ಕನ್ನಡಪ್ರಭ ವಾರ್ತೆ ಬೇಲೂರುದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿಗಳ ಮುಂಭಾಗ ಇದ್ದ ಗೋಡೆಯನ್ನು ದಲಿತ ಮುಖಂಡರು ತೆರವುಗೊಳಿಸಿದರು.ಇದೇ ವೇಳೆ ಮಾತನಾಡಿದ ದಲಿತ ಮುಖಂಡ ಶಂಬುಗನಹಳ್ಳಿ ಬಾಬು, ಕಳೆದ ೧೫ ದಿನಗಳ ಹಿಂದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಭೆಯಲ್ಲಿ ತೀರ್ಮಾನವಾದಂತೆ ಕೋಳಿ ಅಂಗಡಿಗಳನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಶಿವು ಎಂಬುವರು ಅಂಗಡಿಯನ್ನು ತೆರೆದು ಕೋಳಿ ವ್ಯಾಪಾರ ಮಾಡಲು ಮುಂದಾಗಿದ್ದರು . ಈ ವಿಚಾರ ದಲಿತ ಮುಖಂಡರಿಗೆ ತಿಳಿದು ಸ್ಥಳಕ್ಕೆ ಬೇಟಿ ನೀಡಿ ಶಿವು ಅವರನ್ನು ಕೋಳಿ ಅಂಗಡಿ ತೆರವು ಮಾಡಿಸಿದ್ದರೂ ಮತ್ತೆ ಬಾಗಿಲು ತೆರೆದಿರುವುದು ಏಕೆ ಎಂದು ಕೇಳಿದಾಗ ಮಾಲೀಕ ಶಿವು ಹಾಗೂ ದಲಿತ ಸಂಘಟನೆ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಲಕ್ಷಾಂತರ ರು. ಗಳನ್ನು ವ್ಯಯ ಮಾಡಿ ಬೇಲೂರಿನ ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಿದ್ದು, ಅದರ ಪಕ್ಕದಲ್ಲಿ ಕೋಳಿ ಅಂಗಡಿಗಳು ಇದ್ದು ಗಬ್ಬು ವಾಸನೆಯಿಂದ ಕೂಡಿತ್ತು . ಹಿಂದಿನ ಶಾಸಕರು, ಜನಪ್ರತಿನಿಧಿಗಳು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಮೌನ ವಹಿಸಿದ್ದರು. ಆದರೆ ಈಗ ದಲಿತ ಸಂಘಟನೆಗಳ ಸುಮಾರು ೩೦ ವರ್ಷಗಳ ಸತತ ಹೋರಾಟ ಪ್ರಯತ್ನದಿಂದಾಗಿ ಈಗಿನ ಶಾಸಕ ಹುಲ್ಲಳ್ಳಿ ಸುರೇಶ್ ಆದೇಶದಂತೆ ಪುರಸಭೆ ವತಿಯಿಂದ ಕೋಳಿ ಅಂಗಡಿಗಳನ್ನು ತೆರವು ಮಾಡಲಾಗಿತ್ತು. ಆದರೆ ಈಗ ಮತ್ತೆ ಆ ಕೋಳಿ ಅಂಗಡಿಗಳ ಬಾಗಿಲು ತೆಗೆಯುತ್ತಿರುವುದು ಸರಿಯಲ್ಲ. ಇಲ್ಲಿ ದಲಿತರನ್ನು ಎದುರು ಹಾಕಿಕೊಂಡು ಕೋಳಿ ಅಂಗಡಿಗಳನ್ನು ಪ್ರಾರಂಭಿಸಿದ್ದೇ ಆದಲ್ಲಿ ನಾವು ಬೇಲೂರು ಬಂದ್ ಮಾಡಿ ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ. ಅಂಬೇಡ್ಕರ್ ಭವನ ಪಕ್ಕದಲ್ಲಿದ್ದ ಗೋಡೆಯನ್ನು ತೆರವುಗೊಳಿಸಿದ್ದೇವೆ ಎಂದರು. ಈ ವೇಳೆ ದಲಿತ ಮುಖಂಡ ಪರ್ವತಯ್ಯ, ಚಿಕ್ಕಬ್ಯಾಡಿಗೆರೆ ಮಂಜುನಾಥ್, ಎಂಜಿ ವೆಂಕಟೇಶ್, ಮಹೇಶ್, ಕುಮಾರ್ , ಮತ್ತಿತರರಿದ್ದರು.