ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪಿಯುಸಿ, ಪದವಿ ಮುಗಿಸಿದ ಬಳಿಕ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಪ್ರಶ್ನೆ ಕಾಡಲಿದೆ. ಇದೆಲ್ಲಕ್ಕೂ ಉದ್ಯೋಗ ಮೇಳಗಳು ಪರಿಹಾರ ಒದಗಿಸಲಿವೆ. ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸೂಕ್ತ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಇತರೆಡೆಗಳಿಂದ ವಿವಿಧ ಕಂಪನಿಗಳು ಆಗಮಿಸಿವೆ. ನಿರುದ್ಯೋಗ ಆದಷ್ಟು ಕಡಿಮೆ ಮಾಡಲು ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಮಾತನಾಡಿ, ಜಿಲ್ಲೆಯ ನಿರುದ್ಯೋಗ ನಿವಾರಣೆಯೇ ಉದ್ಯೋಗ ಮೇಳ ಆಯೋಜನೆಯ ಮುಖ್ಯ ಉದ್ದೇಶವಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಬೇಕಾದ ಅನಿವಾರ್ಯತೆ ಕೂಡ ಎದುರಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನಡೆಯುವ ಉದ್ಯೋಗ ಮೇಳಗಳು ಕಂಪನಿಗಳು ಹಾಗೂ ಅಭ್ಯರ್ಥಿಗಳ ಸಮಾಲೋಚನೆಯ ವೇದಿಕೆಯಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಮೇಳಗಳು ಪರಿಪೂರ್ಣ ಅವಕಾಶ ಒದಗಿಸಲಿ ಎಂದು ಹಾರೈಸಿದರು.ಭಾರತೀಯ ಸ್ಟೇಟ್ ಬ್ಯಾಂಕ್‌ನ ಮೈಸೂರು ವಿಭಾಗದ ವ್ಯವಸ್ಥಾಪಕ ಕೆ.ಎಂ.ನಾಗರಾಜು ಮಾತನಾಡಿ, ಎಲ್ಲ ನಿರುದ್ಯೋಗಿಗಳಿಗೂ ಸಾಕಷ್ಟು ಅವಕಾಶಗಳಿವೆ. ವಿವಿಧ ಕಂಪನಿಗಳ ಉದ್ಯೋಗಗಳ ಅರಿವು ನಿರುದ್ಯೋಗಿಗಳಿಗೆ ಅಗತ್ಯವಾಗಿದೆ. ಆಕಾಂಕ್ಷಿಗಳಿಗೂ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಉದ್ಯೋಗ ಆಕಾಂಕ್ಷಿಗಳು ಕೇವಲ ವೇತನದ ಬಗ್ಗೆ ಗಮನ ಹರಿಸುವುದಲ್ಲ. ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆರ್.ಲೋಕನಾಥ್, ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ.ಜಿ.ವಿ.ವೆಂಕಟರಮಣ, ಉದ್ಯೋಗ ಮೇಳದ ಸಂಯೋಜಕ ಡಾ. ಮಹದೇವಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಇದ್ದರು. ಉದ್ಯೋಗ ಮೇಳದಲ್ಲಿ ಟೊಯೋಟಾ, ರಿಲಯನ್ಸ್, ಮಣಿಪಾಲ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪ್ಲಾಂಟೆಕ್, ಟೆಕ್ನೋಟಾಸ್ಕ್, ಭಾರತೀಯ ಜೀವ ವಿಮಾ ಕಂಪನಿ, ನ್ಯೂ ಅಪರ್ಚುನಿಟಿ, ಎಸ್.ಬಿ.ಐ ಲೈಫ್ ಇನ್ಸೂರೆನ್ಸ್, ಜೆ.ಕೆ. ಟೈರ್, ಆಕ್ಸಿಸ್ ಬ್ಯಾಂಕ್, ಆರ್.ಬಿ. ಟೆಕ್, ಮುತ್ತೂಟ್ ಮೈಕ್ರೋ ಪಿನ್, ಮೆಟ್ ಪ್ಲಸ್, ಬಿಎಸ್‌ಎಸ್ ಮೈಕ್ರೋ ಪಿನ್ ಸೇರಿದಂತೆ ೧೭ ಕಂಪನಿಗಳು ಭಾಗವಹಿಸಿದ್ದವು.ಉದ್ಯೋಗ ಮೇಳಕ್ಕೆ ನೋಂದಣಿಯಾದ ಒಟ್ಟು ೭೪೬ ಅಭ್ಯರ್ಥಿಗಳಲ್ಲಿ ೮೩ ಮಂದಿ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಅಂತಿಮ ವರ್ಷದ ವ್ಯಾಸಂಗ ಮುಗಿಸುತ್ತಿರುವ ೧೪೭ ಮಂದಿ ಉದ್ಯೋಗ ನಿರೀಕ್ಷಣೆಯಲ್ಲಿ (ವೇಟಿಂಗ್ ಲಿಸ್ಟ್) ಇದ್ದಾರೆ.