ಅಭಿನಂದನಾ ಸಮಾರಂಭ । ಬಸವ ಜಯಂತಿ ಯಶಸ್ಸಿಗೆ ಶ್ರಮಿಸಿದವರಿಗೆ ಸನ್ಮಾನ । ದಾಸೋಹಿಗಳಿಗೆ ಗೌರವ
ಬಸವ ತತ್ವಗಳನ್ನು ಆಚರಣೆ ಮಾಡಿದ್ದೇ ಆದಲ್ಲಿ ಜಗತ್ತಿನಲ್ಲಿ ಯುದ್ಧಗಳು ಆಗಲು ಸಾಧ್ಯವೇ ಇಲ್ಲ. ಬಸವ ತತ್ವ ಆಚರಣಗಳಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಮಾಧಾನಿಯಾಗಿರುತ್ತಾರೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಶಿವಯೋಗಿ ಮಂದಿರದ ಆವರಣದಲ್ಲಿ ಬುಧವಾರ ಸಂಜೆ ಬಸವ ಜಯಂತಿಯ ಯಶಸ್ಸಿಗಾಗಿ ಶ್ರಮಿಸಿದವರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಯುದ್ಧ ಮತ್ತು ಅಶಾಂತಿಗೆ ಬಸವ ತತ್ವಗಳಲ್ಲಿ ಪರಿಹಾರ ಅಡಗಿದೆ ಎಂದರು.ಜೀವನ ಉದ್ಧಾರ ಮಾಡುವಂಥಹ ಕಾಯಕವನ್ನು ಬಸವಣ್ಣ ಇಡೀ ಜಗತ್ತಿಗೆ ಹೇಳಿಕೊಟ್ಟು ಹೋಗಿದ್ದಾರೆ. ಕಾಯಕ, ದಾಸೋಹ ಹಾಗೂ ಸಮಾನತೆ ತತ್ವ ಆಚರಿಸಲು ಬಸವಣ್ಣ ತಿಳಿಸಿಕೊಟ್ಟಿದ್ದಾರೆ.ಇದರ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಲಿದೆ ಎಂದು ನುಡಿದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಜಗತ್ತು ಇಂದು ಯುದ್ಧೋನ್ಮಾದಿಂದ ನಲುಗುತ್ತಿದೆ. ಪ್ರಸ್ತುತ ಯುದ್ಧ ಪೀಡಿತ ದೇಶಗಳಲ್ಲಿ ಬಸವ ಪ್ರಭಾತ್ ಪೇರಿ ಮಾಡಿದರೆ ಶಾಂತಿ ನೆಲೆಸಬಹುದು ಎಂದರು.
ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್ ಮಾತನಾಡಿ, ಕಳೆದ 20 ವರ್ಷಗಳಿದೂ ಅಧಿಕ ಕಾಲದಿಂದ ವಿನೋಬ ನಗರದ ಮೂಲಕ ಕೂಡ ಬಸ ಪ್ರಭಾತ್ ಪೇರಿ ಹಾದು ಹೋಗುತ್ತದೆ. ಈ ಮೂಲಕ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಶ್ರೀಮಠ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ದೂಡಾ ಸದಸ್ಯೆ ವಾಣಿ ಬಕ್ಕೇಶ್, ಬಕ್ಕೇಶ್, ವೀಣಾ ಮಂಜುನಾಥ್, ಕುಸುಮಾ ಲೋಕೇಶ್, ಎಸ್.ಓಂಕಾರಪ್ಪ, ಎಂ.ಶಿವಕುಮಾರ್, ಸೋಗಿ ಶಾಂತಕುಮಾರ್, ಅಂದನೂರು ಮುಪ್ಪಣ್ಣ, ಪ್ರಭು ಕಲ್ಬುರ್ಗಿ ಇತರರು ಹಾಜರಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ, ದಾಸೋಹಿಗಳಿಗೆ ಶ್ರೀಮಠದಿಂದ ಅಭಿನಂದಿಸಲಾಯಿತು.