ನರಗುಂದ: ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಗಳು ಪಾವಿತ್ರ್ಯತೆಯಿಂದ ಕೂಡಿರಲಿ. ಭಯ, ಭಕ್ತಿಯಿಂದ ಬಸವ ಪುರಾಣ ಆಲಿಸೋಣ. ಅಲ್ಲಲ್ಲಿ ಕಾಲಹರಣ ಮಾಡದೇ ಯುವಕರ ಪಾಲ್ಗೊಳ್ಳುವಿಕೆ ಪ್ರವಚನದಲ್ಲಿ ಕಂಡುಬರಲಿ. ಜೂಜಾಟ, ಮದ್ಯಪಾನ ಸೇವನೆಗೆ ಜಾತ್ರೆಯಲ್ಲಿ ಅವಕಾಶ ಸಲ್ಲದು, ಗದ್ದುಗೆ ಸ್ಥಾಪನೆ ನಂತರ ಪೂಜೆ ಪದ್ಧತಿಗಳು ನಿತ್ಯವೂ ಶಾಸ್ತ್ರೋಕ್ತವಾಗಿ ನಡೆಯಬೇಕೆಂದು ತಾಲೂಕಿನ ಶಿರೋಳ ಶ್ರೀ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಹಾಗೂ ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷರಾದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಶನಿವಾರ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾಮಠದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂ. ಗುರುಬಸವ ಚರಮೂರ್ತಿಗಳು, ಲಿಂ. ಸದಾಶಿವ ಚರಮೂರ್ತಿಗಳು ಹಾಗೂ ಲಿಂ.ಶ್ರೀ ಗುರುಬಸವ ಸ್ವಾಮಿಗಳವರ ನೂತನ ಗದ್ದುಗೆ ಶಿಲಾ ಮಂಟಪದ ಲೋಕಾರ್ಪಣೆ, ಗೋಪುರದ ಕಳಸಾರೋಹಣದ ಕಾರ್ಯಕ್ರಮ ನಿಮಿತ್ತ ಬಸವ ಪುರಾಣ, ಲಿಂಗದೀಕ್ಷೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಏಪ್ರಿಲ್ -3ರಿಂದ ಮೇ-1ರವರೆಗೆ ಪ್ರತಿನಿತ್ಯ ಸಂಜೆ 7 ರಿಂದ 90ಗಂಟೆ ವರೆಗೆ, ಬಸವ ಪುರಾಣ ನೆರವೇರುವದು ಎಂದು ಹೇಳಿದರು. ತಿಂಗಳಕಾಲ ಜರುಗುವ ಬಸವ ಪುರಾಣವನ್ನು ಗದಗ ಜಿಲ್ಲೆಯ ಡೋಣಿ ಗ್ರಾಮದ ಪ್ರವಚನಕಾರ ಶಶಿಧರ ಶಾಸ್ತ್ರೀಗಳು ಹಿರೇಮಠ ನಡೆಸಿಕೊಡಲಿದ್ದಾರೆ. ಏ.30ರಂದು ಲಿಂಗದೀಕ್ಷೆ ಮತ್ತು ಅಯ್ಯಾಚಾರ ಮೇ-1 ಗುರುವಾರ ನೂತನ ಶಿಲಾಮಂಟಪ ಲೋಕಾರ್ಪಣೆ ಹಾಗೂ ಗೋಪುರ ಕಳಸಾರೋಹಣ, ವಚನ ಕಟ್ಟುಗಳ ಮತ್ತು ತಾಡೋಲೆಗಳ ಪಲ್ಲಕ್ಕಿ ಉತ್ಸವ, ಬಸವ ಪುರಾಣ ಮಂಗಲೋತ್ಸವ ಜರುಗಲಿದೆ. ಮೇ-2ರಂದು ಸಾಮೂಹಿಕ ವಿವಾಹ ಜರುಗಲಿವೆ ಎಂದರು. ಶಾಂತಲಿಂಗ ಶ್ರೀಗಳು ಮಾತನಾಡಿ, ಪಕ್ಷ, ಸಿದ್ಧಾಂತಗಳು ಬೇರೆ ಇದ್ದರೂ ಧಾರ್ಮಿಕ ಕಾರ್ಯಗಳು ನಡೆಯುವಾಗ ಹಾಲಿ ಮತ್ತು ಮಾಜಿ ಶಾಸಕರು ಜೋಡೆತ್ತಿನಂತೆ ಕೆಲಸ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಶಾಸಕ ಪಾಟೀಲರು ಪಿಡಬ್ಲ್ಯೂಡಿ ಸಚಿವರಿದ್ದಾಗ ತಾಲೂಕಿನ 4 ಮಠಗಳ ಅಭಿವೃದ್ಧಿಗೆ ತಲಾ 1 ಕೋಟಿ ಅನುದಾನ ನೀಡಿದ್ದಾರೆ. ಈಗ ಪಾಟೀಲರೇ ಸಮಿತಿ ಅಧ್ಯಕ್ಷರಾಗಿದ್ದಾರೆಂದು ಹೇಳಿದರು. ಸಾಮೂಹಿಕ ಮದುವೆ ನೋಂದಣಿಗೆ ಏಪ್ರಿಲ್ -21 ಕೊನೆಯ ದಿನವಾಗಿದೆ. ಮದುವೆ ಆಗಲು ಇಚ್ಛಿಸುವವರು ದೂ.8660615109 ಈ ನಂಬರಗೆ ಸಂರ್ಪಕಿಸಲು ಕೋರಿದ್ದಾರೆ. ಈ ಸಂದರ್ಭದಲ್ಲಿ ವಿವೇಕ ಯಾವಗಲ್ಲ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ನಿಂಗಪ್ಪ ಗಾಡಿ, ವೀರಯ್ಯ ದೊಡಮನಿ, ಹನುಮಂತ ಕಾಡಪ್ಪನವರ, ವೆಂಕಪ್ಪ ಶಾಂತಗೇರಿ, ಕುಮಾರ ಮರಿಗುದ್ದಿ, ದೇವೇಂದ್ರಪ್ಪ ಶಾಂತಗೇರಿ, ಬಸವರಾಜ ಕುರಿ, ಗುರುಬಸವ ಶೆಲ್ಲಿಕೇರಿ, ಗುರುಬಸಯ್ಯ ನಾಗಲೋಟಿಮಠ, ಬಸವರಾಜ ಸಾಲಿಮಠ, ಲಾಲಸಾಬ ಅರಗಂಜಿ, ಸಂಜು ಕಲಾಲ, ಆರ್.ಐ.ನದಾಫ್, ಶಿವು ಯಲಬಳ್ಳಿ, ವಿರಯ್ಯ ಮಠದ, ಪ್ರಕಾಶ ಚಂದಣ್ಣವರ ಸೇರಿದಂತೆ ಮುಂತಾದವರು ಇದ್ದರು.