ಹಿರಿಯೂರು ಉಪಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ಎದುರಿಸುತ್ತೇವೆ. ಟಿಕೆಟ್‌ ವಿಚಾರವಾಗಿ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.

ಶಿವಮೊಗ್ಗ : ಹಿರಿಯೂರು ಉಪಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ಎದುರಿಸುತ್ತೇವೆ. ಟಿಕೆಟ್‌ ವಿಚಾರವಾಗಿ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದ ಟಿಕೆಟ್‌ ಅನ್ನು ಬಿಜೆಪಿಗೆ ನೀಡಲು ನಾವು ಕೇಂದ್ರದ ವರಿಷ್ಠರನ್ನು ಆಗ್ರಹಿಸದ್ದೇವೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಜೆಡಿಎಸ್‌ಗೆ ಟಿಕೆಟ್‌ ನೀಡಲು ಬೇಡಿಕೆಯಿಟ್ಟಿದ್ದಾರೆ. ಅಂತಿಮವಾಗಿ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಗಳಿಸಿದ ಅಪೂರ್ವ ವಿಜಯವು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಕ್ಸೂಚಿಯಾಗಿದ್ದು, 2028ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 120 ರಿಂದ 130 ಸ್ಥಾನ ಗೆಲ್ಲುವುದು ನಿಶ್ಚಿತವಾಗಿದೆ. ಇದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ನ ಹಣ ಮತ್ತು ತೋಳ್ಬಲ ಎರಡನ್ನೂ ಎದುರಿಸಿ ನಮ್ಮ ಕಾರ್ಯಕರ್ತರು ಮುಂದಡಿಯಿಡಬೇಕು. ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಆರ್ಥಿಕ ಸ್ಥಿತಿಗತಿಗಳು ಬಹಿರಂಗವಾಗಿದ್ದು, ಕಾಂಗ್ರೆಸ್ ಸರ್ಕಾರ ಅಕ್ಷರಶಃ ಬೆತ್ತಲೆಯಾಗಿದೆ ಎಂಬುದನ್ನು ಸರ್ಕಾರವೇ ರುಜುವಾತುಪಡಿಸಿದೆ. ಕಾರ್ಯಕರ್ತರು ಇಂತಹ ಅವಕಾಶಗಳನ್ನು ಬಳಸಿಕೊಂಡು ಸರ್ಕಾರದ ಅವನತಿಯನ್ನು ಜನರೆದುರು ಇಡಬೇಕು. ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದರು.

ಸಿಎಂಗೆ ತಿರುಗೇಟು:

ಹಿರಿಯೂರಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮುಂದಿನ ಉಪ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಹಿಷ್ಕರಿಸಬೇಕೆಂದು ಕರೆಗೆ ತಿರುಗೇಟು ನೀಡಿದ ವಿಜಯೇಂದ್ರ ಅವರು, ಇದು ಉದ್ಧಟತನದ ಹೇಳಿಕೆ. ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಿಯ ಪಕ್ಷವೊಂದರ ಕಾರ್ಯಕರ್ತರನ್ನು ಬಹಿಷ್ಕರಿಸಬೇಕೆಂಬ ಹೇಳಿಕೆ ಅವರ ಮನಃಸ್ಥಿತಿಯನ್ನು ತಿಳಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಹಿಂದುಳಿದ ಶೋಷಿತ ವರ್ಗದವರ ಬಗ್ಗೆ ಕಾಳಜಿ ಇಲ್ಲ. ಇತ್ತೀಚೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ಸಾರ್ವಜನಿಕರ ಮೇಲೆ ಹೇರಿದೆ. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಹಾಲು ಉತ್ಪಾದಕರಿಗೆ ನೀಡುವ 2 ರು. ಸಹಾಯಧನವನ್ನು ಸರ್ಕಾರದಿಂದಲೇ ನೀಡಲಾಗಿತ್ತು. ಆದರೆ ಸಾರ್ವಜನಿಕರಿಗೆ ಯಾವುದೇ ಭಾರ ಹೇರಲಾಗಿರಲಿಲ್ಲ. ಇಂತಹ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಬೇಕೆಂದರು.

ಡಿ.1ರಿಂದ 25ರವರೆಗೆ ಸೇವಾ ಬೂತ್ ಅಭಿಯಾನ

ಡಿ.1ರಿಂದ 25ರವರೆಗೆ ಪ್ರಧಾನಿ ಮೋದಿ ಅವರ ನಿರಂತರ 25 ವರ್ಷಗಳ ಯಶಸ್ವಿ ಆಡಳಿತದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ‘ಸೇವಾ ಬೂತ್ ಅಭಿಯಾನ’ ನಡೆಯಲಿದ್ದು, ಪ್ರತಿ ಬೂತ್‌ನಲ್ಲಿ ಹಿರಿಯ ಕಾರ್ಯಕರ್ತರ ನೇತೃತ್ವದಲ್ಲಿ ‘ವಿಸ್ತಾರಕ ಯೋಜನೆ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.