ಕನ್ನಡಪ್ರಭ ವಾರ್ತೆ ಕಲಬುರಗಿ
ದಂಡಗುಂಡ ಬಸವೇಶ್ವರ ದೇವಾಲಯ ಧಾರ್ಮಿಕ ದತ್ತಿ ಇಲಾಖಾ ಆಡಳಿತಕ್ಕೊಳಪಡುವ ಸಂಸ್ಥೆಯಾಗಿದ್ದು ನಿಯಮಗಳಂತೆ ಸದರಿ ದೇವಾಲಯಕ್ಕೆ ಖಾಸಗಿ ಜನ ಸೇರಿಕೊಂಡು ಟ್ರಸ್ಟ್ ರಚಿಸಲು ಅವಕಾಶ ಇರುವುದಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.ತಕ್ಷಣ ಸದರಿ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳು ಕೆಲವರು ಕೂಡಿಕೊಂಡು ದಂಡಗುಂಡ ಬಸವೇಶ್ವರ ದೇವಾಲಯ ಟ್ರಸ್ಟ್ ರಚಿಸಿರುವ ಬಗ್ಗೆ ದೂರುಗಳಿದ್ದು ತಕ್ಷಣ ಪರಿಶೀಲನೆ ನಡೆಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾಧಿಕಾರಿಗೆ ಸೂಚಿಸಿ ಆದೇಶ ಹೊಡಿಸಿದ್ದಾರೆ.
ಈ ಆದೇಶ ದಂಡಗುಂಡ ಬಸವೇಶ್ವರ ದೇವಾಲಯ ಟ್ರಸ್ಟ್ ವಿಚಾರದಲ್ಲಿ ಹುಟ್ಟಿಕೊಂಡಿರುವ ವಿವಾದಕ್ಕೆ ಹೊಸ ತಿರುವು ನೀಡಿದೆ. ಈ ಮಂದಿರಕ್ಕೆ ಖಾಸಗಿ ವ್ಯಕ್ತಿಗಳು ಸೇರಿಕೊಂಡು ಟ್ರಸ್ಟ್ ರಚಿಸಿದ್ದಾರೆ. ಅಲ್ಲಿರುವ ಸ್ವಾಮೀಜಿಗಳನ್ನು ತೆರವು ಮಾಡಿಸಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಮಠ ಕೆಡವಿದ್ದಾರೆಂಬ ದೂರುಗಳಿದ್ದವು. ಭಕ್ತರೂ ಈ ಬಗ್ಗೆ ಸುದ್ದಿಗೋಷ್ಠಿ ನಡೆಸು ಆರೋಪಿಸಿದ್ದರು.ಇದೀಗ ಈ ಪ್ರಕರಣದಲ್ಲಿ ಧಾರ್ಮಿಕ ದತ್ತಿ ಇಲಾಖೆ ಸೇಡಂ ಸಹಾಯಕ ಆಯುಕ್ತರ ವರದಿಯನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿದ್ದು ಈ ಮಂದಿರದಡಿ ಪ್ರತ್ಯೇಕ ಟ್ರಸ್ಟ್ ರಚನೆಗೆ ಕಾನೂನಿನಲ್ಲಿ ಅವಕಾಶವೇ ಇಲ್ಲವೆಂದು ಹೇಳಿರುವುದು ಗಮನ ಸೆಳೆದಿದೆ.
ಇಲ್ಲಿ ಶುಕ್ರವಾರ ದಂಡಗುಂಡ ಸಂಗನಬಸವ ಸ್ವಾಮೀಜಿ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲಾಖೆಯ ಆದೇಶವನ್ನು ಮಾಧ್ಯಮಗಳಿಗೆ ನೀಡಿರುವ ಶ್ರೀರಾಮಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿಯವರು ದಂಡಗುಂಡ ಮಠದಲ್ಲಿ ಅಕ್ರಮ ಕೂಟ ರಚಿಸಿ ಟ್ರಸ್ಟ್ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರೇ ಅಲ್ಲಿದ್ದ ಕಾರಣ ತಕ್ಷಣ ಟ್ರಸ್ಟ್‌ಗೆ ಹಸಿರು ನಿಶಾನೆ ನೀಡುವಂತೆಯೇ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಆದರೀಗ ಕಾನೂನಿನಲ್ಲಿ ದಕ್ಕೆ ಅವಕಾಶವಿಲ್ಲವೆಂಬ ಸಂಗತಿ ಇಲಾಖೆಯೇ ಹೇಳಿರುವುದು ಇಲ್ಲಿನ ಅಕ್ರಮಗಳಿಗೆ ತೆರೆ ಎಳೆದಿದೆ ಎಂದರು.ಈಗಾಗಲೇ ಕಾಂಗ್ರೆಸ್ ಮುಖಂಡ ಭಾಗಣಗೌಡ ಸಂಕನೂರ್, ಎಂಎಲ್‌ಸಿ ಬಿಜಿ ಪಾಟೀಲ್ ಅಧ್ಯಕ್ಷ, ಉಪಾಧ್ಯಕ್ಷರಾಗಿರುವ ಟ್ರಸ್ಟ್‌ನವರು ಅಲ್ಲಿರುವ ಸ್ವಾಮೀಜಿಗಳನ್ನು ಹೊರಹಾಕಿದ್ದಾರೆ. ಅವರು ಅಳೋಳ್ಳಿ ಮಠದಲ್ಲಿ ತಂಗಿದ್ದಾರೆ. ಮಠ ಕೆಡವಲಾಗಿದೆ. ಇವೆಲ್ಲ ಚಟುವಟಿಕೆಗಳಿಗೆ ಭಕ್ತರ ವಿರೋಧವಿದ್ದರೂ ಸ್ವ ಹಿತಾಸಕ್ತಿಯೊಂದಿಗೆ ಇಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ದೂರಿದರು.
ಕಳೆದ ಮಾರ್ಚ್‌ನಲ್ಲಿಯೇ ದಂಡಗುಂಡದಲ್ಲಿ ಅಕ್ರಮ ಟ್ರಸ್ಟ್ ರಚನೆಯಾಗಿತ್ತು. ಕಾನೂನು ಉಲ್ಲಂಘಿಸಿ ಟ್ರಸ್ಟ್ ರಚನೆಯಾಗುತ್ತಿರುವ ಅರಿವಿದ್ದರೂ ಸಚಿವರು, ಆಡಳಿತ ಎಲ್ಲರೂ ಅದಕ್ಕೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿತ್ತು. ಆದರೀಗ ಆಯುಕ್ತಾಲಯದವರು 2015ರ ಕಾಯ್ದೆಯಂತೆ ಟ್ರಸ್ಟ್ ರಚನೆಗೆ ಅವಕಾಸವಿಲ್ಲವೆಂದು ಹೇಳಿದ್ದಲ್ಲದೆ ಮಂದಿರದಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸಿ ತಕ್ಷಣ ಕ್ರಮಕ್ಕೆ ಸೂಚಿಸಿದೆ. ಡಿಸಿಯವರು ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಆಂದೋಲಾ ಶ್ರೀಗಳು ಹೇಳಿದ್ದಾರೆ.ಇದೇ ಜು.24ರಿಂದ ಶ್ರಾವಣ ಶುರುವಾಗಲಿದೆ. ಈ ಪವಿತ್ರ ಮಾಸದಲ್ಲಿನ ಆಚರಣೆಗಳನ್ನು ಸಂಗನಬಸವ ಶಿವಾಚಾರ್ಯರು ನಡೆಸುವತಹ ವಾತಾವರಣ ದಂಡಗುಂಡ ಬಸವೇಶ್ವರ ಮಂದಿರದಲ್ಲಿ ನಿರ್ಮಾಣವಾಗಬೇಕು. ಅದಕ್ಕೆ ಡಿಸಿಯವರು ಮುಂದಾಗಲಿ. ಸ್ವಾಮೀಜಿಗಳಿಗೆ ಬೆದರಿಕೆ ಇದ್ದು ಗನ್‌ಮ್ಯಾನ್ ಕೊಡಲಿ. ಅಲ್ಲೇನಾದರೂ ಅಹಿತಕರ ಘಟನೆಯಾದಲ್ಲಿ ಜಿಲ್ಲಾಡಳಿತವೇ ಹೊಣೆಯಾಗುತ್ತದೆ.
ಸಿದ್ದಲಿಂಗ ಸ್ವಾಮೀಜಿ, ಕರುಣೇಶ್ವರ ಮಠ, ಆಂದೋಲಾ, ಕಲಬುರಗಿ