿವಾನಂದ ಯಂಕಂಚಿ ತಬಲಾ ಸಾಥ್‌ ನೀಡಿದರು.

ಅಂಕುಶದೊಡ್ಡಿಯ ವಾಮದೇವ ಶ್ರೀಗಳು, ಸದಾನಂದ ಶಿವಾಚಾರ್ಯರು, ಗುರುದೇವ ದೇವರು, ಸಂಗಮೇಶ ದೇವರು, ಗಣ್ಯರಾದ ಮಹಾಂತೇಶ ಮೇಟಿ, ನಾಗರಾಜ ಶೆಟ್ಟರ, ಶಂಕರಪ್ಪ ಅಂಗಡಿ, ಲಾಡಸಾಬ ಕೊಳ್ಳಿ, ಮುತ್ತಣ್ಣ ಕಾಟಾಪುರು, ಗುರುಸಿದ್ದಯ್ಯ ಮಳಿಮಠ, ಉಮೇಶ ಮಡಿವಾಳರ, ಕಲ್ಲಯ್ಯ ಸರಗಣಚಾರಿ, ಪ್ರಭುದೇವ ಕಲ್ಯಾಣಮಠ, ನಿಂಗಪ್ಪ ಸಜ್ಜನ, ನೀಲಕಂಠಪ್ಪ ಬಳಿಗೇರ, ನಾಗರಾಜ ಅಡವಿಭಾವಿ, ನಾಗಪ್ಪ ತುಪ್ಪದ, ಬಸವರಾಜ ಆಲ್ವಿ, ನೀಲಕಂಠಯ್ಯ ಮಠ, ಪರಸಪ್ಪ ಗೌಡರ, ಚನ್ನಪ್ಪ ಜವಳಿ ಇದ್ದರು.