ನಾರಾಯಣ ಹೆಗಡೆ
ತಾಲೂಕಿನ ಬಸಾಪುರ ಗ್ರಾಮದ ನಾಗಪ್ಪ ಮುದ್ದಿ ಮಾವು ಬೆಳೆದು ಭರ್ಜರಿ ಆದಾಯ ಗಳಿಸುತ್ತಿರುವ ರೈತ. ಸಂಪೂರ್ಣ ಸಾವಯವ ಪದ್ಧತಿಯಲ್ಲೇ 12 ಎಕರೆ ಪ್ರದೇಶದಲ್ಲಿ ಆಪೂಸು ತಳಿಯ ಮಾವು ಬೆಳೆದಿದ್ದಾರೆ. ಹವಾಮಾನ ವೈಪರೀತ್ಯದ ನಡುವೆಯೂ ಭರ್ಜರಿ ಇಳುವರಿ ಪಡೆದಿದ್ದು, ಅದೇ ರೀತಿ ಆದಾಯವನ್ನೂ ಗಳಿಸಿದ್ದಾರೆ.
ಪ್ರತಿಯೊಂದು ಮರದಲ್ಲೂ ಟೊಂಗೆ ಜೋತು ಬೀಳುವ ರೀತಿಯಲ್ಲಿ ಮಾವಿನ ಇಳುವರಿ ಬಂದಿದ್ದು, ಇನ್ನೊಂದು ವಾರದಲ್ಲಿ ಕಟಾವು ಆರಂಭವಾಗಲಿದೆ. ಇನ್ನು ಎರಡು ತಿಂಗಳ ಕಾಲ ಬಸಾಪುರ ಮಾವು ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಮಾವು ಪ್ರಿಯರಿಗೆ ಲಭ್ಯವಾಗಲಿದೆ.ಕೋಟಿ ಬೆಲೆ ಬಾಳುವ ಬೆಳೆ: ಕಳೆದ 30 ವರ್ಷಗಳಿಂದಲೂ ಬಸಾಪುರದ ನಾಗಪ್ಪ ಮುದ್ದಿ ಅವರು ಮಾವು ಬೆಳೆಯುತ್ತಿದ್ದಾರೆ. 35 ವರ್ಷಗಳ ಮರಗಳಿಂದ ಹಿಡಿದು ಏಳೆಂಟು ವರ್ಷಗಳ ಗಿಡಗಳೂ ಇವರ ತೋಪಿನಲ್ಲಿದೆ. ಇವರ ತೋಪಿನಲ್ಲಿ ಫಸಲು ಇಲ್ಲದ ಒಂದೇ ಒಂದು ಮರವೂ ಕಾಣಸಿಗದು. ಗಿಡಗಳಿಗೆ ಕ್ರಿಮಿನಾಶಕ ಸಿಂಪಡಿಸದೇ, ರಾಸಾಯನಿಕ ಬಳಸದೆ ಹಣ್ಣು ಮಾಡಿ ಮಾರಾಟ ಮಾಡುತ್ತಾರೆ.
ಕೇವಲ 12 ಎಕರೆ ಮಾವಿನ ತೋಟದಲ್ಲಿ ಕೋಟಿ ಬೆಲೆಯ ಮಾವು ಬೆಳೆಯಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನಿಸಿದ್ದರು. ಅಂಥ ಅನೇಕರು ಇವರ ತೋಟಕ್ಕೆ ಬಂದು ನೋಡಿದ ಮೇಲೆ ಶಹಬ್ಬಾಶ್ ಎಂದು ಹೋಗಿದ್ದಾರೆ. ಅಲ್ಲದೇ ಪ್ರತಿ ವರ್ಷವೂ ಇಂತಹ ಫಸಲು ಪಡೆಯುತ್ತಿರುವುದು ವಿಶೇಷವಾಗಿದೆ.
ಮಾವಿನಿಂದ ಆಸ್ತಿ ಗಳಿಕೆ: 30 ವರ್ಷಗಳಿಂದ ಮಾವು ಬೆಳೆದೇ ಆದಾಯ ಗಳಿಸುತ್ತಿರುವ ನಾಗಪ್ಪ ಅವರಲ್ಲಿ ಹಿಂದೆ ಕೇವಲ 8 ಎಕರೆ ಜಮೀನಿತ್ತು. ಮಾವು ಮಾರಿ ಭೂಮಿ ಖರೀದಿ ಮಾಡುತ್ತ ಈಗ ಬರೋಬ್ಬರಿ 28 ಎಕರೆ ಜಮೀನು ಹೊಂದಿದ್ದಾರೆ.
ಜಿಲ್ಲೆಯಲ್ಲಿ ಮಾವು ಬೆಳೆಯಿಂದ ಅನೇಕರು ಅಡಕೆಯತ್ತ ಹೆಜ್ಜೆ ಇಟ್ಟಿದ್ದಾರೆ. ಆದರೆ, ಮಾವು ಬೆಳೆಯನ್ನೇ ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಆದಾಯ ಗಳಿಸಬಹುದು ಎಂಬುದಕ್ಕೆ ಬಸಾಪುರದ ನಾಗಪ್ಪ ಮುದ್ದಿಯವರೇ ಸಾಕ್ಷಿ. ಸಮರ್ಪಕ ನಿರ್ವಹಣೆ ಮಾಡಿದರೆ ಉತ್ತಮ ಇಳುವರಿ: ನಾನು ಕಳೆದ 35 ವರ್ಷಗಳಿಂದಲೂ ಮಾವು ಬೆಳೆಯನ್ನೇ ಅವಲಂಬಿಸಿ ಕೃಷಿಯಲ್ಲಿ ತೊಡಗಿದ್ದೇನೆ. ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲೇ ಮಾವು ಬೆಳೆಯುತ್ತಿದ್ದು, ತೋಟದ ಸಮರ್ಪಕ ನಿರ್ವಹಣೆ ಮಾಡುತ್ತ ಬಂದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ. ಈ ವರ್ಷ ಒಂದು ಕೋಟಿ ರು. ಆದಾಯ ನಿರೀಕ್ಷೆ ಮಾಡಿದ್ದೆ. ಗುತ್ತಿಗೆ ಮಾತುಕತೆ ಮುಗಿದ ಮೇಲೆ ಕೂಡ ಅನೇಕರು ಬಂದು ₹80 ಲಕ್ಷ ವರೆಗೂ ಕೇಳುತ್ತಿದ್ದಾರೆ. ಆದರೆ, ನನಗೆ ತೃಪ್ತಿಯಿದೆ. ಹಿಂದೆಲ್ಲ ಮಾರುಕಟ್ಟೆಯಲ್ಲಿ ಕೂತು ವ್ಯಾಪಾರ ಮಾಡುತ್ತಿದ್ದೆ. ಈಗ ಹೆಚ್ಚು ಮಾವು ಉತ್ಪನ್ನ ಇರುವುದರಿಂದ ಗುತ್ತಿಗೆ ನೀಡಿದ್ದೇನೆ ಎಂದು ಬಸಾಪುರ ಗ್ರಾಮದ ಮಾವು ಬೆಳೆಗಾರರು ನಾಗಪ್ಪ ಮುದ್ದಿ ಹೇಳಿದರು.