ಮಳೆ ಬಂದಾಗ ಲೆಲ್ಲ ಮಳೆ ನೀರಿನಿಂದ ಮುಚ್ಚಿ ಹೋಗುವ ಸಂಪರ್ಕ ರಸ್ತೆ ಜೋಸೆಫ್.ಎಂ.ಆಲ್ದೂರು
ಬಸರವಳ್ಳಿ ಪಂಚಾಯಿತಿ ವ್ಯಾಪ್ತಿಯ ಹಸಲರೇ ವಾಸವಿರುವ ವಾರ್ಡಿಗೆ ಮಳೆ ಬಂದರೆ ಸಂಪರ್ಕ ಕಡಿತದ ಚಿಂತೆ. ಹಳ್ಳದ ನೀರಿನಿಂದ ಸಂಪೂರ್ಣ ರಸ್ತೆ ಮುಚ್ಚಿ ಹೋಗುವುದರಿಂದ ಕೇಳುವವರಿಲ್ಲ ಸ್ಥಳೀಯ ನಿವಾಸಿಗಳ ಗೋಳು. ವಾರ್ಡಿನ ಸನಿಹದ ಅರಣ್ಯ ಪ್ರದೇಶದ ನಡುವಿನಿಂದ ಹರಿಯುವ ನೀರಿನ ಮೂಲ ಆನೆ ಬಿದ್ದ ಹಳ್ಳಕ್ಕೆ ಸೇರಿ ಬಳಿಕ ಭದ್ರಾ ನದಿ ಕೂಡಿಕೊಳ್ಳುತ್ತದೆ. ಮಾನ್ಸೂನ್ ಸಮಯದಲ್ಲಿ ಮಳೆ ನೀರಿನ ಹರಿವಿನಿಂದ ಹಳ್ಳ ತುಂಬಿ ಹರಿಯುತ್ತದೆ. ಮಳೆ ಯಾವಾಗ ಬಂದರೂ ಈ ವಾರ್ಡಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಮುಚ್ಚಿ ಹೋಗುವುದಲ್ಲದೆ ಸಂಪರ್ಕ ಸ್ಥಗಿತವಾಗುತ್ತದೆ.
ಬಹು ಪಾಲು ರಸ್ತೆ ದಾಟಲು ಸಾಧ್ಯವೇ ಆಗುವುದಿಲ್ಲ. ಅಷ್ಟೊಂದು ಹಳ್ಳದ ನೀರು ಹರಿದು ರಸ್ತೆ ಮುಚ್ಚಿ ಹೋಗಿರುತ್ತದೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಗ್ರಾಮದ ಜನರ ನೋವು ಆಲಿಸಿ ಶೀಘ್ರ ಸಮಸ್ಯೆ ಬಗೆಹರಿಸಬೇಕೆಂದು ವಾರ್ಡಿನ ಜನ ಮನವಿ ಮಾಡಿದ್ದರೂ ಸಮಸ್ಯೆ ಮಾತ್ರ ಪರಿಹಾರ ವಾಗಿಲ್ಲ.ವಾರ್ಡಿನ ಸುಂದರೇಶ್ ಮತ್ತು ಸತೀಶ್ ಮಾತನಾಡಿ ಈ ಸಮಸ್ಯೆ ಇಂದು ನಿನ್ನೆಯದಲ್ಲ ಹಲವು ದಶಕಗಳಿಂದ ಹೀಗೆಯೇ ಕಷ್ಟ ಪಡುತ್ತಿದ್ದೇವೆ. ಮಳೆ ನೀರು ರಸ್ತೆ ಮೇಲೆ ತುಂಬಿ ಹರಿದಾಗ ನಮಗೂ ಪಟ್ಟಣಕ್ಕೆ ತೆರಳಲು ಸಾಧ್ಯವಿಲ್ಲ. ರಸ್ತೆ ಮುಚ್ಚಿ ಹೋದರೆ ಯಾವ ವಾಹನಗಳು ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ರೋಗಿಗಳನ್ನು ಸಕಾಲಕ್ಕೆ ಸಾಗಿಸಲು ಸಾಧ್ಯವಾಗದೇ ನಮ್ಮ ವಾರ್ಡಿನ ಜನರು ಪರಿತಪಿಸುತ್ತಿದ್ದಾರೆ ಒಂದು ರೀತಿ ರಸ್ತೆ ಸಂಪರ್ಕ ವಿಲ್ಲದಾಗ ಪರದಾಡುವಂತಾಗುತ್ತದೆ.ಕ್ಷೇತ್ರದ ಶಾಸಕರಾದ ನಯನಾ ಮೊಟಮ್ಮ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.ಶಾಲಾ ಕಾಲೇಜುಗಳಿಗೆ ಈ ರಸ್ತೆ ಮೂಲಕವೇ ತೆರಳ ಬೇಕು ಆದರೆ ರಸ್ತೆ ಮುಚ್ಚಿದರೆ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜ ರಾಗಲು ತೊಂದರೆ ಎದುರಾಗುತ್ತದೆ. ಮನೆಯಿಂದ ದೂರವಿದ್ದು ವಸತಿ ನಿಲಯದಲ್ಲೇ ಇದ್ದು ವ್ಯಾಸಂಗ ಮಾಡೋಣ ವೆಂದರೆ ಪೋಷಕರ ಕುರಿತು ಅವರ ಸುರಕ್ಷತೆ ಕುರಿತು ಚಿಂತಿಸುವಂತಾಗಿದೆ. ಎಷ್ಟೋ ಬಾರಿ ಹಳ್ಳದ ನೀರಿನ ರಭಸ ಕಡಿಮೆ ಯಾಗುವ ತನಕ ಶಾಲೆಗಳಿಗೆ ರಜೆ ಹಾಕಿದ್ದೇವೆ ರಸ್ತೆ ಸಂಪರ್ಕ ಕಡಿತಗೊಂಡು ನಮ್ಮ ವಾರ್ಡ್ ದ್ವೀಪದಂತಾಗುತ್ತದೆ ಎಂದು ವಾರ್ಡಿನ ವಿದ್ಯಾರ್ಥಿಗಳಾದ ಜ್ಯೋತಿ,ಅಭಿನವ,ಅಕ್ಷಯ್, ಪೂಜಾ,ಮಿಥುನ್,ಸ್ಪೂರ್ತಿ, ಜೀವನ್, ಸುಮಂತ್, ಕಿಶೋರ್, ಅಳಲು ತೋಡಿಕೊಂಡಿದ್ದಾರೆ.
ವಾರ್ಡಿನಲ್ಲಿರುವ 885 ಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿ 573 ಮಂದಿ ಮತದಾರರಿದ್ದಾರೆ. ಇದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಹಸಲರ ಜನಸಂಖ್ಯೆ ಒಟ್ಟು 60 ಸುಮಾರು 14 ಕುಟುಂಬಗಳು ವಾಸವಿದೆ ಇವರ ಮಳೆಗಾಲದ ಯಾತನೆ ದೂರವಾಗುವುದು ಮಾತ್ರ ಅಗತ್ಯವಾದ ಸೇತುವೆ ನಿರ್ಮಾಣ ಮಾಡಿದಾಗ.
ಈ ಸಂಬಂಧಪಟ್ಟ ಬಸರವಳ್ಳಿ ವಾರ್ಡಿನ ಜನತೆ ಸಮಸ್ಯೆ ಈಗಾಗಲೇ ಗಮನಕ್ಕೆ ಬಂದಿದ್ದು, 7 ಲಕ್ಷ ಅನುದಾನ ಮೀಸಲಿಡಲಾಗಿದೆ.