ಯುದ್ಧ ಬೇಕಾ ಇಲ್ಲ, ಬುದ್ಧ ಬೇಕಾ ಎನ್ನುವ ಕಾಲ ಇದು: ಡಾ. ವೀರೇಶ ಬಡಿಗೇರ

KannadaprabhaNewsNetwork |  
Published : Jun 20, 2025, 12:34 AM IST
19ಎಚ್‌ಪಿಟಿ1- ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಅವರು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ ಏಳು ದಿನಗಳ ಕಾಲ ನಡೆಯುವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಘಟಕದ ಸಂಯೋಜನಾಧಿಕಾರಿ ಡಾ.ಎ. ಶ್ರೀಧರ್, ಲಲಿತಕಲಾ ನಿಕಾಯದ ಡೀನ್‌ ಡಾ. ಶಿವಾನಂದ ಎಸ್. ವಿರಕ್ತಮಠ ಇದ್ದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕಲಹ, ದ್ವೇಷ ಮತ್ತು ಕೋಮುಗಲಭೆಗಳು ನಡೆಯುತ್ತಿವೆ. ಇಂತಹ ವಿಚಾರಗಳಿಗೆ ಕಿವಿಗೊಡದೆ ಅಹಿಂಸೆ, ತಿಳಿವಳಿಕೆ, ಪ್ರೀತಿ ಮತ್ತು ಸೌಹಾರ್ದತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು.

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಯುದ್ಧ ಬೇಕಾ ಇಲ್ಲ, ಬುದ್ಧ ಬೇಕಾ ಎನ್ನುವ ಕಾಲ ಇದು ಎಂಬ ಹೇಳಿಕೆಯು ತುಂಬಾ ಪ್ರಸ್ತುತವಾಗಿದೆ ಮತ್ತು ಇದರ ಅರ್ಥವನ್ನು ನಾವು ಆಳವಾಗಿ ಅರ್ಥಮಾಡಿಕೊಳ್ಳಬೇಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಲಹ, ದ್ವೇಷ ಮತ್ತು ಕೋಮುಗಲಭೆಗಳು ನಡೆಯುತ್ತಿವೆ. ಇಂತಹ ವಿಚಾರಗಳಿಗೆ ಕಿವಿಗೊಡದೆ ಅಹಿಂಸೆ, ತಿಳಿವಳಿಕೆ, ಪ್ರೀತಿ ಮತ್ತು ಸೌಹಾರ್ದತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ ಏಳು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವ ನೀಡುವುದು ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆ ಬೆಳೆಸುವುದಾಗಿದೆ. ಶಿಕ್ಷಣದ ಜೊತೆಯಲ್ಲಿ ಸೇವೆ, ಸೇವೆಯ ಜೊತೆಯಲ್ಲಿ ಶಿಕ್ಷಣ ಎನ್ನುವ ಮೂಲ ಆಶಯದಿಂದ ನಾವು ರಾಷ್ಟ್ರೀಯ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್‌ ಡಾ. ಶಿವಾನಂದ ಎಸ್. ವಿರಕ್ತಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರೂ ಸಾರ್ವಜನಿಕ ವಲಯಗಳನ್ನು ಅನುಭವಿಸಿ ಆರಾಧಿಸುವ ಸಂಪ್ರದಾಯವನ್ನು ರೂಢಿಸಿಕೊಂಡು ರಾಷ್ಟ್ರೀಯ ಸೇವೆಗಳಲ್ಲಿ ಭಾಗವಹಿಸಬೇಕು. ಇನ್ನು ಯುವಕರು ಸ್ವಯಂ ಪ್ರೇರಿತರಾಗಿ ರಾಷ್ಟ್ರೀಯ ಸೇವಾ ಯೋಜನೆಗಳ ಮೂಲಕ ರಕ್ತದಾನ ಹಾಗೂ ಆರೋಗ್ಯ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಸದೃಢರಾಗಲು ಸಾಧ್ಯ. ರಾಷ್ಟ್ರೀಯ ಸೇವಾ ಯೋಜನೆಯನ್ನು ಕೇವಲ ಒಂದು ಶಿಬಿರವಾಗಿ ಭಾವಿಸಿಕೊಳ್ಳದೆ ಅದನ್ನು ನಾವು ಮೂಲಭೂತ ಕರ್ತವ್ಯವೆಂದು ತಿಳಿದು, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು, ಪರಿಸರ ಸಂರಕ್ಷಣೆ ಹಾಗೂ ರಾಷ್ಟ್ರ ಸಂರಕ್ಷಣೆಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜನಾಧಿಕಾರಿ ಡಾ. ಎ. ಶ್ರೀಧರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ