100 ವಚನ ಕಟ್ಟು ಮೆರವಣಿಗೆಯೊಂದಿಗೆ ಬಸವ ಜಯಂತಿ ಆಚರಣೆ

KannadaprabhaNewsNetwork |  
Published : Apr 17, 2026, 02:30 AM IST
ಪೋಟೊ16ಕೆಎಸಟಿ1: ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಬಸವ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಟಿ ಬಸವರಾಜ ಮಾತನಾಡಿದರು. | Kannada Prabha

ಸಾರಾಂಶ

ತಹಸೀಲ್ದಾರ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಮೂಲಕ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅದ್ಧೂರಿ ಆಚರಣೆ ಮುಂದಾಗಬೇಕು

ಕುಷ್ಟಗಿ: ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತ, ಬಸವ ಸಮಿತಿ, ಜಾಗತಿಕ ಲಿಂಗಾಯತ ಸಮಾಜ,ಅಖಿಲ ಭಾರತ ವೀರಶೈವ ಸಮಾಜ,ವಿವಿಧ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾದ್ಯಕ್ಷ ಟಿ.ಬಸವರಾಜ ಮಾತನಾಡಿ, ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಕಾಯಕ ದಾಸೋಹದ ತತ್ವ ಸಾರಿದ ಬಸವೇಶ್ವರರ ಆದರ್ಶ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವೇಶ್ವರರ ತತ್ವ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಯುವಜನತೆಗೆ ಅವರ ಸಂದೇಶ ತಲುಪಿಸುವ ಉದ್ದೇಶದಿಂದ ಬಸವ ಜಯಂತಿಯ ದಿನದಂದು ಬಸವೇಶ್ವರ ಭಾವಚಿತ್ರ ಮೆರವಣಿಗೆಯ ಜತೆಗೆ 100 ಜನ ಮಹಿಳೆಯರ ತಲೆ ಮೇಲೆ ವಚನ ಕಟ್ಟು ಮೆರವಣಿಗೆ ನಡೆಸಿ ಬಸವ ಭವನದಲ್ಲಿ ಬೆಳಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ವಿಶೇಷ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಲಿಂಗಾಯತ ಸಮಾಜದ ಮುಖಂಡ ಶಶಿಧರ ಕವಲಿ ಮಾತನಾಡಿ, ಬಸವ ಜಯಂತಿಯ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಇರುವಿಕೆ ಕಡಿಮೆಯಾಗುತ್ತಿದ್ದು ತಹಸೀಲ್ದಾರ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಮೂಲಕ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅದ್ಧೂರಿ ಆಚರಣೆ ಮುಂದಾಗಬೇಕು ಎಂದರು.

ಪುರಸಭೆ ಮಾಜಿ ಸದಸ್ಯ ವಸಂತಪ್ಪ ಮೇಲಿನಮನಿ ಮಾತನಾಡಿ, ಬಸವ ಜಯಂತಿ ಸೇರಿದಂತೆ ಎಲ್ಲ ಜಯಂತಿ ಕಾರ್ಯಕ್ರಮದಲ್ಲೂ ಇಲಾಖೆಯಿಂದ ಕನಿಷ್ಟ ಐದು ಜನ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಬೇಕು. ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸುವ ನೆಪದಲ್ಲಿ ಪೋಟೊ ತೆಗೆದುಕೊಂಡು ಹೋಗುತ್ತಿರುವದು ಕಂಡು ಬರುತ್ತಿದ್ದು ಹೀಗಾಗದಂತೆ ನೋಡಿಕೊಳ್ಳಬೇಕಿದೆ ಎಂದ ಅವರು, ಜಯಂತಿ ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಆಗಮಿಸುವಂತೆ ಎಚ್ಚರಿಕೆ ನೀಡಬೇಕು ಕಾಟಾಚಾರಕ್ಕಾಗಿ ಕಾರ್ಯಕ್ರಮ ಮಾಡದೆ ಶರಣರ ತತ್ವ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಬಸವರಾಜ ಗಾಣಿಗೇರ ಮಾತನಾಡಿ, ಸರ್ಕಾರದಿಂದ ನಡೆಯುವ ಜಯಂತಿ ಕೇವಲ ಒಂದೆ ಸಮಾಜಕ್ಕೆ ಮೀಸಲಿಡದೆ ಎಲ್ಲ ಸಮಾಜದವರು ಇರುವಂತೆ ಒಂದು ವಾಟ್ಸಾಪ್ ಗ್ರುಪ್ ರಚನೆ ಮಾಡುವ ಮೂಲಕ ಜಯಂತಿಯ ಮಾಹಿತಿ ಎಲ್ಲರಿಗೂ ತಿಳಿಸುವ ಕೆಲಸ ಮಾಡಬೇಕು. ಎಲ್ಲ ಸಮುದಾಯ ಹಾಗೂ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಏ. 20ರಂದು ಬೆಳಗ್ಗೆ ಬಸವ ಜಯಂತಿ ತಾಲೂಕಿನಲ್ಲಿರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಚರಿಸಬೇಕು ಕಾರ್ಯಾಲಯದಲ್ಲಿ ಜಯಂತಿ ಆಚರಿಸಿದ ನಂತರ ಬಸವ ಜಯಂತಿ ಮೆರವಣಿಗೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭ ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಉಮಾಪತಿ ಅಕ್ಕಿ, ಗ್ರೇಡ್ 2 ತಹಸೀಲ್ದಾರ ರಜನಿಕಾಂತ, ವಿರೇಶ ಬಂಗಾರಶೆಟ್ಟರ, ಬಸನಗೌಡ ಪಾಟೀಲ, ಶಿವಾಜಿ ಹಡಪದ ಸೇರಿದಂತೆ ಅನೇಕರು ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಕನ್ನಡ ವಿವಿ ಪಾತ್ರ ಅನನ್ಯ: ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ
ನಾರಿ ಶಕ್ತಿ ಎಂದರೆ ದೇಶದ ಶಕ್ತಿ: ಹಂಪಿ ರಮಣ