ಪೊಲೀಸ್‌ ಪೇದೆಗಳ ಟೋಪಿ ಬದಲಾವಣೆ ಇಲ್ಲ

KannadaprabhaNewsNetwork |  
Published : Jun 20, 2025, 12:34 AM ISTUpdated : Jun 21, 2025, 09:16 AM IST
ಪೊಲೀಸ್‌ ಪೇದೆ ಟೋಪಿ | Kannada Prabha

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆಯ ಹೆಡ್‌ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳು ಧರಿಸುವ ಸ್ಲೋಚ್‌ ಹ್ಯಾಟ್‌ (ಟೋಪಿ) ಬದಲಾವಣೆ ಮಾಡದಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.  

ಗಿರೀಶ್‌ ಮಾದೇನಹಳ್ಳಿ

 ಬೆಂಗಳೂರು :  ರಾಜ್ಯ ಪೊಲೀಸ್ ಇಲಾಖೆಯ ಹೆಡ್‌ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳು ಧರಿಸುವ ಸ್ಲೋಚ್‌ ಹ್ಯಾಟ್‌ (ಟೋಪಿ) ಬದಲಾವಣೆ ಮಾಡದಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ. ತನ್ಮೂಲಕ ಇಲಾಖೆಯಲ್ಲಿ ಮತ್ತೆ ಮುನ್ನಲೆಗೆ ಬಂದಿದ್ದ ‘ಟೋಪಿ ಬದಲಾವಣೆ’ ವಿಚಾರಕ್ಕೆ ಪೂರ್ಣ ವಿರಾಮ ಬಿದ್ದಿದೆ.

ಎಲ್ಲ ಪೊಲೀಸರಿಗೂ ಏಕರೂಪ ಟೋಪಿ ಬಳಕೆ ಜಾರಿಗೊಂಡರೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಗುರುತಿಸುವಿಕೆ ಕಷ್ಟವಾಗಲಿದೆ. ಇದು ಕೆಲ ಪೊಲೀಸರ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಬಹುದು ಎಂದಿರುವ ಸಮಿತಿ, ಸ್ಲೋಚ್‌ ಹ್ಯಾಟ್‌ಗೆ ಪರ್ಯಾಯವಾಗಿ ತೆಳುವಾದ ಟೋಪಿ ಬಳಕೆಗೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.

ಟೋಪಿ ಬದಲಾವಣೆ ಸಾಧಕ-ಬಾಧಕಗಳ ಕುರಿತು ವಿಸ್ತೃತವಾಗಿ ಸಮಾಲೋಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕೆಎಸ್ಆರ್‌ಪಿ) ಉಮೇಶ್ ಕುಮಾರ್ ನೇತೃತ್ವದ ಉನ್ನತ ಸಮಿತಿ ವರದಿ ಸಲ್ಲಿಸಿದೆ. ಈ ವರದಿಯನ್ನು ಸರ್ಕಾರಕ್ಕೆ ಡಿಜಿಪಿ ಕಳುಹಿಸಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಕಳೆದ ವಿಧಾನಸಭಾ ಅಧಿವೇಶನದಲ್ಲಿ ಪೊಲೀಸ್ ಟೋಪಿ ಬದಲಾವಣೆ ಕುರಿತು ಮೈಸೂರಿನ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸಿ.ಎನ್‌.ಮಂಜೇಗೌಡ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಆಗಿನ ಡಿಜಿ-ಐಜಿಪಿ ಅಲೋಕ್ ಮೋಹನ್‌ ರವರಿಗೆ ಸೂಚಿಸಿದ್ದರು. ಅಂತೆಯೇ ಟೋಪಿ ಬದಲಾವಣೆ ಕುರಿತು ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು.

ಈ ಮೊದಲು ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್‌ಗಳು ಹಾಗೂ ಕಾನ್‌ಸ್ಟೇಬಲ್‌ಗಳು ಟರ್ಬನ್ ಮಾದರಿಯ ಟೋಪಿ ಬಳಸುತ್ತಿದ್ದರು. ನಂತರ ಗುಂಡೂರಾವ್‌ ಸರ್ಕಾರದ ಅವಧಿಯಲ್ಲಿ ಪೊಲೀಸರಿಗೆ ಸ್ಲೋಚ್‌ ಟೋಪಿಗಳು ಬಂದವು. ಕಾಲ ಬದಲಾದಂತೆ ಟೋಪಿ ಬದಲಾವಣೆಗೆ ಇಲಾಖೆಯಲ್ಲಿ ಆಗಾಗ್ಗೆ ಕೂಗು ಕೇಳಿ ಬಂದಿದೆ.

ಟೋಪಿ ಬದಲಾವಣೆ ಸಾಧ್ಯವಿಲ್ಲ-ಸಮಿತಿ:

ಟೋಪಿ ಬದಲಾವಣೆ ಕುರಿತು ಸಿವಿಲ್‌, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್ ಹಾಗೂ ಐಎಸ್‌ಡಿ ಸೇರಿ ಪೊಲೀಸ್ ಇಲಾಖೆಯ ಎಲ್ಲ ವಿಭಾಗಗಳ ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್‌ಗಳಿಂದ ಸಮಿತಿ ಅಭಿಪ್ರಾಯ ಸಂಗ್ರಹಿಸಿತ್ತು. ಅಲ್ಲದೆ ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿ ಹೊರ ರಾಜ್ಯಗಳ ಪೊಲೀಸರ ಟೋಪಿ ಬಳಕೆ ಬಗ್ಗೆ ಕೂಡ ಸಮಿತಿ ಮಾಹಿತಿ ಕಲೆ ಹಾಕಿತು. ಈ ಎಲ್ಲ ಅಭಿಪ್ರಾಯ ಬಳಿಕ ಮೂರು ಬಾರಿ ಸಭೆ ಸೇರಿ ಸಮಾಲೋಚಿಸಿತು. ಅಂತಿಮವಾಗಿ ಸ್ಲೋಚ್‌ ಟೋಪಿ ಬದಲಾವಣೆ ಅಸಮ್ಮತಿ ಸೂಚಿಸುವ ನಿರ್ಣಯ ಅಂಗೀಕರಿಸಿತು ಎಂದು ತಿಳಿದು ಬಂದಿದೆ.

ಎಲ್ಲ ಪೊಲೀಸರು ಏಕ ರೂಪವಾಗಿ ಸ್ಮಾರ್ಟ್ ಪೀಕ್ ಟೋಪಿ ಧರಿಸಿದರೆ ಜನರಿಗೆ ಅಧಿಕಾರಿ ಮತ್ತು ಸಿಬ್ಬಂದಿ ವ್ಯಾತ್ಯಾಸ ಕಾಣದಂತಾಗುತ್ತದೆ. ಹೊರ ನೋಟಕ್ಕೆ ಸಮಾನರಂತೆ ಗೋಚರಿಸುತ್ತಾರೆ. ಅಲ್ಲದೆ ಪ್ರತಿಭಟನೆ, ಗಲಾಟೆ ಹಾಗೂ ದೊಂಬಿ ಯಂತಹ ಪ್ರಕ್ಷುಬ್ಧ ಪರಿಸ್ಥಿತಿ ನಿಯಂತ್ರಿಸುವ ವೇಳೆ ಕಮಾಂಡಿಂಗ್ ನೀಡುವಾಗ ಸಮಸ್ಯೆಯಾಗಲಿದೆ. ಹೀಗಾಗಿ ಸ್ಲೋಚ್ ಟೋಪಿ ಮುಂದುವರೆಸುವುದು ಸೂಕ್ತ. ಅಲ್ಲದೆ ಆರೋಗ್ಯದ ಮೇಲೆ ಪರಿಣಾಮ ಬೀರದಂತಹ ಟೋಪಿಯನ್ನು ಪರ್ಯಾಯವಾಗಿ ಬಳಸಬಹುದು ಎಂದು ಎಡಿಜಿಪಿ ನೇತೃತ್ವದ ಸಮಿತಿ ಶಿಫಾರಸು ಮಾಡಿರುವುದಾಗಿ ತಿಳಿದು ಬಂದಿದೆ.

PREV
Read more Articles on

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''