ಗಜೇಂದ್ರಗಡ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ ಸೇರಿ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಸೆ.೯ರಂದು ಬಸವ ಸಂಸ್ಕೃತಿ ಅಭಿಯಾನ ಗದಗಿನ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಬಸವರಾಜ ಅಂಗಡಿ ಹೇಳಿದರು.
ಇಲ್ಲಿನ ರೋಣ ರಸ್ತೆಯಲ್ಲಿನ ಸಿಬಿಎಸ್‌ಸಿ ಶಾಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ ಹಾಗೂ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ವಿಶ್ವದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ಜಾತಿ, ಮತ, ಲಿಂಗ, ಬಡವ, ಬಲ್ಲಿದ ಎನ್ನುವ ಬೇಧವಿಲ್ಲದೆ ಸಮ ಸಮಾಜವನ್ನು ನೆಲೆಗೊಳಿಸಿದವರು. ಹೀಗಾಗಿ ಪ್ರಸ್ತುತ ವಿದ್ಯಮಾನದಲ್ಲಿ ಬಸವಣ್ಣನವರ ಆಶಯಗಳಾದ ಸಮಸಮಾಜದ ನಿರ್ಮಾಣ, ವ್ಯಸನಮುಕ್ತ ಸಮಾಜ, ಅಂಧಶ್ರದ್ಧೆ ಅಳಸಿ, ಸುಜ್ಞಾನ ಬೆಳೆಸುವುದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಅಧ್ಯಾತ್ಮದ ಅರಿವು ಹಾಗೂ ಮಹಿಳೆಯರ ಘನತೆ ಕಾಪಾಡುವ ವಿಚಾರ ಸಂಕಿರಣ ಮತ್ತು ಸಂವಾದಗಳನ್ನು ತಾಲೂಕಿನ ವಿವಿಧ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದರು.ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯ ಕಳಕಯ್ಯ ಸಾಲಿಮಠ ಮಾತನಾಡಿ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಬಾಹ್ಯ ದೇವಾಲಯಗಳನ್ನು ನಿರಾಕರಿಸಿ ದೇಹವೇ ದೇವಾಲಯವಾಗಬೇಕೆಂಬ ಸದುದ್ದೇಶದಿಂದ ಇಷ್ಟಲಿಂಗ ಪೂಜೆಯನ್ನು ಜಾರಿಗೆ ತಂದ ವಿಶ್ವನಾಯಕ ಬಸವಣ್ಣನವರ ವಿಚಾರಧಾರೆಗಳನ್ನು ಜಾಗೃತಿಗಾಗಿ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೇವು. ಹೀಗಾಗಿ ಸೆ.೯ರಂದು ಗದುಗಿನ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೧೧ ಗಂಟೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ, ಸಂಜೆ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ, ಸಾರ್ವಜನಿಕ ಸಮಾರಂಭ, ರಾತ್ರಿ ೮.೩೦ಕ್ಕೆ ನಾಟಕ ಪ್ರದರ್ಶನ ಬಳಿಕ ಪ್ರಸಾದದ ವ್ಯವಸ್ಥೆ ನಂತರ ಶಿವಸಂಚಾರ ಸಾಣೆಹಳ್ಳಿ ವಚನಗೀತೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ಈ ವೇಳೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಕೊಟಗಿ, ಜಾಗತಿಕ ಲಿಂಗಾಯತ ಮಹಸಭಾದ ಶರಣು ಪೂಜಾರ, ಎಂ.ಬಿ.ಸೋಂಪುರ, ಶರಣು ಹಡಪದ, ಜಿ.ಎಸ್. ಓದುಸುಮಠ, ಯು.ಆರ್. ಚನ್ನಮ್ಮನವರ, ಸಾಗರ ವಾಲಿ ಸೇರಿ ಇತರರು ಇದ್ದರು.