ತೋಂಟದಾರ್ಯ ಮಠದ ಜಾತ್ರೆಗೆ ಬಸವ ಬುತ್ತಿ ದಾಸೋಹ ಸೇವೆ

KannadaprabhaNewsNetwork | Published : Mar 29, 2025 12:35 AM

ಸಾರಾಂಶ

ಗದುಗಿನ ಜ.ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ಗದುಗಿನ ಬಸವೇಶ್ವರ ನಗರದ ಭಕ್ತಾಧಿಗಳಿಂದ ದಾಸೋಹಕ್ಕಾಗಿ ಬಸವ ಬುತ್ತಿ ಸೇವಾ ಕೈಂಕರ್ಯ ಕೈಗೊಳ್ಳಲಾಗುವದು ಎಂದು ಬಸವೇಶ್ವರ ನಗರದ ದಾನೇಶ್ವರಿ ಮಹಿಳಾ ಮಂಡಳದ ಕಾರ್ಯದರ್ಶಿ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷೆ ಶೈಲಾ ಕೋಡೆಕಲ್ಲ ಹೇಳಿದರು.

ಗದಗ: ಕೋಮುಸೌಹಾರ್ದತೆ, ವೈಚಾರಿಕತೆಗೆ ಹೆಸರಾಗಿರುವ ಗದುಗಿನ ಜ.ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ಗದುಗಿನ ಬಸವೇಶ್ವರ ನಗರದ ಭಕ್ತಾಧಿಗಳಿಂದ ದಾಸೋಹಕ್ಕಾಗಿ ಬಸವ ಬುತ್ತಿ ಸೇವಾ ಕೈಂಕರ್ಯ ಕೈಗೊಳ್ಳಲಾಗುವದು ಎಂದು ಬಸವೇಶ್ವರ ನಗರದ ದಾನೇಶ್ವರಿ ಮಹಿಳಾ ಮಂಡಳದ ಕಾರ್ಯದರ್ಶಿ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷೆ ಶೈಲಾ ಕೋಡೆಕಲ್ಲ ಹೇಳಿದರು. ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಬಸವೇಶ್ವರ ನಗರದ ಸದ್ಭಕ್ತರ, ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ ಕಮಿಟಿ, ದಾನೇಶ್ವರಿ ಮಹಿಳಾ ಮಂಡಳ ಹಾಗೂ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏ. 11ರಂದು ಸಂಜೆ 5ಕ್ಕೆ ಬಸವೇಶ್ವರ ನಗರ (ಶಹಪೂರಪೇಟೆ)ದ ಸಕಲ ಸದ್ಭಕ್ತರು ಈ ವರ್ಷ ತೋಂಟದಾರ್ಯ ಜಾತ್ರೆಗೆ ಬಸವ ಬುತ್ತಿ ಸೇವೆ ಮಾಡಲು ಶೃದ್ಧಾಭಕ್ತಿಯಿಂದ ಸ್ವಯಂ ಸ್ಫೂರ್ತಿಯಿಂದ ಮುಂದೆ ಬಂದಿದ್ದು ಸುಮಾರು 7 ಸಾವಿರದಷ್ಟು ಕರ್ಚಿಕಾಯಿ, ಕನಿಷ್ಠ 5 ಸಾವಿರದಷ್ಟು ಖಡಕ್ ರೊಟ್ಟಿ, ಚಟ್ನಿಪುಡಿ, ಮೊಸರನ್ನದ ಬಸವ ಬುತ್ತಿಯನ್ನು ಸಿದ್ದಪಡಿಸಿಕೊಂಡು ಶ್ರೀಮಠಕ್ಕೆ ಮೆರವಣಿಗೆಯೊಂದಿಗೆ ತಲುಪಿಸಲಾಗುವದು ಎಂದರು. ಹಸಿರು ಸೀರೆಯುಟ್ಟು ಶ್ರದ್ಧಾಭಕ್ತಿಯೊಂದಿಗೆ ಬಸವ ಬುತ್ತಿಯನ್ನು ಹೊತ್ತುಕೊಂಡ ಬಸವೇಶ್ವರ ನಗರದ ಮಹಿಳೆಯರು ಹೊಂಬಳದ ಭಜನಾ ಮೇಳ, ಬಸವೇಶ್ವರ ನಗರದ ಸಮ್ಮಾಳ ಮೇಳದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಕರ್ನಾಟಕ ಟಾಕೀಜ್, ಮಹಾತ್ಮಾ ಗಾಂಧಿ ಸರ್ಕಲ್, ತೋಂಟದಾರ್ಯ ಮಠದ ಕಮಾನ್ ಮೂಲಕ ಹಾಯ್ದು ತೋಂಟದಾರ್ಯ ಮಠವನ್ನು ತಲುಪಲಿದೆ. ಈ ಎಲ್ಲ ಕಾರ್ಯಕ್ಕೆ ಬಸವೇಶ್ವರ ನಗರದ ಗುರುಹಿರಿಯರು, ಯುವಕರ ಪಡೆ ಮಹಿಳಾ ಮಂಡಳಕ್ಕೆ ಸಾಥ್ ನೀಡಲಿದ್ದಾರೆ ಎಂದರು. ವೀರಭದ್ರೇಶ್ವರ ದೇವಸ್ಥಾನ ಹಿರಿಯ ಟ್ರಸ್ಟಿ ರಾಚಪ್ಪ ಮಿಣಜಗಿ ಮಾತನಾಡಿ, ಲಿಂ.ಜ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಅವರಿಗೆ ಬಸವೇಶ್ವರ ನಗರದ ಮೇಲೆ ವಿಶೇಷ ಪ್ರೀತಿ. ಶಹಪೂರಪೇಟೆ ನನ್ನ ತವರು ಮನೆ ಇದ್ದ ಹಾಗೆ ಎಂದೆನ್ನುತ್ತಿದ್ದರು ಪ್ರತಿ ವರ್ಷ ಜಾತ್ರಾ ಮಹೋತ್ಸವಕ್ಕೆ ಇಲ್ಲಿನ ಕುಬಸದ ಅವರ ಮನೆಯಿಂದ ಪೂಜೆ ಪ್ರಸಾದ ಮುಗಿಸಿಕೊಂಡು ಬೃಹತ್ ಮೆರಣಿಗೆ ಮೂಲಕ ಶ್ರೀಮಠಕ್ಕೆ ತೆರಳಿದ ಬಳಿಕವೇ ಜಾತ್ರೆಗೆ ಚಾಲನೆ ಸಿಗುತ್ತಿತ್ತು. ಅನ್ನದಾಸೋಹ, ಜ್ಞಾನದಾಸೋಹ, ಶಿಕ್ಷಣ, ಕೃಷಿ, ಪುಸ್ತಕ ಪ್ರಕಟಣೆಯಲ್ಲಿ ಮುಂಚೂಣಿಯಲ್ಲಿದ್ದು ಖ್ಯಾತಿ ಪಡೆದವರಾಗಿದ್ದರು. ಬಸವೇಶ್ವರ ನಗರದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಗುರುಗಳ ಸ್ಮರಣೆಗಾಗಿ ಅವರ ದಾಸೋಹ ಪ್ರೀತಿಯನ್ನು, ಬಸವ ಪರಂಪರೆಯನ್ನು ನಾವೆಲ್ಲ ಶ್ರದ್ಧಾಭಕ್ತಿಯೊಂದಿಗೆ ಮುನ್ನಡೆಸಲು ಈ ಬಸವ ಬುತ್ತಿ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರಲ್ಲದೆ ಪ್ರತಿ ಜಾತ್ರಾ ಸಂದರ್ಭದಲ್ಲಿ ದಾಸೋಹ ಸಮಿತಿಯಿಂದ ಮಾರ್ಗದರ್ಶನದಲ್ಲಿ ತಾವು ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡರು.ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಕರವೀರಯ್ಯ ಕೋರಿಮಠ, ಕಾರ್ಯದರ್ಶಿ ಶಿವಪ್ಪ ಕತ್ತಿ, ಸಹ ಕಾರ್ಯದರ್ಶಿ ದಶರಥರಾಜ ಕೊಳ್ಳಿ, ಸಿದ್ಧರಾಮಪ್ಪ ಗೊಜನೂರ, ಕೋಶಾಧ್ಯಕ್ಷ ಈರಣ್ಣ ಗೋಡಚಿ, ಸಹ ಕೋಶಾಧ್ಯಕ್ಷ ರಾಜಶೇಖರ ಲಕ್ಕುಂಡಿ, ಟ್ರಸ್ಟಿ ಶಿವಬಸಪ್ಪ ಯಂಡಿಗೇರಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ದಾನೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಲಲಿತಾ ತಡಸದ, ರಾಜೇಶ್ವರಿ ಕುಬಸದ, ಶೋಭ ಗುಗ್ಗರಿ, ವಿಜಯಲಕ್ಷ್ಮೀ ಕುಬಸದ, ಸುರೇಖಾ ಪಿಳ್ಳೆ, ಮಹಾನಂದಾ ಯಂಡಿಗೇರಿ, ವಿಜಯಲಕ್ಷ್ಮೀ ಕಾತರಕಿ, ಶಾರದಾ ಹಚಡದ, ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟಿಗಳಾದ ಶಿವಪುತ್ರಪ್ಪ ಬೇವಿನಮರದ, ಶಂಭುಲಿಂಗಪ್ಪ ಕಾರಕಟ್ಟಿ, ಸುರೇಶ ಕೂಡೇಕಲ್ಲ, ಈರಣ್ಣ ಕಾತರಕಿ, ಪ್ರದೀಪ ಕೊಡೇಕಲ್ಲ ಸೇರಿದಂತೆ ಯುವಕ ಮಂಡಳದವರಿದ್ದರು.

Share this article