ಕುಂದಗೋಳ: ಕೆರೆ ಪಕ್ಕದಲ್ಲಿ ಬೆಳೆದ ಹುಲ್ಲು ಕಡ್ಡಿಯಲ್ಲಿ ಆಟವಾಡುತ್ತಿದ್ದ ಅವಳಿ- ಜವಳಿ ಮಕ್ಕಳಿಬ್ಬರು ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಗುಡೇನಕಟ್ಟಿ ಗ್ರಾಪಂನ ಯರಿನಾರಾಯಣಪುರದಲ್ಲಿ ನಡೆದಿದೆ. ಕೆರೆಯ ಸುತ್ತಲೂ ಸ್ವಚ್ಛಗೊಳಿಸದಿರುವುದಕ್ಕೆ, ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಇಬ್ಬರು ಮಕ್ಕಳು ಕೆರೆಯ ದಂಡೆಯಲ್ಲಿ ಆಟವಾಡುತ್ತಿದ್ದರು. ಕೆರೆಯ ಸುತ್ತಲೂ ಸಿಕ್ಕಾಪಟ್ಟೆ ಹುಲ್ಲು ಕಸ ಕಡ್ಡಿ ಬೆಳೆದಿತ್ತು. ಅದರಲ್ಲೇ ಆಟವಾಡುತ್ತಿದ್ದರು. ಹುಲ್ಲು ಕಡ್ಡಿ ಬೆಳೆದಿದ್ದರಿಂದ ಕೆರೆ ಎಲ್ಲಿಂದ ಚಾಲೂ ಆಗುತ್ತದೆ ಎಂಬುದು ತಿಳಿಯದೇ ಮಕ್ಕಳಿಬ್ಬರು ನೀರಲ್ಲಿ ಬಿದ್ದಿದ್ದಾರೆ. ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಳಿಕ ಮಕ್ಕಳು ಕಾಣದೇ ಇರುವುದನ್ನು ನೋಡಿದ ಪಾಲಕರು ಕೆರೆಯಲ್ಲಿ ಇಳಿದು ನೋಡಿದಾಗ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದು ಪತ್ತೆಯಾಗಿದೆ. ಮಕ್ಕಳಿಬ್ಬರ ಸಾವನ್ನು ಕಂಡು ತಾಯಿ ರೇಷ್ಮಾಬಾನು, ಅಜ್ಜ, ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಆಕ್ರೋಶ: ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಿಲ್ಲ. ತಡೆಗೋಡೆ ನಿರ್ಮಿಸುವುದು ಒತ್ತಟ್ಟಿಗಿರಲಿ ತಂತಿ ಬೇಲಿ ಕೂಡ ಅಳವಡಿಸಿಲ್ಲ. ಕೆರೆ ಕಾಣದಷ್ಟು ಕಸಕಡ್ಡಿ ಬೆಳೆದರೂ ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ಗ್ರಾಪಂ ಹೋಗಿಲ್ಲ. ಗ್ರಾಪಂ ನಿರ್ಲಕ್ಷ್ಯದಿಂದಾಗಿ ಬಾಲಕರಿಬ್ಬರನ್ನು ಬಲಿತೆಗೆದುಕೊಂಡಂತಾಗಿದೆ ಎಂಬ ಆಕ್ರೋಶ ಸಾರ್ವಜನಿಕರದ್ದು. ಕೆರೆಯ ಮೇಲೆ ಯಾವುದೇ ಸೂಚನಾ ಫಲಕ, ಎಚ್ಚರಿಕೆ ಸಂದೇಶ ಸಾರುವ ಬೋರ್ಡ್ ಕೂಡ ಇಲ್ಲ. ನೀರು ತುಂಬಿಕೊಳ್ಳಲು ಸರಿಯಾದ ಮೆಟ್ಟಿಲು ಕೂಡ ಇಲ್ಲ. ಕೆರೆಯ ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ ಎಂದು ಗ್ರಾಮಸ್ಥ ವೆಂಕನಗೌಡ ಕೆಂಚನಗೌಡ್ರ ಹಾಗೂ ಕೆಲ ಹಿರಿಯರು ಆರೋಪಿಸಿದ್ದಾರೆ.ಮಳೆಗಾಲದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಂದಿತ್ತು. ಆದರೆ, ಟೆಂಡರ್ ಒಪ್ಪಂದಕ್ಕೂ ಮುನ್ನವೇ ಮರಳಿ ರಾಜ್ಯ ಸರ್ಕಾರಕ್ಕೆ ಹೋಗಿದೆ. ಕೆರೆಯ ದಡದಲ್ಲಿ ತಂತಿಬೇಲಿಯಾದರೂ ಅಳವಡಿಸಬೇಕು ಎಂಬ ಬೇಡಿಕೆಗೂ ಸ್ಪಂದನೆ ಸಿಗುತ್ತಿಲ್ಲ. ಪಂಚಾಯತಿ ನಿರ್ಲಕ್ಷ್ಯದಿಂದ ಮಕ್ಕಳಿಬ್ಬರು ಬಲಿಯಾದಂತಾಗಿದೆ ಎಂದು ರೈತ ಮುಖಂಡ ಶಂಕರಗೌಡ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾಡಳಿತದ ಆದೇಶದಂತೆ ಎಲ್ಲ ಗ್ರಾಮ ಪಂಚಾಯತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಗುಡೇನಕಟ್ಟಿ ಗ್ರಾಪಂ ಸಿಬ್ಬಂದಿ ಪಾಲಿಸಿಲ್ಲ. ಮುಂದಿನ ಕ್ರಮಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೋಳ್ಳುತ್ತೇನೆ ಎಂದು ತಾಪಂ ಇಒ ಜಗದೀಶ ಕಮ್ಮಾರ ಹೇಳಿದರು.
ಮೇ ತಿಂಗಳ ಆರಂಭದಲ್ಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕೆರೆಗಳಲ್ಲಿ ಮಾಹಿತಿ ಬೋರ್ಡ್, ಸೂಚನಾ ಫಲಕ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕೆರೆ ಸ್ವಚ್ಛತೆ ಕಂಡಿಲ್ಲ. ಸೂಚನಾ ಫಲಕ ಸಹ ಇಲ್ಲ. ಅವರನ್ನು ಕರೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದೇನೆ ಎಂದು ತಹಸೀಲ್ದಾರ್ ರಾಜು ಮಾವರಕರ ಹೇಳಿದರು.