ಸಮಸಮಾಜದ ನಿರ್ಮಾಣಕ್ಕೆ ಬಸವಣ್ಣ ಆದರ್ಶ ಅಳವಡಿಸಿಕೊಳ್ಳಿ: ಎಸ್ಪಿ ಪದ್ಮಿನಿ ಸಾಹು

KannadaprabhaNewsNetwork | Published : May 10, 2024 11:47 PM

ಸಾರಾಂಶ

ಬಸವೇಶ್ವರ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಸಲಹೆ ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾನತೆಯ ಸಮಾಜ ಸೃಷ್ಠಿಗೆ ಬಸವಣ್ಣನವರ ಕೊಡುಗೆ ಅಪಾರವಾಗಿದೆ. ಬಸವಣ್ಣನವರ ಸರಳ ಹಾಗೂ ಆದರ್ಶ ಜೀವನ ಇತರರಿಗೂ ಮಾದರಿಯಾಗಿದೆ. ಇಂದಿಗೂ ಪ್ರಸ್ತುತವಾಗಿರುವ ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣನವರ ಆದರ್ಶ ತತ್ವ ಸಿದ್ಧಾಂತಗಳನ್ನು ನಮ್ಮೆಲ್ಲರ ಜೀವದಲ್ಲಿ ಅಳವಡಿಸಿಕೊಳ್ಳಲು ಎಲ್ಲರು ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.ಎಡಿಸಿ ಗೀತಾ ಹುಡೇದ ಮಾತನಾಡಿ ಸಮಸಮಾಜ ನಿರ್ಮಾಣದ ಕನಸು ಕಂಡು ಅದನ್ನು ನನಸು ಮಾಡಿದ ಬಸವಣ್ಣನವರು ಇಡೀ ವಿಶ್ವಕ್ಕೆ ಸಮಾನತೆಯ ಬೆಳಕು ನೀಡಿದರು. ಅಂದಿನ ಸಮಾಜದಲ್ಲಿದ್ದ ಸಾಮಾಜಿಕ ಅಸಮಾನತೆ, ಮೌಢ್ಯತೆ, ಅಸ್ಪೃಶ್ಯತೆ, ಕಂದಾಚಾರಗಳನ್ನು ತೊಡೆದುಹಾಕಲು ಅವಿರತವಾಗಿ ಶ್ರಮಿಸಿದ ಬಸವಣ್ಣನವರು ದೌರ್ಜನ್ಯ, ಅಪಮಾನಗಳನ್ನು ಅನುಭವಿಸಿದ್ದ ಜನರಿಗೆ ದಾರಿದೀಪವಾದರು. ಸಮಾನತೆಯ ಮೂಲಕ ಜ್ಞಾನದ ದೀಪ ಹಚ್ಚಿದರು ಎಂದರು.ಬಸವಣ್ಣ ಯಾವುದೇ ಆಸೆ, ಅಮಿಷಗಳಿಗೆ ಒಳಗಾಗದೇ ಸರಳ ಜೀವನವನ್ನು ಅನುಸರಿಸಿದರು. ಪ್ರತಿಯೊಬ್ಬರಿಗೂ ಕಾಯಕದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಅನುಭವ ಮಂಟಪದಲ್ಲಿ ಪುರುಷರಿಗೆ ಸರಿಸಮಾನವಾಗಿ ವಚನಗಳನ್ನು ರಚಿಸಲು ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟರು. ಸರ್ವಕಾಲಕ್ಕೂ ಪ್ರಚಲಿತವಾಗುವಂತಹ ವಚನಗಳನ್ನು ರಚಿಸಿದ ಬಸವಣ್ಣನವರು ತ್ರಿವಿಧ ದಾಸೋಹಿ ತತ್ವ ಇಂದಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಬಸವಣ್ಣ ಸಾಮಾಜಿಕ ಪರಿವರ್ತನೆಯ ಹರಿಕಾರರು ಹೌದು. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದಿರ ನಿಂದಿಸಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ, ಬಸವಣ್ಣನವರ ಈ ವಚನಗಳ ಸಾರವನ್ನು ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಹೇಳಿಕೊಡಬೇಕು ಎಂದ ಅವರು

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಕೌಟುಂಬಿಕ ಜೀವನದೊಂದಿಗೆ ಬಸವಣ್ಣನವರ ಕಾಯಕ, ಆಧ್ಯಾತ್ಮ ಜೀವನವನ್ನು ಬದುಕಿನುದ್ದಕ್ಕೂ ರೂಪಿಸಿಕೊಂಡು ಶರಣರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು. ಮುಖಂಡರಾದ ಕಾಳನಹುಂಡಿ ಗುರುಸ್ವಾಮಿ ಬಸವಣ್ಣ ಹಾಗೂ ಅವರ ವಚನಗಳ ಪ್ರಾಮುಖ್ಯತೆ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಮುಖಂಡರಾದ ಮೂಡ್ಲುಪುರ ನಂದೀಶ್, ಮರಿಸ್ವಾಮಿ, ನಾಗೇಂದ್ರ, ಪ್ರವೀಣ್, ಬಿ.ಕೆ. ರವಿಕುಮಾರ್, ಆಲೂರು ಮಲ್ಲು, ಆಲೂರುನಾಗೇಂದ್ರ, ಸಿ.ಎಂ. ಕೃಷ್ಣಮೂರ್ತಿ, ರತ್ನಮ್ಮ ಬಸವರಾಜು ಇತರರು ಕಾರ್ಯಕ್ರಮದಲ್ಲಿದ್ದರು.

Share this article