ಗಜೇಂದ್ರಗಡ: ಅನ್ನದಾನೇಶ್ವರ ಮಠವು ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಧರ್ಮ ಕ್ಷೇತ್ರವಾಗಿದ್ದು, ಸೌಹಾರ್ದತೆಯನ್ನು ಎತ್ತಿ ಸಾರುವ ಬಸವ ಪುರಾಣ ಪಟ್ಟಣದಲ್ಲಿ ನಡೆಯಲಿದೆ ಎಂದು ಹಾಲಕೆರೆ ಮಠದ ಮುಪ್ಪಿನಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನ. ೨೫ ರಿಂದ ಡಿ. ೨೬ರ ವರೆಗೆ ನಡೆಯುವ ಬಸವ ಪುರಾಣಕ್ಕೆ ಇಲ್ಲಿನ ಜಾಮೀಯಾ ಮಸೀದಿಗೆ ಶುಕ್ರವಾರ ಭೇಟಿ ನೀಡಿ ಅಂಜುಮನ್ ಇಸ್ಲಾಂ ಸಮಾಜದ ಬಾಂಧವರನ್ನು ಆಮಂತ್ರಿಸಿ ಮಾತನಾಡಿದರು.ದೇವನೊಬ್ಬ ನಾಮ ಹಲವು ಎನ್ನುವುದನ್ನು ನಿಮಗೆಲ್ಲ ಗುರುಗಳು ತಿಳಿಸಿದಂತೆ, ದೇವರೊಬ್ಬನೇ ಎನ್ನುವ ಸತ್ಯ ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನೇ ಬಸವಣ್ಣನವರು ದೇವನೊಬ್ಬ ನಾಮ ಹಲವು ಎಂಬುದನ್ನು ತಿಳಿಸಿದ್ದಾರೆ. ಬಸವ ಪುರಾಣದ ಮುಖ್ಯ ಉದ್ಧೇಶವೇ ಸಮಾಜದಲ್ಲಿ ಸಮಾನತೆ, ಸಹಿಷ್ಣುತೆ ಹಾಗೂ ಸೌಹಾರ್ದತೆಯ ಕೊಂಡಿ ಬಲಪಡಿಸುವದಾಗಿದೆ ಎಂದ ಅವರು, ಹಾಲಕೆರೆ ಮಠವು ಶಿಕ್ಷಣ ಹಾಗೂ ಬಸವ ತತ್ವ ಪ್ರಚಾರ ಮಾಡುವುದರ ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ದಿಟ್ಟ ಹೆಜ್ಜೆಗಳನ್ನಿಡುತ್ತಾ ಬರುತ್ತಿದೆ. ತಾಲೂಕಿನ ಗೋಗೇರಿ ಗ್ರಾಮದ ಹಾಲಕೆರೆ ಶಾಖಾ ಮಠಕ್ಕೆ ಮುಸ್ಲಿಂ ಸಮಾಜದ ಹಿರಿಯರನ್ನು ಅಧ್ಯಕ್ಷರನ್ನಾಗಿ ಮಠದಿಂದ ನೇಮಿಸಲಾಗುತ್ತಿದೆ. ಮೊಹರಂ ವೇಳೆ ಹಾಲಕೆರೆಯಲ್ಲಿ ೧೫೦ ವರ್ಷಗಳ ಹಿಂದಿನಿಂದಲೂ ಅಲೇ ದೈವರಿಗೆ ಲಿಂಗ ಕಟ್ಟುವ ಪರಂಪರೆ ಹಾಗೂ ರಿವಾಯತಿ ಹಾಡುಗಳನ್ನು ಮುಸ್ಲಿಂರು ಹಾಡುತ್ತಾ ಬರುವ ಸಂಸ್ಕೃತಿ ಇಂದಿಗೂ ಮುಂದುವರೆದಿದೆ ಎಂದರು.
ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದಲ್ಲಿ ಸಮನ್ವಯ ರಥದಲ್ಲಿ ಸರ್ವಧರ್ಮಗಳ ಗ್ರಂಥವನ್ನಿಟ್ಟು ರಥವನ್ನು ಎಳೆಯುವ ಭವ್ಯ ಪರಂಪರೆ ಹಾಗೂ ಸೌಹಾರ್ದತೆ ನಾಡಿನಲ್ಲಿ ಪಸರಿಸುವ ಕಾರ್ಯ ಅನ್ನದಾನೇಶ್ವರ ಮಠವು ಮಾಡುತ್ತಿದೆ. ಇತ್ತ ಹೊಸಪೇಟೆಯಲ್ಲಿ ನಿರ್ಮಿಸಿದ ದೇವಸ್ಥಾನ ಉದ್ಘಾಟನೆ ವೇಳೆ ಹೊಸಪೇಟೆ ನಗರಕ್ಕೆ ಮುಸ್ಲಿಂ ಬಾಂಧವರು ಸುರಕುರಮ ಸಿಹಿ ಊಟ ಉಣಿಸಿ ಸದ್ಭಾವನೆ ಮೆರೆದು ಪೂಜ್ಯರ ಭಾವನೆಗೆ ಸ್ಪೂರ್ತಿಯಾದರು. ಅವರ ಆಶಯದಂತೆ ಪಟ್ಟಣದಲ್ಲಿ ಬಸವ ಪುರಾಣ ನಡೆಯಲಿದ್ದು ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಆಮಂತ್ರಿಸಿದರು.ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನಜ್ಯೋತಿ ಹಾಗೂ ಶಿಕ್ಷಣ ಕಾಂತ್ರಿ ಮಠದಲ್ಲಿ ಇಂದಿಗೂ ಸಹ ಸೌಹಾರ್ದತೆ ಹಾಗೂ ಬಸವತತ್ವಕ್ಕೆ ಮೊದಲಾಧ್ಯತೆ ನೀಡಲಾಗುತ್ತಿದೆ ಎಂದರು.
ಟಕ್ಕೇದ ದರ್ಗಾದ ಸೈಯದ್ ನುಜಾಮುದ್ದೀನ ಶಾ ಮಕಾನದಾರ, ಹಾಲಕರೆಯ ಅಭಿನವ ಅನ್ನದಾನ ಸ್ವಾಮೀಜಿಗಳು ಪಟ್ಟಣದ ಟಕ್ಕೇದ ದರ್ಗಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮ ಸಮಾಜದ ಆಶಯ ಹಾಗೂ ಶಿಕ್ಷಣ ಮಹತ್ವ ಸಾರಿದ್ದರು. ಮಠದ ಕೆಲ ಕಾರ್ಯಕ್ರಮಗಳಿಗೂ ಸಹ ಟಕ್ಕೇದ ದರ್ಗಾದ ಪೂಜ್ಯರು ಸಹ ತೆರಳಿದ್ದರೆಂದು ನೆನಪಿಸಿಕೊಂಡರು.ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಕಳೆದ ಪೂರ್ವಭಾವಿ ಸಭೆಯಲ್ಲಿ ಬಾಗವಹಿಸಿದ್ದೇನೆ. ಮಠವು ಹಾಗೂ ಪೂಜ್ಯರನ್ನು ಎಲ್ಲರನ್ನು ಒಂದು ಎಂದು ಅಪ್ಪಿಕೊಳ್ಳುವ ಪ್ರೀತಿ ಹಾಗೂ ತೋರುವ ವಿಶ್ವಾಸ ಅನನ್ಯವಾದದ್ದು. ಸೌರ್ಹಾದತೆಗೆ ಹೆಸರಾಗಿರುವ ಪಟ್ಟಣದಲ್ಲಿ ನಡೆವ ಬಸವ ಪುರಾಣದಲ್ಲಿ ನಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ವೇಳೆ ಮಸೀದಿಗೆ ಭೇಟಿ ನೀಡಿದ ಮುಪ್ಪಿನ ಬಸವಲಿಂಗ ಸ್ವಾಮೀಜಿಗೆ ಅಜುಂಮನ್ ಇಸ್ಲಾಂ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.ಅಂಜುಮನ್ ಇಸ್ಲಾಂ ಸಮಾಜದ ಅಧ್ಯಕ್ಷ ಹಸನ ತಟಗಾರ, ಮೌಲಾನಾ ಶಾಹೀದ ರಜಾ, ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ, ಶರಣಪ್ಪ ರೇವಡಿ, ಸುಭಾನಸಾಬ್ ಆರಗಿದ್ದಿ, ಮಾಸುಮನಲಿ ಮದಗಾರ, ದಾವಲ್ ತಾಳಿಕೊಟಿ ಸೇರಿ ಇತರರು ಇದ್ದರು.