ಕನ್ನಡಪ್ರಭ ವಾರ್ತೆ ಯಾದಗಿರಿ
ಬಸವಣ್ಣನವರ ಐಕ್ಯಸ್ಥಳದಿಂದ ಬೆಳಗ್ಗೆ 10ಕ್ಕೆ ಶುರುವಾದ ಜೋಡೆತ್ತುಗಳ ಮೆರವಣಿಗೆಗೆ ಸ್ಥಳೀಯ ಬಸವ ಪೀಠಾಧಿಪತಿ ವೃಷಭೇಂದ್ರ ಅಪ್ಪ ಬಸವೇಶ್ವರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಚಾಲನೆ ನೀಡಿದರು.
ಅಲಂಕೃತ ಎತ್ತಿನ ಬಂಡಿಯಲ್ಲಿ ಬಸವೇಶ್ವರ ಭಾವಚಿತ್ರವಿಟ್ಟು ತಮಟೆ, ಹಲಗೆ, ಬಾಜಾ-ಭಜಂತ್ರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ರೈತರೊಂದಿಗೆ ಎತ್ತುಗಳು ಹೆಜ್ಜೆ ಹಾಕಿದವು.ವಿಶೇಷವಾಗಿ ಬಸವೇಶ್ವರರ ಭಾವಚಿತ್ರ ಹೊತ್ತಿದ್ದ ಎತ್ತಿಗಾಡಿಯನ್ನು ಅರಸು ಮನೆತನದ ರಾಜಾ ಜಿತೇಂದ್ರನಾಯಕ ಜಹಾಗೀರದಾರ ಅವರೆ ನಡೆಸುತ್ತಾ ಬಂದಿದ್ದು ಗಮನ ಸೆಳೆಯಿತು.
ಬೆಳ್ಳಂಬೆಳಗ್ಗೆ ಎತ್ತುಗಳ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿ ನಂತರ ಕೊಂಬುಗಳಿಗೆ ಬಗೆಬಗೆಯ ಬಣ್ಣ ಬಳಿದು ಗೋಂಡೆ, ಕೊಂಬಣಸು, ಹಣೆಗೆಜ್ಜೆ, ಮೂಗುದಾರ, ಕೊರಳಗೆಜ್ಜೆ, ಘಂಟೆ, ಬಾಸಿಂಗ್ ಮತ್ತಿತರ ವಸ್ತುಗಳನ್ನು ಅಲಂಕರಿಸಿದ ರೈತರು ಎತ್ತುಗಳ ಕೊರಳಿಗೆ ನೊಗ ಕಟ್ಟಿ ಒಬ್ಬರ ಹಿಂದೆ ಒಬ್ಬರಂತೆ ಎತ್ತುಗಳೊಂದಿಗೆ ಸಾಗಿದರು.ಮೆರವಣಿಗೆ ವೀಕ್ಷಿಸಲು ಮಹಿಳೆಯರು, ಮಕ್ಕಳೆನ್ನದೆ ಸಮಸ್ತ ಜನಸ್ತೋಮ ಬೀದಿ ಹಾಗೂ ತಮ್ಮ ಮನೆ ಮೇಲೆ ನಿಂತಿರುವುದು ಗಮನ ಸೆಳೆಯಿತು. ಬಿರು ಬಸಿಲು ಲೆಕ್ಕಿಸದೆ ಜೋಡೆತ್ತುಗಳ ಮೆರವಣಿಗೆಯು ಸುಮಾರು ಐದು ತಾಸುಗಳ ನಡೆದು ಬಸವೇಶ್ವರ ಮಂದಿರ (ಬಸವಣ್ಣನವರು ಕಾಲಜ್ಞಾನ ಬರೆದ ಸ್ಥಳ)ಕ್ಕೆ ತೆರಳಿ ಸಮಾಪ್ತಿಗೊಂಡಿತು.