ಸಿದ್ದಾಪುರ: ಬಸವಣ್ಣನವರು ಪರಂಪರೆಯ ಮೂಲಕ ವಿಶ್ವಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು. ನಾಡನ್ನು ಪ್ರಜ್ಞಾವಂತ ನಾಡನ್ನಾಗಿಸಿದವರು ಬಸವಣ್ಣ ಎಂದು ಚಿಕ್ಕಮಗಳೂರು ಬಸವತತ್ವಪೀಠ, ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ತಿಳಿಸಿದರು.
ಮುದ್ದೇಬೀಹಾಳದ ತಂಗಡಗಿಯ ಅನ್ನದಾನ ಭಾರತಿ ಅಣ್ಣಪ್ಪ ಸ್ವಾಮಿಗಳು ಆಶೀರ್ವಚನ ನೀಡಿ, ಬಸವಣ್ಣನವರಿಗೆ ಬೆಂಬಲವಾಗಿ ನಿಂತು ಧರ್ಮಕ್ಕಾಗಿ ಶ್ರಮಿಸಿದವರು ಮಾಚಿದೇವರು. ಜಾತಿಯ ಕಟ್ಟುಗಳಿಗೆ ಬೀಳದೇ ಸಮಾಜಕ್ಕೆ ಹೊಸದಿಕ್ಕನ್ನು ತೋರಿದರು ಎಂದರು.
ತೀರ್ಥಹಳ್ಳಿ ನಿಟ್ಟೂರಿನ ರೇಣುಕಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಸಮಾಜಕ್ಕೆ ದಾರಿದೀಪವಾದ ವಿಚಾರಗಳನ್ನು ನೀಡಿದವರು ಮಡಿವಾಳ ಮಾಚಿದೇವರು. ಆ ನಿಟ್ಟಿನಲ್ಲಿ ಡಾ. ಬಸವ ಮಾಚಿದೇವ ಸ್ವಾಮಿಗಳು ಮತ್ತಷ್ಟು ವಿಶಾಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಶಿರಸಿಯ ಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿ, ತೊಡುವ ಹೊರಬಟ್ಟೆಯ ಮಡಿಯ ಜತೆಗೆ ಬದುಕಿನ ಬಟ್ಟೆಯನ್ನು ಹಸನು ಮಾಡಿಕೊಳ್ಳುವ ಕ್ರಮವನ್ನು ತೋರಿಸಿದವರು ಮಡಿವಾಳ ಮಾಚಿದೇವರು. ಚಿಕ್ಕ ಸಮಾಜವಾದರೂ ಹೃದಯ ಶ್ರೀಮಂತಿಕೆಯಲ್ಲಿ ದೊಡ್ಡ ಸಮಾಜ ಅಗಸರದ್ದು ಎಂದರು.
ದಶಮಾನೋತ್ಸವದ ೫ ದಿನಗಳ ಕಾಲದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ಚಿತ್ರದುರ್ಗದ ಡಾ. ಬಸವ ಮಾಚಿದೇವ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ದಾನಿ ಎಂ.ಕೆ. ಹನುಮಂತಪ್ಪ ಹೊಸಪೇಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಕಲ್ಪ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೇವಾಲಯದ ಪ್ರಧಾನ ಕಾರ್ಯದರ್ಶಿ ಸದಾನಂದ ಮಡಿವಾಳ ಸ್ವಾಗತಿಸಿದರು.