‘ಬಾಲಕೃಷ್ಣ ಅಲ್ಲ, ಬರೀ ಬಾಲ’ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಸಚಿವ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದು, ‘ಬಾಲವನ್ನು ರಾಜಣ್ಣನ ಕೈಗೇ ಕೊಡಿ, ಅವರೇ ಹಿಡ್ಕೊಂಡು ಓಡಾಡಲಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರ: ‘ಬಾಲಕೃಷ್ಣ ಅಲ್ಲ, ಬರೀ ಬಾಲ’ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಸಚಿವ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದು, ‘ಬಾಲವನ್ನು ರಾಜಣ್ಣನ ಕೈಗೇ ಕೊಡಿ, ಅವರೇ ಹಿಡ್ಕೊಂಡು ಓಡಾಡಲಿ’ ಎಂದು ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ಪಕ್ಷ ನಿಷ್ಠೆ ವಿಚಾರ ಪ್ರಸ್ತಾಪಿಸಿ ‘ನಾವು ಯಾರು ತಪ್ಪು ಮಾಡಿದರೂ ತಪ್ಪು ಅಂತ ಹೇಳುತ್ತೇವೆ. ನಾವೇ ತಪ್ಪು ಮಾಡಿದರೂ ಹೇಳಲಿ, ಇಲ್ಲಿ ಪಕ್ಷ ನಿಷ್ಠೆ ಮುಖ್ಯ. ಅಣ್ಣನಿಗೆ ಮಂತ್ರಿಯಾಗಿ ಒಳ್ಳೆ ಕಾಸು ಆಯ್ತು, ಇನ್ನೇನು ಮಾಡುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು.
ಮಾಜಿ ಸಚಿವ ಕೆ.ಎನ್. ರಾಜಣ್ಣ
ರಾಜಣ್ಣ ಅವರ ಮನೆ ದೇವರ ಬಳಿ ನಾನೇ ಬರುತ್ತೇನೆ. ನಾವು ಕುಮಾರಸ್ವಾಮಿ ಬಳಿ ರಾಜಕೀಯ ಮಾತನಾಡಿಲ್ಲ ಎಂದು ಅವರು ಪ್ರಮಾಣ ಮಾಡಲಿ. ಹಾಗೆ ಪ್ರಮಾಣ ಮಾಡಿದರೆ ನಾನು ಅವರಿಗೆ ಶರಣಾಗುತ್ತೇನೆ ಎಂದು ಸವಾಲೆಸೆದರು.
ಬಹಳ ದಿವಸ ಡೂಪ್ ರಾಜಕಾರಣ ನಡೆಯುವುದಿಲ್ಲ. ಪ್ರಾಮಾಣಿಕ ರಾಜಕಾರಣ ಮಾತ್ರ ಉಳಿಯುತ್ತದೆ. ಕುಮಾರಸ್ವಾಮಿ ಬಳಿ ರಾಜಕೀಯ ಮಾತನಾಡಿದ್ದು ಸತ್ಯ ಎಂದು ಸ್ವತಃ ಅವರ ಮಗನೇ ಹೇಳಿದ್ದಾರೆ. ಹಾಗಿದ್ದರೆ ಕುಮಾರಸ್ವಾಮಿ ಬಳಿ ಏನು ಕಡ್ಲೆಪುರಿ ತಿನ್ನಕ್ಕೆ ಹೋಗಿದ್ರಾ ಎಂದು ಪ್ರಶ್ನಿಸಿದರು.
ಸಚಿವ ಬಾಲಕೃಷ್ಣ ಬರೀ ಬಾಲ, ಬಾಲಕ್ಕೆ ಉತ್ತರಿಸಲ್ಲ: ರಾಜಣ್ಣ
ಬೆಂಗಳೂರು: ಸಚಿವ ಬಾಲಕೃಷ್ಣನಿಗೆ ಕೃಷ್ಣ ಇಲ್ಲ, ಕೇವಲ ಬಾಲ ಆತ. ಆ ಬಾಲಕ್ಕೆಲ್ಲ ನಾನು ಉತ್ತರ ನೀಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಜೆಡಿಎಸ್ಗೆ ಹೋಗುತ್ತೇನೆ ಎಂದು ಹೇಳಿದ ಸಚಿವ ಬಾಲಕೃಷ್ಣ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಎದುರು ಏಕವಚನದಲ್ಲೇ ಆಕ್ರೋಶ ಹೊರಹಾಕಿದರು. ಸ್ಟಿಂಗ್ ಆಪರೇಷನ್ ಕುರಿತಂತೆ ಮಾತನಾಡಿದ ರಾಜಣ್ಣ, ಸ್ಟಿಂಗ್ ಆಪರೇಷನ್ ಕುರಿತಂತೆ ಹಿಂದೆಯೇ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಇನ್ನೂ 25ರಿಂದ 30 ಸ್ಟಿಂಗ್ ಆಪರೇಷನ್ಗಳಿವೆ. ಸಂದರ್ಭಕ್ಕೆ ತಕ್ಕಂತೆ ಒಂದೊಂದನ್ನೇ ಹೊರಗೆ ಹಾಕುತ್ತಾರೆ ಎಂದರು.
ಕೇಂದ್ರ ಸಚಿವ ಅಮಿತ್ ಶಾ ಅವರನ್ನು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿಯಾದ ಕುರಿತಂತೆ ರಾಜಣ್ಣ ಪ್ರತಿಕ್ರಿಯಿಸಿ, ರಾಜೇಂದ್ರ ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ. ಅವರು ಏಕೆ ಜೆಡಿಎಸ್ಗೆ ಹೋಗುತ್ತಾರೆ? ರಾಷ್ಟ್ರಮಟ್ಟದ ಸಹಕಾರಿ ಸಂಸ್ಥೆಯಾದ ಕ್ರಿಬ್ಕೋ (ಕೃಷಿಕ್ ಭಾರತಿ ಕೋ-ಆಪರೇಟಿವ್ ಲಿ.)ನ ನಿರ್ದೇಶಕ. ಕ್ರಿಬ್ಕೋ ಏಷ್ಯಾದಲ್ಲೇ ಅತಿದೊಡ್ಡ ಯೂರಿಯಾ ಉತ್ಪಾದಕ ಸಹಕಾರಿ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರು. ಸಬ್ಸಿಡಿ ಬರಬೇಕಾಗುತ್ತದೆ. ಹೀಗಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ಸಭೆ ಕರೆಯುತ್ತಿರುತ್ತಾರೆ. ಅಮಿತ್ ಶಾ ಅವರು ಕೇಂದ್ರ ಸಹಕಾರ ಸಚಿವರಾಗಿದ್ದು, ಆಡಳಿತಾತ್ಮಕ ಕಾರಣಗಳಿಂದ ಅವರನ್ನು ಭೇಟಿ ಮಾಡಬೇಕಾಗುತ್ತದೆ. ಕರ್ನಾಟಕದಿಂದ ರಾಜೇಂದ್ರ ಒಬ್ಬರೇ ನಿರ್ದೇಶಕರಾಗಿರುವ ಕಾರಣ ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರ ಚುನಾವಣಾ ರಾಜಕೀಯದ ನಿವೃತ್ತಿ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಚುನಾವಣೆಗೆ ನಿಲ್ಲುವುದಿಲ್ಲ ಎನ್ನುವುದೇ ಕಾಂಗ್ರೆಸ್ಗೆ ಹೊಡೆತ ನೀಡಲಿದೆ. ಜತೆಗೆ ಅಹಿಂದ ಸಂಘಟನೆಗೂ ಮಾರಕವಾಗುತ್ತದೆ. ಯಾರು ಏನೇ ಹೇಳಿದರೂ ಸಿದ್ದರಾಮಯ್ಯ ಅವರು ಚುನಾವಣೆ ರಾಜಕೀಯದಿಂದ ದೂರವುಳಿದರೆ ಕಾಂಗ್ರೆಸ್ಗೆ ಅಹಿಂದ ಶಕ್ತಿ ಕಡಿಮೆಯಾಗುತ್ತದೆ. ಈ ಕುರಿತಂತೆ ನಾನೂ ಸಿದ್ದರಾಮಯ್ಯಅವರೊಂದಿಗೆ ಮಾತನಾಡಿದ್ದೇನೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪದೇಪದೇ ಹೇಳಬೇಡಿ. ಸಂದರ್ಭ ಬಂದಾಗ ಅದರ ಬಗ್ಗೆ ಚಿಂತನೆ ಮಾಡೋಣ ಎಂದು ತಿಳಿಸಿದ್ದೇನೆ ಎಂದು ಹೇಳಿದರು.
