ಕನ್ನಡಪ್ರಭ ವಾರ್ತೆ ಬೆಳಗಾವಿ/ಸವದತ್ತಿಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾದ ಸವದತ್ತಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹215 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸುವುದು ಹಾಗೂ ಕ್ಷೇತ್ರವನ್ನು ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ವಿಶೇಷ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ/ಸವದತ್ತಿ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾದ ಸವದತ್ತಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹215 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸುವುದು ಹಾಗೂ ಕ್ಷೇತ್ರವನ್ನು ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ವಿಶೇಷ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಯಲ್ಲಮ್ಮ ದೇವಿಯ ಮೇಲಿನ ಭಕ್ತಿ ರಾಜ್ಯದ ಗಡಿಗಳನ್ನು ಮೀರಿ ವ್ಯಾಪಿಸಿದೆ. ಕ್ಷೇತ್ರದ ಧಾರ್ಮಿಕ ಮಹತ್ವ, ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಸವದತ್ತಿ ಯಲ್ಲಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗಿದೆ. ದೇವಸ್ಥಾನಗಳಲ್ಲಿರುವ ಚಿನ್ನಾಭರಣಗಳನ್ನು ದೇವರ ಅಲಂಕಾರ ಹಾಗೂ ಭಕ್ತರಿಗೆ ದರ್ಶನದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಸದ್ಬಳಕೆ ಮಾಡುವ ಕುರಿತು ವಿಶೇಷ ಯೋಜನೆ ರೂಪಿಸುವ ಚಿಂತನೆಯೂ ಇದೆ ಎಂದರು.

ಸರ್ಕಾರಕ್ಕೆ ಜನರೇ ದೇವರು, ಜನರ ಸೇವೆಯೇ ದೇವರ ಸೇವೆ ಎಂಬ ಆಶಯದೊಂದಿಗೆ ಜನಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವು ನೀಡಲಾಗುತ್ತಿದೆ. ಮೂರು ಎಕರೆವರೆಗೆ ಕೃಷಿ ಭೂಮಿ ಹೊಂದಿರುವ ಬಡ ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಕೊಡುವ ನೇಗಿಲ ಯೋಗಿ ಯೋಜನೆ ಹಾಗೂ ಆಸ್ತಿ ಮತ್ತು ಭೂ ದಾಖಲೆಗಳ ಸರಳೀಕರಣಕ್ಕಾಗಿ ''''''''''''''''ಆಸ್ತಿ ಗ್ಯಾರಂಟಿ'''''''''''''''' ಮತ್ತು ''''''''''''''''ಭೂಮಿ ಗ್ಯಾರಂಟಿ'''''''''''''''' ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಸವದತ್ತಿ ಪುರಸಭೆಯ ಅಭಿವೃದ್ಧಿಗೆ ₹45 ಕೋಟಿ ಅನುದಾನ ನೀಡಲಾಗಿದ್ದು, 100 ಹಾಸಿಗೆಗಳ ಆಸ್ಪತ್ರೆಯ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಕೆರೆ ತುಂಬಿಸುವ ಯೋಜನೆಗಳು, ರೈತರ ಹಿತದೃಷ್ಟಿಯಿಂದ ಕೈಗೊಳ್ಳುವ ಕಾಮಗಾರಿಗಳು ಹಾಗೂ ಯುವಜನರ ಕ್ರೀಡೆ ಮತ್ತು ಕಲಾ ಚಟುವಟಿಕೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸಹೋದರತ್ವದಿಂದ ಬದುಕಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಟೆಂಪಲ್ ಟೂರಿಸಂ ಕಾರಿಡಾರ್ ನಿರ್ಮಾಣಕ್ಕೆ ಪ್ರಸ್ತಾವನೆ:

ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸವದತ್ತಿ ಯಲ್ಲಮ್ಮ ದೇವಸ್ಥಾನವು ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗದೆ ದೇಶದ ವಿವಿಧ ಭಾಗಗಳ ಭಕ್ತರ ಶ್ರದ್ಧೆಗೆ ಪಾತ್ರವಾಗಿದೆ. ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಜರಾಯಿ ಇಲಾಖೆಯಿಂದ ₹97 ಕೋಟಿ ಅನುದಾನ ನೀಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ''''''''''''''''ಟೆಂಪಲ್ ಟೂರಿಸಂ ಕಾರಿಡಾರ್'''''''''''''''' ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ, ಕೊಕಟನೂರು ಯಲ್ಲಮ್ಮ ಹಾಗೂ ಸುಳೇಭಾವಿ ಮಹಾಲಕ್ಷ್ಮೀ ಸೇರಿದಂತೆ ವಿವಿಧ ಶಕ್ತಿ ದೇವತೆಗಳ ಕ್ಷೇತ್ರಗಳನ್ನು ಸಂಪರ್ಕಿಸುವ ಮೂಲಕ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದು. ಇದರಿಂದ ಉತ್ತರ ಕರ್ನಾಟಕದ ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು.

ಬೆಳಗಾವಿ–ಕಿತ್ತೂರು–ಧಾರವಾಡ ರೈಲ್ವೆ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಶೇ.99ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಸುಮಾರು ₹1,960 ಕೋಟಿ ವೆಚ್ಚದ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಬಾಕಿ ಇರುವ ₹50 ಕೋಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಈ ಭಾಗದ ಜನರ ಪ್ರಯಾಣದ ಅನುಕೂಲ ಹೆಚ್ಚಲಿದೆ ಎಂದರು.

ಭಕ್ತರಿಗೆ ಕ್ಯೂ ಕಾಂಪ್ಲೆಕ್ಸ್, 6 ಸಾವಿರ ಜನರಿಗೆ ಅನ್ನದಾಸೋಹ:

ಶಾಸಕ ಎಚ್.ಕೆ. ಪಾಟೀಲ್ ಮಾತನಾಡಿ, ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತರು ಆಗಮಿಸುವುದರಿಂದ ಅವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಅತ್ಯಗತ್ಯವಾಗಿದೆ. ₹215 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಯು ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲಿದೆ ಎಂದರು.

ಭಕ್ತರು ಬಿಸಿಲಿನಲ್ಲಿ ದೀರ್ಘಕಾಲ ಕಾಯುವುದನ್ನು ತಪ್ಪಿಸಲು ವ್ಯವಸ್ಥಿತ ಸರತಿ ಸಾಲಿನ ಸಂಕೀರ್ಣ (ಕ್ಯೂ ಕಾಂಪ್ಲೆಕ್ಸ್) ನಿರ್ಮಿಸಲಾಗುವುದು. ವೃದ್ಧರು, ಮಹಿಳೆಯರು ಹಾಗೂ ವಿಶೇಷಚೇತನರು ಸುಲಭವಾಗಿ ದೇವಿಯ ದರ್ಶನ ಪಡೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಒಂದೇ ಬಾರಿಗೆ ಸುಮಾರು 6 ಸಾವಿರ ಜನರು ಕುಳಿತು ಊಟ ಮಾಡಬಹುದಾದ ಬೃಹತ್ ಅನ್ನದಾಸೋಹ ವ್ಯವಸ್ಥೆ ರೂಪಿಸಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರ ಜಾನುವಾರುಗಳಿಗೆ ಮೇವು ಒದಗಿಸುವ ಮೇವು ದಾಸೋಹ ವ್ಯವಸ್ಥೆಗೂ ಆದ್ಯತೆ ನೀಡಲಾಗುವುದು. ಭಕ್ತರ ಆರೋಗ್ಯ, ಸ್ವಚ್ಛತೆ ಹಾಗೂ ಶಿಸ್ತಿನ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಉತ್ತರ ಕರ್ನಾಟಕದ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡಿದರೆ ಕ್ಷೇತ್ರವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕೆರೆ ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲು ಮನವಿ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸರ್ಕಾರದ ಸಹಕಾರದಿಂದ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಯೋಜನೆಗಳಿಗೆ ಚಾಲನೆ ದೊರೆತಿರುವುದು ಸಂತಸ ತಂದಿದೆ. ಎಲ್ಲ ಸಮುದಾಯಗಳ ಜನರು ಆಗಮಿಸುವ ಈ ಕ್ಷೇತ್ರಕ್ಕೆ ಇನ್ನಷ್ಟು ಮೂಲಸೌಕರ್ಯಗಳ ಅಗತ್ಯವಿದೆ ಎಂದರು.

ಸವದತ್ತಿ ಹಾಗೂ ಬೈಲಹೊಂಗಲ ತಾಲೂಕುಗಳಲ್ಲಿನ ನೀರಿನ ಸಮಸ್ಯೆ ನಿವಾರಿಸಲು ಕೆರೆ ತುಂಬಿಸುವ ಯೋಜನೆಗಳನ್ನು ತ್ವರಿತಗೊಳಿಸಬೇಕು. ಮಲಪ್ರಭಾ ನದಿಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ, ಪ್ರವಾಸೋದ್ಯಮ ಇಲಾಖೆ ಆಯುಕ್ತ ಶಿವಪ್ರಸಾದ್ ಪಿ.ಆರ್., ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸರ್ಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಾಮ್ ಪ್ರತಾಪ್ ಮನೋಹರ್, ಲೋಕೋಪಯೋಗಿ ಇಲಾಖೆ ಬೆಳಗಾವಿ ವೃತ್ತದ ಅಧೀಕ್ಷಕ ಎಂಜಿನಿಯರ್ ಸಂಜೀವಕುಮಾರ ಹುಲಕಾಯಿ, ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕ ಸಂದೀಪ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.

ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರ ಸ್ವಾಗತಿಸಿದರು.